ಮೊಳಗಿತು ವಂದೇಮಾತರಂ ಜೈ ಘೋಷ

ದಾವಣಗೆರೆ: ವಿಶಯದಶಮಿ ಆಚರಣೆ ಹಿನ್ನೆಲೆಯಲ್ಲಿ ವಿಶ್ವ ಹಿಂದು ಪರಿಷದ್, ಸಾರ್ವಜನಿಕ ವಿಜಯದಶಮಿ ಮಹೋತ್ಸವ ಸಮಿತಿಯಿಂದ ಸೋಮವಾರ ನಗರದಲ್ಲಿ ಆಟೋಗಳ ರ‌್ಯಾಲಿ ನಡೆಯಿತು.

ಎರಡೂ ಬದಿ ಭಗವಾಧ್ವಜ ಸಿಂಗರಿಸಿದ್ದ ನೂರಾರು ಆಟೋಗಳು ನಗರಾದ್ಯಂತ ಸಂಚರಿಸಿ ಗಮನ ಸೆಳೆದವು. ಕೆಲವು ಆಟೋಗಳ ಮೆಲೆ ದುರ್ಗಾಂಬಿಕಾ ದೇವಿ, ಭಗತ್‌ಸಿಂಗ್, ಸಂಗೊಳ್ಳಿ ರಾಯಣ್ಣ, ಛತ್ರಪತಿ ಶಿವಾಜಿ ಫಲಕಗಳು ಮೆರಗು ನೀಡಿದವು. ವಂದೇಮಾತರಂ, ಭಾರತ್ ಮಾತಾ ಕಿ ಜೈ ಘೋಷಣೆ ಮಾರ್ಗದುದ್ದಕ್ಕೂ ಮೊಳಗಿತು.

ಹೈಸ್ಕೂಲ್ ಮೈದಾನದಲ್ಲಿ ನಗರ ಡಿವೈಎಸ್ಪಿ ನಾಗರಾಜ್ ರ‌್ಯಾಲಿಗೆ ಚಾಲನೆ ನೀಡಿದರು. ಅಲ್ಲಿಂದ ಆರಂಭವಾದ ಜಾಥಾ ಪಿಬಿ ರಸ್ತೆಯ ಮೂಲಕ ವಿನೋಬನಗರ 2ನೇ ಮುಖ್ಯರಸ್ತೆ, ವಾಟರ್ ಟ್ಯಾಂಕ್ ಪಾರ್ಕ್, ಗುಂಡಿ ಮಹದೇವಪ್ಪ ವೃತ್ತ, ವಿದ್ಯಾರ್ಥಿ ಭವನ, ಕೆಟಿಜೆ ನಗರ 8ನೇ ಕ್ರಾಸ್, ಭಗತ್‌ಸಿಂಗ್ ನಗರ, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಪಿಬಿ ರಸ್ತೆ ಮೂಲಕ ಜಯದೇವ ವೃತ್ತ ನಂತರ ಬೀರಲಿಂಗೇಶ್ವರ ದೇವಸ್ಥಾನ ಆವರಣದಲ್ಲಿ ಅಂತ್ಯಗೊಂಡಿತು.

ಶಾಸಕ ಎಸ್.ಎ.ರವೀಂದ್ರನಾಥ್, ಮುಖಂಡರಾದ ಎಚ್.ಎಸ್.ನಾಗರಾಜ್, ಕೆ.ಬಿ.ಶಂಕರನಾರಾಯಣ, ದೇವರಮನಿ ಶಿವಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಯಶವಂತರಾವ್ ಜಾಧವ್, ಅಜಯ್‌ಕುಮಾರ್, ಎನ್.ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಸತೀಶ್ ಪೂಜಾರಿ, ಪಿ.ಸಿ.ಶ್ರೀನಿವಾಸ್, ಗುಬ್ಬಿ ಬಸವರಾಜ್, ಪ್ರಹ್ಲಾದ್ ತೇಲ್ಕರ್, ಪ್ರಸನ್ನಕುಮಾರ್, ಮಲ್ಲೇಶ್ ಪೂಜಾರಿ, ಯೋಗೇಶ್ ಭಟ್, ಮಂಜುನಾಥ್, ರವಿ ಮತ್ತಿತರರಿದ್ದರು.