Davangere, Veterinary Medical, Recruitment,

ಪ್ರಾಥಮಿಕ ಆರೋಗ್ಯ ಚಿಕಿತ್ಸಕರೆಂದು ಪರಿಗಣಿಸಿ

ದಾವಣಗೆರೆ:  ಪಶು ವೈದ್ಯಕೀಯ ಪರೀಕ್ಷಕರನ್ನು ಕರ್ನಾಟಕ ಪಶು ವೈದ್ಯಕೀಯ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಿ ಪ್ರಾಥಮಿಕ ಆರೋಗ್ಯ ಚಿಕಿತ್ಸಕರೆಂದು ಪರಿಗಣಿಸುವಂತೆ ರಾಜ್ಯ ಪಶುವೈದ್ಯಕೀಯ ಪರೀಕ್ಷಕರ ಸಂಘದ ರಾಜ್ಯ ವಕ್ತಾರ ಎಂ.ಬಿ. ಮೂಲಿಮನಿ ಆಗ್ರಹಿಸಿದರು.

ರಾಜ್ಯದ 4215 ವಿವಿಧ ಹಂತದ ಪಶು ವೈದ್ಯಕೀಯ ಸಂಸ್ಥೆಗಳಲ್ಲಿ 4399 ಅಧಿಕಾರಿಗಳು ಇದ್ದು, ಪ್ರಾಥಮಿಕ ಜಾನುವಾರು ಚಿಕಿತ್ಸೆ, ಸಾಂಕ್ರಾಮಿಕ ರೋಗಗಳ ವಿರುದ್ಧ ಲಸಿಕೆ, ಕಚೇರಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಆದರೆ, ರಾಜ್ಯ ಸರ್ಕಾರಕ್ಕೆ ಪರಿಷತ್ತಿನಲ್ಲಿ ಹೆಸರು ನೋಂದಾಯಿಸಲು ಮನವಿ ಮಾಡಿದರೂ ಸೂಕ್ತ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಆರೋಗ್ಯ ಇಲಾಖೆಯಂತೆ ಪ್ರತ್ಯೇಕ ಪರಿಷತ್ ಅಥವಾ ಮಂಡಳಿ ರಚಿಸುವಂತೆ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರಗಳು, ಕೃತಕ ಗರ್ಭಧಾರಣಾ ಕೇಂದ್ರ ಸ್ಥಾಪಿಸಬೇಕು. ಜಾನುವಾರುಗಳ ಔಷಧ, ಆಹಾರ ಪರೀಕ್ಷೆ ಮಾಡಲು ಪರೀಕ್ಷಕರನ್ನು ನಿಯೋಜಿಸಬೇಕು. ಇಲಾಖೆಯಲ್ಲಿ ಖಾಲಿ ಇರುವ 750 ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಬೇಕು.

ಪ್ರತಿ 3 ಸಾವಿರ ಜಾನುವಾರು ಘಟಕಗಳಿಗೆ ಒಂದರಂತೆ ಪ್ರಾಥಮಿಕ ಪಶುಚಿಕಿತ್ಸಾ ಕೇಂದ್ರ ಆರಂಭಿಸಬೇಕು. ಪ್ರತಿ ಗ್ರಾಮಕ್ಕೊಂದು ಟ್ರಿವಿಸ್ ಅಳವಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂಬುದೂ ಸೇರಿ ವಿವಿಧ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರುವಂತೆ ಫೆ. 24 ರಂದು ಬೆಂಗಳೂರಿನಲ್ಲಿ ನಡೆಯುವ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಆಗ್ರಹಿಸಲಾಗುವುದು ಎಂದು ಹೇಳಿದರು.

ಅಧ್ಯಕ್ಷ ಎಂ.ಎಚ್. ವೆಂಕಟರಾಜು, ಪ್ರಧಾನ ಕಾರ್ಯದರ್ಶಿ ಕೆ.ಸಿ. ಸೋಮಶೇಖರ್, ಖಜಾಂಚಿ ಶೆಟ್ಟಪ್ಪ, ಸಂಚಾಲಕ ಕಲ್ಲೇಶಪ್ಪ, ಕಾರ್ಯಾಧ್ಯಕ್ಷ ಮರುಳಸಿದ್ದಪ್ಪ, ಲೋಕೇಶ್ ಇತರರಿದ್ದರು.