ಮುಂಬೈ ದಾಳಿ ರೂವಾರಿ ಹೆಡ್ಲಿ ಜೀವಂತವಿದ್ದಾನೆಯೇ ಎಂಬ ಪ್ರಶ್ನೆಗೆ ಅಮೆರಿಕ ರಾಯಭಾರಿ ಪ್ರತಿಕ್ರಿಯೆ ಹೀಗಿತ್ತು…

ಚಿಕಾಗೊ: 26/11 ಮುಂಬೈ ದಾಳಿಯ ಸೂತ್ರಧಾರ ಪಾಕಿಸ್ತಾನಿ-ಅಮೆರಿಕನ್ ಡೇವಿಡ್ ಹೆಡ್ಲಿ ಮೇಲೆ ಅಮೆರಿಕ ಜೈಲಿನಲ್ಲಿ ದಾಳಿ ನಡೆದಿದ್ದು ಗಂಭೀರ ಸ್ಥಿತಿಯಲ್ಲಿದ್ದಾನೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತ ಬದುಕಿದ್ದಾನೆಯೇ ಇಲ್ಲವೇ ಎಂಬ ಪ್ರಶ್ನೆಯನ್ನು ಕೇಳಿದರೆ ಅಮೆರಿಕ ರಾಯಭಾರಿ ಪ್ರತಿಕ್ರಿಯಿಸಿದ ರೀತಿ ಅನುಮಾನ ಹುಟ್ಟಿಸುವಂತಿದೆ.

ಭಾರತದಲ್ಲಿರುವ ಅಮೆರಿಕ ರಾಯಭಾರಿ ಕೆನಿತ್​ ಜಸ್ಟರ್​ ಅವರು ಇಂದು ದೆಹಲಿಯಲ್ಲಿ ಮಾಧ್ಯಮದವರನ್ನು ಎದುರಾದರು. ಈ ವೇಳೆ ಕೆನಿತ್​ ಅವರಿಗೆ ಪ್ರಶ್ನೆ ಹಾಕಿದ ಮಾಧ್ಯಮದವರು,”ಮುಂಬೈ ದಾಳಿ ರೂವಾರಿ ಡೇವಿಡ್​ ಕೋಲ್ಮನ್​ ಹೆಡ್ಲಿ, ಬದುಕಿದ್ದಾನೆಯೇ ಅಥವಾ ಜೀವನ್ಮರಣ ಹೋರಾಟ ನಡೆಸುತ್ತಿದ್ದಾನೆಯೇ ,” ಎಂದು ಕೇಳಿದರು.

ಆದರೆ, ಇದಕ್ಕೆ ಉತ್ತರಿಸಲು ಇಷ್ಟಪಡದ ಕೆನಿತ್​ ಮಾತು ನಿರಾಕರಿಸಿ ಹೋರಟೇ ಬಿಟ್ಟರು. ಅವರ ಪ್ರತಿಕ್ರಿಯೆ ಹಲವು ಅನುಮಾನಗಳಿಗೆ ಈಡು ಮಾಡಿತು.

ಷಿಕಾಗೋದಲ್ಲಿರುವ ಮೆಟ್ರೋಪಾಲಿಟನ್ ಕರೆಕ್ಷನ್ ಸೆಂಟರ್ ನಲ್ಲಿ ಇಬ್ಬರು ಸಹಕೈದಿಗಳಿಂದ ಹಲ್ಲೆಗೊಳಗಾಗಿರುವ ಹೆಡ್ಲಿಯನ್ನು ನಾರ್ತ್ ಇವಾನ್ಸ್ಟನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಜು.8 ರಂದು ಇಬ್ಬರು ಸಹ ಕೈದಿಗಳು ಹೆಡ್ಲಿ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಈ ವೇಳೆ ಪೊಲೀಸರ ಮೇಲೆಯೂ ಹಲ್ಲೆಗಳಾಗಿವೆ ಎಂದು ವರದಿಗಳಾಗಿವೆ.

26/11 ರ ಮುಂಬೈ ದಾಳಿಯಲ್ಲಿ ತನ್ನ ಕೈವಾಡ ಇರುವುದನ್ನು 2016 ರ ಫೆಬ್ರವರಿಯಲ್ಲಿ ಹೆಡ್ಲಿ ಮುಂಬೈ ಕೋರ್ಟ್ ನಲ್ಲಿ ನಡೆದ ವಿಡಿಯೋ ಕಾನ್ಫರೆನ್ಸ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದ.