ಸಿಇಒ, ಡಿಎಸ್ ವಿರುದ್ಧ ಎಸಿಬಿಗೆ ಮತ್ತೊಂದು ದೂರು

ದಾವಣಗೆರೆ: ಜಿಪಂ ಸಿಇಒ ಎಸ್. ಅಶ್ವತಿ ಮತ್ತು ಉಪ ಕಾರ್ಯದರ್ಶಿ ಜಿ.ಎಸ್. ಷಡಕ್ಷರಪ್ಪ ವಿರುದ್ಧ ಇಲ್ಲಿನ ಭ್ರಷ್ಟಾಚಾರ ನಿಗ್ರಹ ದಳದಲ್ಲಿ ಮತ್ತೊಂದು ದೂರು ದಾಖಲಾಗಿದೆ.

ಜಿಪಂ ಅಧ್ಯಕ್ಷೆ ಕೆ.ಆರ್. ಜಯಶೀಲಾ ಅವರು ಇತ್ತೀಚೆಗೆ ಎಸಿಬಿಗೆ ದೂರು ನೀಡಿದ ವಿಚಾರ ಸಂಚಲನ ಸೃಷ್ಟಿಸಿರುವಾಗಲೇ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಿನ್ನಸಮುದ್ರ ಶೇಖರನಾಯ್ಕ ಗುರುವಾರ ಎಸಿಬಿ ಡಿವೈಎಸ್ಪಿಗೆ ದೂರು ನೀಡಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ 2010 ರಿಂದ ಕಾನೂನು ಬಾಹಿರವಾಗಿ 6 ತಾಲೂಕುಗಳ ಇಒ, ಪಂಚಾಯತ್‌ರಾಜ್ ಇಲಾಖೆಯ ಎಇಇಗಳು ಮತ್ತು ಪಿಡಿಒಗಳು ಶಾಮೀಲಾಗಿ ಭ್ರಷ್ಟಾಚಾರ ನಡೆಸಿದ್ದಾರೆ. ಆ ಭ್ರಷ್ಟಾಚಾರ ಪ್ರಕರಣಗಳನ್ನು ಸಿಇಒ ಮತ್ತು ಉಪ ಕಾರ್ಯದರ್ಶಿ ಮುಚ್ಚಿಹಾಕಿದ್ದಾರೆ ಎಂಬುದು ಪ್ರಮುಖ ಆರೋಪ.

ಖಾತ್ರಿ ಯೋಜನೆಯಡಿ ನಡೆದಿರುವ ಅವ್ಯವಹಾರದ ಬಗ್ಗೆ 2010ನೇ ಸಾಲಿನಿಂದ ಮುಕ್ತ ತನಿಖೆ ನಡೆಸುವಂತೆ ಪಂಚಾಯತ್‌ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ದೂರು ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಆಯುಕ್ತರ ನಿರ್ದೇಶನದಂತೆ ದಾವಣಗೆರೆ ಸಿಇಒ ಅವರಿಗೆ ಹಲವು ಉಲ್ಲೇಖ, ನೆನಪೋಲೆಗಳನ್ನು ನೀಡಿದರೂ ತನಿಖೆ ಮಾಡಿಲ್ಲ ಎಂದು ದೂರಿನಲ್ಲಿ ಹೇಳಿದ್ದಾರೆ.

ಈ ಬಗ್ಗೆ ಕಳೆದ ಅ. 4ರಂದು ಸರ್ಕಾರಕ್ಕೆ ಸುಳ್ಳು ಮಾಹಿತಿ ನೀಡಿದ್ದಾರೆ. ಆದ್ದರಿಂದ ಇವರ ವಿರುದ್ಧ ತನಿಖೆ ನಡೆಸಿ ದುರ್ಬಳಕೆಯಾಗಿರುವ ಸಾರ್ವಜನಿಕರ ಹಣವನ್ನು ವಸೂಲಿ ಮಾಡಿ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಉದ್ಯೋಗ ಖಾತ್ರಿ ಯೋಜನೆಯಲ್ಲಿ ಬೋಗಸ್ ಆಗಿ ಹೆಚ್ಚು ಕೂಲಿ ಆಳುಗಳ ಲೆಕ್ಕ ತೋರಿಸಲಾಗಿದೆ. ಕೂಲಿ ಕಾರ್ಮಿಕರ ಸಹಿಗಳನ್ನು ಫೋರ್ಜರಿ ಮಾಡಲಾಗಿದೆ. ಯಾವುದೇ ಗ್ರಾಪಂನಲ್ಲಿ ಸಾಮಗ್ರಿ ಖರೀದಿಸಿದ ಬಗ್ಗೆ ಉಲ್ಲೇಖವಿಲ್ಲ ಎಂದು ಆರೋಪಿಸಿದ್ದಾರೆ.

ಎಸಿಬಿಗೆ ದೂರು ನೀಡಿದ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಲ್ಲಶೆಟ್ಟಿಹಳ್ಳಿ ಚನ್ನಬಸಪ್ಪ, ಮುಖಂಡರಾದ ಕಾಳೇಶ್, ಚೇತನ್, ಅಣ್ಣಪ್ಪ, ಲಿಂಗರಾಜು, ರವಿಗೌಡ, ತೆಲಿಗಿ ಸುರೇಶಪ್ಪ, ಮಲ್ಲೇಶಪ್ಪ ಇತರರಿದ್ದರು.