ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು

ದಾವಣಗೆರೆ: ಮಧ್ಯ ಕರ್ನಾಟಕ ಬರಿ ಬೆಣ್ಣೆದೋಸೆಗಷ್ಟೆ ಫೇಮಸ್ಸಾಗಿ ಉಳಿದಿಲ್ಲ. ಜನರ ಅಭಿರುಚಿಯಾನುಸಾರ ಸಂಗೀತ, ನೃತ್ಯಕಲೆ ವಿಭಾಗದಲ್ಲೂ ಛಾಪು ಉಳಿಸಿಕೊಂಡ ಹೆಗ್ಗಳಿಕೆಯ ಊರು ದಾವಣಗೆರೆ.

ರಿಯಾಲಿಟಿ ಷೋಗಳ ಹಪಾಹಪಿತನ ಇಲ್ಲದ ಕಾಲದಲ್ಲೇ ಶಾಸ್ತ್ರೀಯ ನೃತ್ಯಕಲೆಗಳನ್ನು ಶಿಸ್ತುಬದ್ಧವಾಗಿ ಕಲಿಸುತ್ತಿದ್ದ ಇತಿಹಾಸ ಇಲ್ಲಿನದು. ಈ ನೆಲದಲ್ಲಿ ಅನೇಕ ನೃತ್ಯ ಸಂಸ್ಥೆಗಳು ಹೆಜ್ಜೆ ಗುರುತನ್ನು ಹಚ್ಚ ಹಸಿರಾಗಿಸಿವೆ. ವಿಭಿನ್ನ ರೀತಿಯ ಡಾನ್ಸ್‌ಗಳ ನಡುವೆಯೂ ಶಾಸ್ತ್ರೀಯ ನೃತ್ಯ ಕಲಾಭ್ಯಾಸಕ್ಕೆ ಕುತ್ತು ಬಂದಿಲ್ಲ. ಇದರಿಂದಲೇ ಅನೇಕರ ತುತ್ತಿನ ಚೀಲ ತುಂಬುತ್ತಿದೆ!

ನಾಟ್ಯಭಾರತಿ ಶಾಸ್ತ್ರೀಯ ನೃತ್ಯ ಸಂಗೀತ ಕಲಾ ಕೇಂದ್ರ ಜಿಲ್ಲೆಯಲ್ಲಿ ಜನ್ಮತಾಳಿದ (1959) ಮೊಟ್ಟಮೊದಲ ನಾಟ್ಯಕಲಾ ಸಂಸ್ಥೆ. ಮದ್ರಾಸ್‌ನ ಜೈಮಿನಿ, ಎವಿಎಂ, ವಾಹಿನಿ ಸ್ಟುಡಿಯೋಗಳ ಮೂಲಕ ತಮಿಳು, ತೆಲುಗು ಚಿತ್ರಗಳಿಗೆ ಡಾನ್ಸ್ ಕೊರಿಯಾಗ್ರಫಿ ಮಾಡುತ್ತಿದ್ದ ಧಾರವಾಡ ಜಿಲ್ಲೆ ಹಂಸಭಾವಿ ಮೂಲದ ನಾಟ್ಯಾಚಾರ್ಯ ಶ್ರೀನಿವಾಸ ಕುಲಕರ್ಣಿ ಅವರು ಇದರ ಸಂಸ್ಥಾಪಕರು. ಮದ್ರಾಸ್, ಮುಂಬಯಿ ನಂತರ ದಾವಣಗೆರೆಯಲ್ಲಿಯೂ ಸಂಸ್ಥೆ ಆರಂಭಿಸಿದರು.

ನಟಿ ವೈಜಯಂತಿ ಮಾಲಾ, ತೆಲುಗಿನ ಅಂಜಲಿದೇವಿ, ಹಿಂದಿ ನಟಿ ರೇಖಾ ಅವರ ತಾಯಿ ಪುಷ್ಪವತಿ, ಕನ್ನಡದ ಮಿನುಗುತಾರೆ ಕಲ್ಪನಾ, ಆರ್.ಟಿ.ರಮಾ, ಆರ್.ಟಿ.ಪ್ರಭಾ, ಚಂದ್ರಕಲಾ, ಅಕ್ಕ ಸಮ್ಮೇಳನದಲ್ಲಿ ನೃತ್ಯ ಪ್ರದರ್ಶಿಸಿದ ಸೀತಾ ಚಪ್ಪರ್, ವಿದುಷಿ ಲಕ್ಷ್ಮಿದೇವಮ್ಮ ಮೊದಲಾದವರಿಗೆಲ್ಲ ಶ್ರೀನಿವಾಸ ಕುಲಕರ್ಣಿ ಅವರೇ ನೃತ್ಯದ ಮೇಷ್ಟ್ರು!

ಅವರ ಮಗ ದಿ.ರಘುನಾಥ ಕುಲಕರ್ಣಿ ಬಳಿಕ ಪತ್ನಿ ರಜನಿ ಕುಲಕರ್ಣಿ, ಮಗ ಶ್ರೀನಿಧಿ ಕುಲಕರ್ಣಿ ಅವರೊಂದಿಗೆ ಸಂಸ್ಥೆ ಗೌರವಾಧ್ಯಕ್ಷ ಎಚ್.ಬಿ.ಮಂಜುನಾಥ್ ಜಯದೇವ ವೃತ್ತದಲ್ಲಿ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

ವಿನೋಬನಗರದಲ್ಲಿ ಶೀ ಶಾರದಾ ಸಂಗೀತ ನೃತ್ಯ ಕಲಾ ಶಾಲೆ 27 (1990) ವರ್ಷದಿಂದ ಸೇವೆ ಸಲ್ಲಿಸುತ್ತಿದೆ. ರಾಜಗೋಪಾಲ ಭಾಗವತ್ ಸಂಗೀತ ಕಲಿಸಿದರೆ, ಪೂರ್ಣಿಮಾ ಭಾಗವತ್ ನೃತ್ಯಕಲೆ ಹೇಳಿಕೊಡುತ್ತಿದ್ದಾರೆ. ಭರತನಾಟ್ಯ ಅದರಲ್ಲೂ ಕಲಾಕ್ಷೇತ್ರ ಶೈಲಿಯ ಡಾನ್ಸ್ ಕಲಿಸಲು ಆದ್ಯತೆ ನೀಡಲಾಗುತ್ತಿದೆ.

ನೃತ್ಯಕಲೆಯಲ್ಲಿ ವಿದ್ವತ್ ನಂತರದಲ್ಲಿ ಪೂರ್ಣ ಮಟ್ಟದ ನೃತ್ಯಕಲಾವಿದರಾಗಲು ಎರಡೂವರೆ ತಾಸುಗಳ ಕಾಲ ಫರ್ಪಾರ್‌ಮೆನ್ಸ್ ನೀಡುವ ಹಂತವೇ ರಂಗ ಪ್ರವೇಶ. ಇಲ್ಲಿನ ನಾಲ್ವರು ವಿದ್ಯಾರ್ಥಿನಿಯರು ರಂಗಪ್ರವೇಶ ಮಾಡಿ ಸೈ ಎನಿಸಿಕೊಂಡಿದ್ದಾರೆ. ಇದು ದಾವಣಗೆರೆ ಪಾಲಿಗೆ ಮಹಾ ಸಾಧನೆಯೂ ಹೌದು.

ಎಂಸಿಸಿ ಎ ಬ್ಲಾಕ್‌ನಲ್ಲಿನ ನೂಪುರ ಕಲಾ ಸಂಸ್ಥೆ ಭರತನಾಟ್ಯ, ಕರ್ನಾಟಕ ಶಾಸ್ತ್ರೀಯ ಪ್ರಕಾರಕ್ಕೆ ಒತ್ತು ನೀಡಿದೆ. 18 ವರ್ಷದ ಈ ಸಂಸ್ಥೆಯನ್ನು ಬೃಂದಾ ಶ್ರೀನಿವಾಸ್ ನಿಭಾಯಿಸುತ್ತಿದ್ದಾರೆ. ಈ ಸಂಸ್ಥೆ ವಿದ್ಯಾರ್ಥಿಗಳು ಅಬುದಾಬಿ, ಸೂರತ್, ದೆಹಲಿ ಮುಂತಾದೆಡೆಯೂ ನೃತ್ಯ ಪ್ರದರ್ಶಿಸಿದ್ದಾರೆ. ಅನೇಕರು ಅಸಾಧಾರಣ ಪ್ರತಿಭೆ, ಕಲಾಶ್ರೀ ಪ್ರಶಸ್ತಿ ಗಳಿಸಿದ್ದಾರೆ.

ಎಂಸಿಸಿ ಬಿ ಬ್ಲಾಕ್‌ನಲ್ಲಿ ನೃತ್ಯ, ವಾದ್ಯ ಸಂಗೀತ ಮತ್ತಿತರೆ ಕಲಾ ಪ್ರಕಾರ ಹೇಳಿಕೊಡುತ್ತಿರುವ ಚಿರಂತನ ಸಂಸ್ಥೆಗೆ 18ರ ಪ್ರಾಯ. ಶಿವಮೊಗ್ಗ, ಮೈಸೂರು, ಬೆಂಗಳೂರಿನ ನುರಿತ ಶಿಕ್ಷಕರು ವೀಕೆಂಡ್‌ನಲ್ಲಿ ತರಗತಿ ನಡೆಸುತ್ತಿದ್ದಾರೆ. ಸಂಸ್ಥೆಯ ಅಧ್ಯಕ್ಷೆ ದೀಪಾ, ಕಾರ್ಯದರ್ಶಿ ಮಾಧವ್ ಪದಕಿ ನಿರ್ವಹಣೆ ಮಾಡುತ್ತಿದ್ದಾರೆ. ಇಲ್ಲಿ ಕಲಿತ ಮಕ್ಕಳು ದುಬೈ, ಕಥಾರ್, ಸಿಂಗಾಪುರ್, ಶ್ರೀಲಂಕಾ ಥೈಲಾಂಡ್, ಲಂಡನ್‌ಗಳಲ್ಲೂ ಪ್ರದರ್ಶಿಸಿದ್ದಾರೆ.

ವಿದ್ಯಾನಗರದಲ್ಲಿ ಭರತಾಂಜಲಿ ಅಕಾಡೆಮಿ ಆಪ್ ಪರ್ಫಾರ್ಮಿಂಗ್ ಆರ್ಟ್ ಸಂಸ್ಥೆಯನ್ನು ಮಂಗಳಾ ಶೇಖರ್ ನಡೆಸುತ್ತಿದ್ದಾರೆ. ದಿ. ಶ್ರೀನಿವಾಸ್ ಮೊದಲಿಯಾರ್, ರಾಮಕೃಷ್ಣಭಟ್ ನೃತ್ಯ ಕಲಿಸಿದ್ದ ಇತಿಹಾಸವಿದೆ. ಹರಿಹರದಲ್ಲೂ ರಾಧಾಮಣಿ ನೃತ್ಯಕಲೆ ಹೇಳಿಕೊಡುತ್ತಿದ್ದಾರೆ.

One Reply to “ಬೆಣ್ಣೆನಗರೀಲಿ ಗೆಜ್ಜೆ ನಾದದ ಹೆಜ್ಜೆ ಗುರುತು”

Comments are closed.