blank

ವಿಶ್ವ ಕನ್ನಡ ಸಮ್ಮೇಳನಕ್ಕೆ ನಿಗದಿಪಡಿಸಿ ದಿನಾಂಕ   ಸಾಹಿತ್ಯಾಸಕ್ತರ ಒತ್ತಡ

blank

ದಾವಣಗೆರೆ: ದಾವಣಗೆರೆಯಲ್ಲೇ ವಿಶ್ವ ಕನ್ನಡ ಸಮ್ಮೇಳನ ಆಯೋಜಿಸಬೇಕು. ಕೂಡಲೇ ದಿನಾಂಕ ನಿಗದಿಪಡಿಸುವ ಸಂಬಂಧ, ಕ್ರಿಯಾ ಸಮಿತಿ ರಚಿಸುವ ಮೂಲಕ ಸರ್ಕಾರಕ್ಕೆ ಹಕ್ಕೊತ್ತಾಯ ಮಂಡಿಸಲು ಜಿಲ್ಲೆಯ ಸಾಹಿತ್ಯಾಸಕ್ತರು ನಿರ್ಣಯಿಸಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಕಚೇರಿಯಲ್ಲಿ, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಅನುದಾನ ನಿಗದಿಪಡಿಸಬೇಕು. ಈ ಸಂಬಂಧ ಜಿಲ್ಲಾ ಸಚಿವರು ಮುಖ್ಯಮಂತ್ರಿ ಅವರಲ್ಲಿ ಒತ್ತಡ ತರಬೇಕೆಂದು ಆಗ್ರಹಿಸಲಾಯಿತು.
 ದೊಡ್ಡ ಸಂಖ್ಯೆಯಲ್ಲಿ ನಿಯೋಗ ತೆರಳಿ ಜಿಲ್ಲಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರಿಗೆ ಮನವರಿಕೆ ಮಾಡಿಕೊಡುವುದು. ಜ.5ರಂದು ನಗರಕ್ಕೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವರ ನೇತೃತ್ವದಲ್ಲೇ ಮನವಿಪತ್ರ ಸಲ್ಲಿಸುವುದು ಹಾಗೂ ಮುಂದಿನ ಹೆಜ್ಜೆಯಾಗಿ ಸಿಎಂ ಜತೆ ಪ್ರತ್ಯೇಕ ಸಭೆ ನಡೆಸಲು ಸಭೆ ತೀರ್ಮಾನಿಸಿತು.  
 ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ದಾವಣಗೆರೆಯಲ್ಲಿ ವಿಶ್ವ ಸಮ್ಮೇಳನ ನಡೆಸಲು 2017ರಲ್ಲಿ ಸರ್ಕಾರ 30 ಕೋಟಿ ರೂ. ಘೋಷಣೆ ಮಾಡಿ, 500 ಪುಟಗಳ ವರದಿ ಮಂಡನೆಯಾಗಿತ್ತು. ಅನೇಕ ಬಾರಿ ಸಂಸ್ಥೆಯಿಂದ ಒತ್ತಡ ತಂದಾಗ್ಯೂ ಕಾರಣಾಂತರದಿಂದ ಜಾರಿಯಾಗಿಲ್ಲ ಎಂದರು.
 ಜಿಲ್ಲಾ ಸಚಿವರು, ಸಂಸದರು ಸಮ್ಮೇಳನ ನಡೆಸಲು ಸ್ಪಂದಿಸುವ ಭಾವನೆ ಇದೆ. 2025ರಲ್ಲೇ ಸಮ್ಮೇಳನ ಆಗಬೇಕಿದೆ. ಈ ಸಂಬಂಧ ಜನರ ಧ್ವನಿ ಗಟ್ಟಿಯಾಗಬೇಕು. ಆಗ ಮಾತ್ರ ಕೂಗಿಗೆ ಶಕ್ತಿ ಬರಲಿದೆ. ಸ್ಪಂದಿಸದಿದ್ದಲ್ಲಿ ಸರ್ಕಾರದ ವಿರುದ್ಧ ನಿಲ್ಲುವ ಬಗ್ಗೆಯೂ ಜನರು ಎಚ್ಚರಿಕೆ ನೀಡಬೇಕಿದೆ ಎಂದು ಹೇಳಿದರು.
 ಹಿರಿಯ ಪತ್ರಕರ್ತ ಬಿ.ಎನ್. ಮಲ್ಲೇಶ್ ಮಾತನಾಡಿ ವಿಶ್ವ ಕನ್ನಡ ಸಮ್ಮೇಳನ ನಡೆಸುವ ಸಂಬಂಧ ಈ ಹಿಂದೆಯೇ ಅನೇಕ ಸಮಿತಿಗಳ ರಚನೆಯಾಗಿತ್ತು. ಎಸ್‌ಎಸ್ ಮಲ್ಲಿಕಾರ್ಜುನ ಅವರು ಸಮ್ಮೇಳನ ವಿಚಾರದಲ್ಲಿ ಸಕಾರಾತ್ಮಕವಾಗಿದ್ದಾರೆ. ನಿಯೋಗ ತೆರಳಿ ಅವರಿಗೆ ಮನವರಿಕೆ ಮಾಡಿಕೊಡೋಣ ಎಂದು ಹೇಳಿದರು.
 ಸಮ್ಮೇಳನ ಆಯೋಜನೆಗಾಗಿ ಜಿಲ್ಲಾ ಕಸಾಪ ಅನೇಕ ಸಂದರ್ಭದಲ್ಲಿ ಮೊದಲಿನಿಂದಲೂ ಧ್ವನಿ ಎತ್ತಿದೆ. ಕನ್ನಡಪರ ಹಾಗೂ ರೈತ ಸಂಘಟನೆಗಳು ಹಾಗೂ ಜಿಲ್ಲೆಯ ಎಲ್ಲ ಮಠಾಧೀಶರೂ ದನಿಗೂಡಿಸಬೇಕಿದೆ. ಆಗ ಮಾತ್ರವೇ ಬೇಡಿಕೆಗೆ ತೂಕ ಹೆಚ್ಚಲಿದೆ ಎಂದು ಆಶಿಸಿದರು.
 ಹಿರಿಯ ವ್ಯಂಗ್ಯಚಿತ್ರಕಾರ ಎಚ್.ಬಿ.ಮಂಜುನಾಥ್ ಮಾತನಾಡಿ ದಾವಣಗೆರೆಯಲ್ಲಿ ಮೂರನೇ ವಿಶ್ವ ಕನ್ನಡ ಸಮ್ಮೇಳನ ಸಮ್ಮೇಳನ ಘೋಷಣೆ ಸರ್ಕಾರವೇ ಮಾಡಿಕೊಂಡ ಬದ್ಧತೆ. ಇದರ ಬಗ್ಗೆ ಸರ್ಕಾರವನ್ನು  ಎಚ್ಚರಿಸಬೇಕಿದೆ. ರಾಜಕೀಯ, ಸಾಂಸ್ಕೃತಿಕ, ರಾಜಕೀಯೇತರ ಎಲ್ಲ ಆಯಾಮದಲ್ಲೂ ಅನುಕೂಲವಾದ ದಾವಣಗೆರೆಯಲ್ಲಿ ಸಮ್ಮೇಳನ ಆಗಬೇಕಿದೆ ಎಂದರು.
 ಮೈಸೂರಲ್ಲಿ ಪ್ರಥಮ ವಿಶ್ವ ಕನ್ನಡ ಸಮ್ಮೇಳನ ಉತ್ತಮವಾಗಿ ನಡೆದಿತ್ತು. ಬೆಳಗಾವಿಯಲ್ಲಿ ಎರಡನೇ ಸಮ್ಮೇಳನ ಜಾತ್ರೆಯಾಗಿ ರೂಪುಗೊಂಡಿತು. ದಾವಣಗೆರೆಯಲ್ಲಿ ನಡೆದರೆ ಅತ್ಯುತ್ತಮವಾಗಿ ಆಯೋಜನೆಯಾಗಬಹುದು ಎಂದು ಹೇಳಿದರು.
 ಕನ್ನಡಪರ ಹೋರಾಟಗಾರ ಬಂಕಾಪುರ ಚನ್ನಬಸಪ್ಪ ಮಾತನಾಡಿ ರಾಜ್ಯದ ಮಧ್ಯವರ್ತಿ ಸ್ಥಳವಾದ ದಾವಣಗೆರೆ ರಾಜಧಾನಿ ಆಗಬೇಕಿತ್ತು. ಹಾಗೆ ಆದಲ್ಲಿ ರಾಜ್ಯದ ಎಲ್ಲ ಭಾಗದ ಜನರಿಗೂ ಅನುಕೂಲವಾಗಲಿದೆ. ವಿಶ್ವ ಕನ್ನಡ ಸಮ್ಮೇಳನ ನಡೆದಲ್ಲಿ ರಾಜಧಾನಿ ಕೂಗಿಗೆ ಬಲ ಬರಲಿದೆ ಎಂದರು.
 ಹಿರಿಯ ಪತ್ರಕರ್ತ ನಾಗರಾಜ ಬಡದಾಳ್ ಮಾತನಾಡಿ ಸಮ್ಮೇಳನ ನಡೆಸಲು ಧ್ವನಿಯಾಗಿ ವಿವಿಧ ಅಭಿಯಾನ ನಡೆಸಬೇಕು ಎಂದು ಸಲಹೆ ನೀಡಿದರು.
 ರಂಗಕರ್ಮಿ ಬಾ.ಮ.ಬಸವರಾಜಯ್ಯ ಮಾತನಾಡಿ ಸರ್ಕಾರವೇ ನಡೆಸಿದ್ದ ಸಭೆಗಳ ಹಳೆಯ ಭಾವಚಿತ್ರಗಳನ್ನು ಸರ್ಕಾರದ ಮುಂದಿಟ್ಟು ಸಮ್ಮೇಳನದ ಪ್ರಕ್ರಿಯೆಗೆ ಮತ್ತೆ ಚಾಲನೆ ನೀಡಬೇಕಿದೆ. ಮೂರನೇ ಸಮ್ಮೇಳನದ ಮೂಲಕ ಹೊಸ ಇತಿಹಾಸ ಸೃಷ್ಟಿಸೋಣ ಎಂದು ಹೇಳಿದರು.
 ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ ಸರ್ಕಾರಕ್ಕೆ ಗಡುವು ನೀಡಿ ಆನಂತರ ಸಾಧ್ಯವಾಗದಿದ್ದರೆ ಎಚ್ಚರಿಕೆ ನೀಡೋಣ. ಒಕ್ಕೂಟ ರಚಿಸಿ ಮೂಲಕ ಇದಕ್ಕಾಗಿ ಹೋರಾಟ ಮಾಡುವುದು ಉತ್ತಮ ಎಂದರು.
 ಕ್ರಿಯಾ ಸಮಿತಿ ರಚಿಸಿಕೊಂಡು ಒತ್ತಡ ತರೋಣ ಎಂದು ಪತ್ರಕರ್ತ ವಿ. ಹನುಮಂತಪ್ಪ ಸಲಹೆ ನೀಡಿದರು. ಫಕೃದ್ದೀನ್ ಮಾತನಾಡಿ ಸಮ್ಮೇಳನವನ್ನು ಸರ್ಕಾರ ಘೋಷಿಸಿದೆ, ದಿನಾಂಕ ನಿಗದಿಗಾಗಿ ಒತ್ತಡ ತರಬೇಕಿದೆ ಎಂದರು.
 ಪತ್ರಕರ್ತರಾದ ಸದಾನಂದ ಹೆಗಡೆ, ಮಂಜುನಾಥ ಗೌರಕ್ಕಳವರ್, ಮಂಜುನಾಥ ಏಕಬೋಟೆ, ಜಿಗಳಿ ಪ್ರಕಾಶ್, ಕಸಾಪ ಕೋಶಾಧ್ಯಕ್ಷ ರಾಘವೇಂದ್ರ ನಾಯರಿ, ಲೇಖಕಿಯರ ಸಂಘದ ಜಿಲ್ಲಾಧ್ಯಕ್ಷೆ ವೀಣಾ ಕೃಷ್ಣಮೂರ್ತಿ, ಚುಸಾಪ ಜಿಲ್ಲಾಧ್ಯಕ್ಷ ರಾಜಶೇಖರ ಗುಂಡಗಟ್ಟಿ, ಸಾಹಿತಿ ಗುರುಮೂರ್ತಿ, ಡಾ. ರುದ್ರಮುನಿ ಹಿರೇಮಠ, ಸಿರಾಜ್ ಅಹ್ಮದ್, ಪಾಲಿಕೆ ಮಾಜಿ ಸದಸ್ಯ ಎಚ್.ಎನ್.ಶಿವಕುಮಾರ್ ಮಾತನಾಡಿದರು. ಜಯಮ್ಮ ನೀಲಗುಂದ, ಎಸ್.ಎಂ. ಮಲ್ಲಮ್ಮ, ಸುಮತಿ ಜಯಪ್ಪ, ಸತ್ಯಭಾಮಾ ಮಂಜುನಾಥ್, ರುದ್ರಾಕ್ಷಿಬಾಯಿ, ಶಿವಶಂಕರ್ ಇತರರಿದ್ದರು.
 
 ನಿರೀಕ್ಷಿತ ಸಮ್ಮೇಳನ ನಡೆಸದಿದ್ದಲ್ಲಿ ಸರ್ಕಾರಕ್ಕೇ ತೊಂದರೆ ಆಗಲಿದೆ ಎಂಬ ಎಚ್ಚರಿಕೆ ಸಂದೇಶವನ್ನು ಇಲ್ಲಿಂದ ನೀಡಬೇಕಿದೆ. ದಾವಣಗೆರೆಯಲ್ಲಿ ಆರಂಭಿಸಿದ್ದ ಗೋಕಾಕ್ ವರದಿ ಜಾರಿ ಹೋರಾಟಕ್ಕೆ ಸ್ಪಂದಿಸಿ ಇತರೆಡೆ ಬೇರೆ ರೀತಿಯ ಚಳವಳಿ ನಡೆದವು. ಸಮ್ಮೇಳನ ವಿಚಾರದಲ್ಲೂ ಇಂಥ ಕಾವು ಏರಬೇಕಿದೆ.
 ಬಂಕಾಪುರ ಚನ್ನಬಸಪ್ಪ
 ಕನ್ನಡಪರ ಹೋರಾಟಗಾರ.
 —

Share This Article

ಸ್ನಾನದ ನಂತರವೂ ನಿಮ್ಮ ದೇಹವು ಕೆಟ್ಟ ವಾಸನೆಯನ್ನು ಬೀರುತ್ತದೆಯೇ? ಹೀಗೆ ಮಾಡಿ ನೋಡಿ…. life style

life style: ಕೆಲವರಿಗೆ ದೇಹದಿಂದ ವಾಸನೆ ಬರುವುದನ್ನು ನೀವು ಗಮನಿಸಿರಬಹುದು. ಅದು ಚಳಿಯಾಗಿರಬಹುದು, ಮಳೆಯಾಗಿರಬಹುದು, ಸಣ್ಣ…

ವಕ್ರ ದಂತ ಸಮಸ್ಯೆಗೆ ಸೂಕ್ತ ಪರಿಹಾರ ಅಲೈನರ್

ಹಲ್ಲು ಅಡ್ಡಾದಿಡ್ಡಿ ಇದ್ದರೆ ಅಂಥವರು ಮುಜುಗರದಿಂದ ಮನಬಿಚ್ಚಿ ನಗದಿರುವುದೇ ಹೆಚ್ಚು. ಆದರೆ ಈಗ ಅಷ್ಟಕ್ಕೆಲ್ಲ ಚಿಂತೆ…