ದೇಶದ ಇತಿಹಾಸ ಮರೆತರೆ ಅವನತಿ

ದಾವಣಗೆರೆ: ಭಾರತೀಯ ಜನತಾ ಪಕ್ಷದ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರ ವತಿಯಿಂದ ನಗರಪಾಲಿಕೆ ಎದುರಿನ ಹುತಾತ್ಮರ ಸ್ಮಾರಕ ಬಳಿ ಶುಕ್ರವಾರ, ಕ್ವಿಟ್ ಇಂಡಿಯಾ ಚಳವಳಿಯ 77ನೇ ವರ್ಷಾಚರಣೆ ಮಾಡಲಾಯಿತು.

ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ನಿವೃತ್ತ ಯೋಧರಾದ ವಿರೂಪಾಕ್ಷಯ್ಯ, ಮಂಜಾನಾಯ್ಕ ಹಾಗೂ ಯೋಧ ರಮೇಶ್ ಅವರನ್ನು ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜಾನಾಯ್ಕ, 1942ರಲ್ಲಿ ದೇಶದಲ್ಲಿ ಮಹಾತ್ಮ ಗಾಂಧೀಜಿ ನೇತೃತ್ವದಲ್ಲಿ ನಡೆದ ಬ್ರಿಟೀಷರೇ ಭಾರತ ಬಿಟ್ಟು ತೊಲಗಿ ಆಂದೋಲನದಲ್ಲಿ ಅನೇಕರ ಬಲಿದಾನವಾಯಿತು. ದೇಶಾಭಿಮಾನದ ಇಂತಹ ಆಚರಣೆ ಪಕ್ಷಾತೀತ ಆಗಬೇಕು. ಪ್ರತಿಯೊಬ್ಬರೂ ಭಾಗವಹಿಸಬೇಕು. ದೇಶದ ಇತಿಹಾಸ ಮರೆತರೆ ಅವನತಿಗೆ ಕಾರಣವಾಗಲಿದೆ ಎಂದರು.

ಕಾಶ್ಮೀರ ಭಾಗದಲ್ಲಿ ತಾವು ಸೈನಿಕನಾಗಿ ಕಾರ್ಯ ನಿರ್ವಹಿಸಿದ್ದು, ಅಲ್ಲಿನವರ ಸಂಕಷ್ಟದ ಬಗ್ಗೆ ತಮಗೆ ಅರಿವಿದೆ. ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370ನೇ ವಿಧಿಯನ್ನು ಕೇಂದ್ರ ಸರ್ಕಾರ ಇತ್ತೀಚೆಗೆ ಹಿಂಪಡೆದದ್ದು ಭಾರತಕ್ಕೆ ಎರಡನೇ ಸ್ವಾತಂತ್ರೃ ಸಿಕ್ಕಂತಾಗಿದೆ. ಅಲ್ಲಿನ ಜನರನ್ನು ಕತ್ತಲಿಂದ ಬೆಳಕಿನೆಡೆಗೆ ತರುವ ಪ್ರಯತ್ನ ಇದಾಗಿದೆ. ಕೇಂದ್ರಕ್ಕೆ ಸೆಲ್ಯೂಟ್ ಹೇಳಬೇಕೆಂದು ತಿಳಿಸಿದರು.

ಪಕ್ಷದ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಕ್ವಿಟ್ ಇಂಡಿಯಾ ಚಳವಳಿ ಭಾಗವಾಗಿ ದಾವಣಗೆರೆಯಲ್ಲೂ 1942ರ ಆ.9ರಂದು ಗೋಲಿಬಾರ್ ನಡೆದಿದ್ದು, ಆರು ಮಂದಿ ಹುತಾತ್ಮರಾಗಿದ್ದರು. ಅವರ ಸ್ಮರಣೆಯನ್ನು ಬಿಜೆಪಿ ಪ್ರತಿ ವರ್ಷವೂ ಮಾಡುತ್ತಾ ಬಂದಿದೆ ಎಂದರು.

ದೇಶಕ್ಕೆ ಸ್ವಾತಂತ್ರೃ ತಂದವರೇ ನಾವು ಎಂಬುದಾಗಿ ಕಾಂಗ್ರೆಸ್ಸಿಗರು ಹೇಳಿಕೊಳ್ಳುತ್ತಾರೆ. ಅವರು ತಂದಿದ್ದು ಕೇವಲ ಭ್ರಷ್ಟಾಚಾರ ಮತ್ತು ದುರಾಡಳಿತ ಮಾತ್ರ. ಸ್ವಾತಂತ್ರೃ ವೀರಸೇನಾನಿಗಳ ಹೋರಾಟವೇ ದೇಶಕ್ಕೆ ಸ್ವಾತಂತ್ರೃ ತಂದುಕೊಟ್ಟಿದೆ ಎಂದು ಹೇಳಿದರು.

ದೇಶದ ಅಖಂಡತೆಗಾಗಿ ಮೋದಿ ಸರ್ಕಾರ ಜಮ್ಮು ಕಾಶ್ಮೀರಕ್ಕಿದ್ದ ವಿಶೇಷಾಧಿಕಾರವನ್ನು ತೆಗೆದುಹಾಕಿ ಒಂದೇ ಸಂವಿಧಾನ, ಒಂದೇ ರಾಷ್ಟ್ರಧ್ವಜ ಹಾಗೂ ಒಬ್ಬರೇ ಪ್ರಧಾನಿ ಎಂಬುದನ್ನು ಸಾಬೀತುಮಾಡಿದ್ದಾರೆ. ಇದರಿಂದ ಶ್ಯಾಮ್‌ಪ್ರಸಾದ್ ಮುಖರ್ಜಿ ಅವರ ಆತ್ಮಕ್ಕೆ ಶಾಂತಿ ದೊರೆತಿದೆ. 370ನೇ ವಿಧಿ ವಿರೋಧಿಸುವ ಮೂಲಕ ಕಾಂಗ್ರೆಸ್ ಹಾಗೂ ಕಮ್ಯುನಿಸ್ಟರು ದೇಶದ್ರೋಹದ ಕೆಲಸ ಮಾಡುತ್ತಿದ್ದಾರೆ ಎಂದರು.

ಬಿಜೆಪಿ ದಕ್ಷಿಣ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ದಾವಣಗೆರೆಯಲ್ಲಿ ಹುತಾತ್ಮರಾದ ಹಳ್ಳೂರು ನಾಗಪ್ಪ, ಅಕ್ಕಸಾಲೆ ವಿರೂಪಾಕ್ಷಪ್ಪ, ಬಿದರಕುಂದಿ ನಿಂಗಪ್ಪ, ಹದಡಿ ನಿಂಗಪ್ಪ, ಹಮಾಲಿ ತಿಮ್ಮಣ್ಣ, ಮಾಗಾನಹಳ್ಳಿ ಹನುಮಂತಪ್ಪ ಅವರ ಹೆಸರನ್ನು ಪಾಲಿಕೆ ನಗರದ ಆರು ವೃತ್ತಗಳಿಗೆ ನಾಮಕರಣ ಮಾಡಬೇಕು ಎಂದರು.

ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಪಿ.ಸಿ.ಶ್ರೀನಿವಾಸ್, ಜಿಲ್ಲಾ ವಕ್ತಾರ ಧನುಷ್, ಶಿವನಗೌಡ ಪಾಟೀಲ್, ಗೌತಮ್ ಜೈನ್, ಶ್ರೇಣಿಕ್ ಜೈನ್, ಟಿಂಕರ್ ಮಂಜಣ್ಣ, ರಮೇಶ್‌ನಾಯ್ಕ, ಸೋಗಿ ಶಾಂತಕುಮಾರ್, ಎಚ್.ಎನ್. ಜಗದೀಶ್, ತಿಪ್ಪೇಸ್ವಾಮಿ, ಶಂಕರಗೌಡ ಬಿರಾದಾರ್, ನವೀನ್‌ಕುಮಾರ್, ಬಿ.ಎಚ್.ಮಂಜುನಾಥ್ ಮತ್ತಿತರರಿದ್ದರು.