ವಾಷಿಂಗ್ಟನ್: ಅಮೆರಿಕ ಜೈಲಿನಲ್ಲಿ ದಾಳಿಗೊಳಗಾಗಿ ಆಸ್ಪತ್ರೆ ಸೇರಿದ್ದ 26/11 ರ ಮುಂಬೈ ದಾಳಿ ರೂವಾರಿ ಪಾಕಿಸ್ತಾನಿ-ಅಮೆರಿಕನ್ ಡೆವಿಡ್ ಹೆಡ್ಲಿ ಈಗ ಆಸ್ಪತ್ರೆಯಲ್ಲೂ ಇಲ್ಲ, ಚಿಕಾಗೋಗೂ ಹೋಗಿಲ್ಲ ಎಂದು ಆತನ ವಕೀಲ ಜಾಹ್ನ್ ಥೀಸ್ ಹೇಳಿದ್ದಾರೆ.
ಹೆಡ್ಲಿ ಕೈದಿಗಳಿಂದ ದಾಳಿಗೊಳಗಾಗಿ ಗಾಯಗೊಂಡ ಬಳಿಕ ಆಸ್ಪತ್ರೆ ಸೇರಿ ಅಲ್ಲಿಯೇ ಇದ್ದಾನೆ ಎಂಬ ವರದಿಯನ್ನು ಅವರು ತಿರಸ್ಕರಿಸಿದ್ದಾರೆ.
ಹೆಡ್ಲಿ ಇರುವ ಜಾಗವನ್ನು ನಾನು ಬಹಿರಂಗ ಪಡಿಸುವಂತಿಲ್ಲ. ಆದರೆ ಚಿಕಾಗೋದಲ್ಲಾಗಲೀ, ಆಸ್ಪತ್ರೆಯಲ್ಲಾಗಲೀ ಅವನು ಇಲ್ಲ. ನಾನು ಆತನೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಮಾತುಕತೆ ನಡೆಸುತ್ತಿದ್ದೇನೆ. ಪತ್ರಿಕೆಗಳು ನೀಡಿದ ವರದಿ ಸತ್ಯವಲ್ಲ ಎಂದು ಪಿಟಿಐ ನ್ಯೂಸ್ ಏಜೆನ್ಸಿಗೆ ತಿಳಿಸಿದ್ದಾರೆ.
ಅಮೆರಿಕ ಜೈಲಿನಲ್ಲಿ ಇಬ್ಬರು ಕೈದಿಗಳಿಂದ ದಾಳಿಗೊಳಗಾಗಿದ್ದ ಹೆಡ್ಲಿ ಗಂಭೀರ ಗಾಯಗೊಂಡಿದ್ದ. ಆತನನ್ನು ಚಿಕಾಗೋ ನಾರ್ತ್ ಇವಾನ್ಸ್ಟನ್ ಆಸ್ಪತ್ರೆಯ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿದ್ದವು. ಆದರೆ ಅದನ್ನು ಹೆಡ್ಲಿ ಪರ ವಾದಿಸುತ್ತಿರುವ ವಕೀಲರು ಅಲ್ಲಗಳೆದಿದ್ದಾರೆ.