ಸಾತ್ವಿಕ ಆಹಾರದಿಂದ ಮಾನಸಿಕ ದೃಢತೆ   ಡಾ.ಶಾಂತಲಿಂಗ  ಶ್ರೀಗಳ ಹೇಳಿಕೆ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ

1 Min Read
ಸಾತ್ವಿಕ ಆಹಾರದಿಂದ ಮಾನಸಿಕ ದೃಢತೆ   ಡಾ.ಶಾಂತಲಿಂಗ  ಶ್ರೀಗಳ ಹೇಳಿಕೆ  ಅಂತಾರಾಷ್ಟ್ರೀಯ ಯೋಗ ದಿನಾಚರಣೆ

ದಾವಣಗೆರೆ: ಸಾತ್ವಿಕ ಶುದ್ಧ ಆಹಾರ ಸೇವನೆಯಿಂದ ದೇಹದ ಆರೋಗ್ಯದ ಜತೆಗೆ ಮಾನಸಿಕ ದೃಢತೆ ಹೊಂದಬಹುದು ಎಂದು ಕಣ್ವಕುಪ್ಪಿ ಗವಿಮಠದ ಡಾ.ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ದಾವಣಗೆರೆಯ ಸುಶ್ರುತ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಆವರಣದಲ್ಲಿ ಮಾನವ ವಿಕಾಸ ಫೌಂಡೇಷನ್, ಭಾರತ ವಿಕಾಸ ಪರಿಷತ್ ಗೌತಮ ಶಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.  
ನಾಲಿಗೆಯ ಕ್ಷಣಿಕ ರುಚಿಯ ಆಸೆಗಾಗಿ ನಾವು ದೇಹಕ್ಕೆ ಬೇಡವಾದ ಆಹಾರ ಪದಾರ್ಥಗಳನ್ನು ಸೇವಿಸುತ್ತ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದೇವೆ. ಇದರಿಂದ ದೈಹಿಕ ಹಾಗೂ ಮಾನಸಿಕವಾಗಿಯೂ ಕುಗ್ಗುತ್ತಿದ್ದೇವೆ ಎಂದು ಹೇಳಿದರು.  ಹಿಂದೆಲ್ಲ ಹಣ, ವಿದ್ಯೆ, ವಸತಿ ಸಂಪರ್ಕ, ಆಹಾರ ಧಾನ್ಯಗಳ  ಕೊರತೆ ಇದ್ದಾಗಲೂ ಸಹ ಶಾಂತಿ-ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಸ್ಥಾನಮಾನ, ಎಲ್ಲ ಸೌಕರ್ಯವಿದ್ದರೂ ಆರೋಗ್ಯವಿಲ್ಲದ ಜೀವನ ಸಾಗಿಸುವ ಸ್ಥಿತಿ ಬಂದಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಯೋಗ, ಧ್ಯಾನ ಮತ್ತು ಪ್ರಾಣಾಯಾಮಗಳಿಗೆ ಪ್ರತಿನಿತ್ಯ ಒಂದು ಗಂಟೆ ಮೀಸಲಿಟ್ಟಾಗ ದೇಹದ ಅಂಗಾಂಗಗಳು ಶಕ್ತಿಯುತವಾಗುವುದರ ಜತೆಗೆ ಮಾನಸಿಕ ಏಕಾಗ್ರತೆ ಸಾಧ್ಯವಾಗಲಿದೆ. ತಂತ್ರಜ್ಞಾನದಲ್ಲಿ ನಾವು ಮುಂದುವರೆಯದಿದ್ದರೂ ಪ್ರಾಚೀನ ಪದ್ಧ್ದತಿಯಂತೆ ಜೀವನ ನಡೆಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ ಬಸವಂತಪ್ಪ, ಕಾರ್ಯದರ್ಶಿ ಡಾ.ಬಿ.ಜಿ. ಸತೀಶ್ ಇದ್ದರು. ಕಾಲೇಜು ಅಧ್ಯಾಪಕಿ ಡಾ.ಸೌಮ್ಯಾ ಅವರು ಯೋಗ ಮತ್ತು ಪ್ರಾಣಾಯಾಮ ಪ್ರಾತ್ಯಕ್ಷಿಕೆ ಹೇಳಿಕೊಟ್ಟರು. ಡಾ. ಚಿನ್ಮಯಿ ಹಾಗೂ ಡಾ.ಸಹನಾ ಕಾರ್ಯಕ್ರಮ ನಿರ್ವಹಿಸಿದರು. ಎಸ್.ಕೃತಿಕಾ ಸಂಗಡಿಗರು ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಅಕ್ಬರ್ ಖಾನ್ ಸ್ವಾಗತಿಸಿದರು.

See also  ಹೋರಾಟಕ್ಕೆ ಅಣಿಯಾದ ರೈತರು
Share This Article