blank

ಆಟಿಸಂ ಚಿಣ್ಣರ ‘ಅನನ್ಯ’ ಲೋಕ  ವಿಶೇಷ ಮಕ್ಕಳಿಗಾಗಿ ಮನೆಯನ್ನೇ ಶಾಲೆ ಮಾಡಿದ ವೈದ್ಯೆ!

blank

ಡಿ.ಎಂ.ಮಹೇಶ್, ದಾವಣಗೆರೆ
‘‘ಮೊದಲ ಮಗ ಮೂರೂವರೆ ವರ್ಷದವನಿದ್ದಾಗಲೇ ಆಟಿಸಂ ಸಮಸ್ಯೆ ಇರುವುದು ಗೊತ್ತಾಯಿತು. ಬೆಂಗಳೂರಲ್ಲಿ ಉದ್ಯೋಗ ಮಾಡುತ್ತಲೇ ವಿಶೇಷ ಸಂಸ್ಥೆಯಲ್ಲಿ ಐದು ವರ್ಷ ಚಿಕಿತ್ಸೆ ಕೊಡಿಸಿದೆ. ಈಗ ಸಂವಹನ ಮಾಡಬಲ್ಲ. ಸಾಮಾನ್ಯ ಶಾಲೆಯಲ್ಲಿ ಓದುತ್ತಿದ್ದಾನೆ. ಅಗತ್ಯ ಕೋರ್ಸ್‌ಗಳನ್ನು ಮುಗಿಸಿ, ಇಂತಹ ವಿಶೇಷ ಮಕ್ಕಳಿಗೆಂದೇ ದಾವಣಗೆರೆಯಲ್ಲಿ ಶಾಲೆ ತೆರೆದಿದ್ದೇನೆ. 60 ಕುಟುಂಬದ ಚಿಣ್ಣರಿಗೂ  ತಾಯಿಯಾಗಿ ಶಿಕ್ಷಣ ನೀಡುತ್ತಿದ್ದೇನೆ ಎಂಬ ಖುಷಿ ನನಗಿದೆ.’’
-ಆಟಿಸಂ ಮಕ್ಕಳಿಗಾಗಿಯೇ ಮಧ್ಯಕರ್ನಾಟಕದಲ್ಲಿ ನಡೆಸುತ್ತಿರುವ ‘ಅನನ್ಯ’ ಶಾಲೆಯ ಕಾರ್ಯದರ್ಶಿ ಡಾ.ಜಿ. ಸುಮನ್ ಅವರ ಅಂತರಾಳವಿದು. ದಂತ ವೈದ್ಯೆ ವೃತ್ತಿ ಕೈಬಿಟ್ಟು ಮಗನಿಗಾಗಿ ಇರಾದೆ ಬದಲಿಸಿಕೊಂಡರು. ಎರಡೂವರೆ ವರ್ಷದಿಂದ ಎಸ್. ನಿಜಲಿಂಗಪ್ಪ ಬಡಾವಣೆಯಲ್ಲಿನ ಅವಳಿ ಮನೆಗಳನ್ನೇ ಆಟಿಸಂ ಮಕ್ಕಳ ಶಿಕ್ಷಣಕ್ಕೆ ‘ಅನನ್ಯ’ ಆಗಿಸಿಕೊಂಡಿದ್ದಾರೆ!
60 ಚಿಣ್ಣರು ಶಿಕಣ ಪಡೆಯುತ್ತಿದ್ದಾರೆ. ಬೆಳಗ್ಗೆ 10ರಿಂದ ಸಂಜೆ5ರವರೆಗೆ ವಿವಿಧ ಹಂತದ ಶಿಕ್ಷಣ ನೀಡಲಾಗುತ್ತಿದೆ. ಚಿತ್ರಸಹಿತವಾಗಿ ಸ್ಪೀಚ್ ಥೆರಪಿ ಜತೆಗೆ ಆಕ್ಯುಪಂಕ್ಚರ್ ಥೆರಪಿ, ಯೋಗ, ಸಂಗೀತ ಕಲಿಸಲಾಗುತ್ತಿದೆ. ಹಿರಿಯ ಮಕ್ಕಳಿಗೆ ಕಂಪ್ಯೂಟರ್, ಡಿಜಿಟಲ್ ಸಾಕ್ಷರತೆ ಕಲಿಸಲಾಗುತ್ತಿದೆ. ಪಾಲಕರ ಜವಾಬ್ದಾರಿಗಳ ಬಗ್ಗೆಯೂ ತಿಳಿಸಲಾಗುತ್ತಿದೆ. ದಾವಣಗೆರೆ, ಚಿತ್ರದುರ್ಗ, ಹಾವೇರಿ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಿಗೆ ವರದಾನವಾದ ಏಕೈಕ ಖಾಸಗಿ ಶಿಕ್ಷಣ ಸಂಸ್ಥೆಯಿದು.
 ಸ್ವಂತ ಮಕ್ಕಳಂತೆ ಜತನದಿಂದ ಆರೈಕೆ ಮಾಡುವ ಶಿಕ್ಷಕರು ಒಳಗೊಂಡು 20 ಸಿಬ್ಬಂದಿ ಇಲ್ಲಿದ್ದಾರೆ. ಪಾಲಕರು ಭರಿಸುವ ಶುಲ್ಕದಿಂದಲೇ ಇವರಿಗೆ ವೇತನ ನೀಡಲಾಗುತ್ತಿದೆ. ಶ್ರೀ ಗುರು ಟ್ರಸ್ಟ್‌ನಡಿ ನಡೆಯುತ್ತಿರುವ ಈ ಸಂಸ್ಥೆಗೆ ಸರ್ಕಾರದ ಅನುದಾನವಿಲ್ಲ.  ಕೆಲವು ಬಡಮಕ್ಕಳ ಪ್ರಾಯೋಜಕತ್ವವನ್ನು ಟ್ರಸ್ಟಿಗಳಾದ ಕೆಲ ವೈದ್ಯರೇ ನಿಭಾಯಿಸುತ್ತಿದ್ದಾರೆ. ಮಕ್ಕಳ ಚಿಕಿತ್ಸೆಗಾಗಿ ಕೆಲವರು ಮೂಲ ಜಿಲ್ಲೆಯನ್ನೂ ಬಿಟ್ಟು ದಾವಣಗೆರೆಯಲ್ಲೇ ಮನೆ ಮಾಡಿಕೊಂಡಿದ್ದಾರೆ!
ಡಾ.ಸುಮನ್, ದೂಡಾದಿಂದ ಸಿಎ ನಿವೇಶನದ ನಿರೀಕ್ಷೆಯಲ್ಲಿದ್ದಾರೆ. ವೃತಿಪರ ತರಬೇತಿ ಆರಂಭಿಸುವುದು ಹಾಗೂ (ರಾಷ್ಟ್ರೀಯ ದೂರ ಶಿಕ್ಷಣ ಮಾದರಿ) ಸ್ಪೈನ್ ಮೋಟರ್ ಪರೀಕ್ಷೆಯನ್ನು ನಡೆಸುವುದು ಇವರ ಮುಂದಿನ ಉದ್ದೇಶಗಳು.
ಆಟಿಸಂ ಮಕ್ಕಳಿಗಾಗಿ ಸೆನ್ಸರಿ ಪಾರ್ಕ್ ನಿರ್ಮಾಣಕ್ಕೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಅದು ಈಡೇರದ್ದರಿಂದ ಸಮಾಜ ಕಲ್ಯಾಣ ಇಲಾಖೆಯಿಂದ ನೀಡಿದ್ದ ಜಿಲ್ಲಾ ಮಟ್ಟದ ಪುರಸ್ಕಾರವನ್ನೂ ತಿರಸ್ಕರಿಸಿದ್ದರು! ಇನ್ನಾದರೂ ಸೆನ್ಸರಿ ಪಾರ್ಕ್ ಆಗಬೇಕು. ಯುಡಿಐಡಿ ಕಾರ್ಡ್‌ವುಳ್ಳ ಮಕ್ಕಳಿಗೆ ಅಲ್ಲಿ ಅವಕಾಶ ಸಿಗಬೇಕೆಂಬುದು ಅವರ ಅಭೀಪ್ಸೆ.

blank

ಮಗನನ್ನೇ ನನ್ನ ದೇವರೆಂದೆ!
ಕೊಟ್ಟೂರು ಬಸವೇಶ್ವರರು ನಮ್ಮ ಮನೆದೇವರು. ಆದರೆ ಸಮಸ್ಯೆಯುಳ್ಳ ಮಗನನ್ನೇ ದೇವರೆಂದು ಭಾವಿಸಿದ್ದೇನೆ. ಇಂಥಹ ಮಕ್ಕಳಲ್ಲಿ ಸ್ವಾರ್ಥವಿಲ್ಲ. ಇವರ ಸೇವೆ ಮಾಡುವುದೇ ಪುಣ್ಯದ ಕೆಲಸ ಎನ್ನುವ ಡಾ. ಸುಮನ್, ಹೋಟೆಲ್ ನಿರ್ವಹಣಾಶಾಸ್ತ್ರ ಎಂಬಿಎ ಓದುವಾಗಲೇ ಚಿನ್ನದ ಪದಕ ಪಡೆದವರು. ಖಾಸಗಿ ಆಸ್ಪತ್ರೆಯೊಂದರ ಅಡ್ಮಿನ್ ಆಗಿದ್ದರು. ದಂತ ವೈದ್ಯೆಯಾಗಿದ್ದರು. ಮಗನ ಸಮಸ್ಯೆ ಅರಿತು ಎಲ್ಲ ಕೆಲಸಕ್ಕೂ ಗುಡ್‌ಬೈ ಹೇಳಿದರು. ಆಟಿಸಂನಲ್ಲೇ ಡಿ.ಇಡಿ, ಬಿ.ಇಡಿ ಕೋರ್ಸ್‌ಗಳನ್ನು ಮುಗಿಸಿ ವಿಶೇಷ ಶಾಲೆ ತೆರೆಯುವ ಅವಕಾಶ ಪಡೆದುಕೊಂಡರು.
ಆಟಿಸಂಗೆ ಬಾಧಿತನಾಗಿದ್ದ ಮಗ ಅರ್ಚಿತ್ ಪಿ. ಜಾಲಿ, ಎಲ್ಲರೊಂದಿಗೆ ಸಂವಹನ ಮಾಡುವಷ್ಟು ಸಾಮರ್ಥ್ಯ ಗಳಿಸಿದ್ದಾನೆ. ಆಟಿಸಂ ಮಕ್ಕಳಿಗೆಂದೇ ಸಿದ್ಧಪಡಿಸಲಾದ ಆವಾಜ್ ಆ್ಯಪ್ ಮೂಲಕ ಟ್ಯಾಬ್ ಮೂಲಕ ಉತ್ತರಿಸುತ್ತಿದ್ದಾನೆ. ಸಾಮಾನ್ಯ ಶಾಲೆಯಲ್ಲಿ ಈಗಷ್ಟೆ 9ನೇ ತರಗತಿ ಓದುತ್ತಿರುವ ಅರ್ಚಿತ್, ವಿಶೇಷ ಮಕ್ಕಳ ಸ್ಕೇಟಿಂಗ್‌ನಲ್ಲಿ ರಾಷ್ಟ್ರ ಮಟ್ಟದಲ್ಲಿ ಬಹುಮಾನ ಪಡೆದಿದ್ದಾನೆ. ಡಾ. ಸುಮನ್ ಅವರ ಪತಿ ಡಾ. ಪ್ರಮೋದ್ ಜಾಲಿ, ಖಾಸಗಿ ಆಸ್ಪತ್ರೆಯಲ್ಲಿ ಪ್ರಾಧ್ಯಾಪಕರಾಗಿದ್ದಾರೆ.


ಎರಡು ವರ್ಷದಲ್ಲಿ ನಮ್ಮಲ್ಲಿ ಶಿಕ್ಷಣ ಪಡೆದ ಆರು ಮಕ್ಕಳು ಸಾಮಾನ್ಯ ಶಾಲೆಯಲ್ಲಿ ಓದುತ್ತಿದ್ದಾರೆ. ಆಟಿಸಂ ಮಕ್ಕಳಲ್ಲಿ ಮಾತಾಡುವ ಕೌಶಲ, ಸಂವಹನ ಕೊರತೆ, ಭಾವನೆಗಳನ್ನು ವ್ಯಕ್ತಪಡಿಸಲಾಗದ ನ್ಯೂನತೆ ಇರಲಿದೆ. ಇವರು ಸಮಾಜಕ್ಕೆ ಭಾರವಾಗದೆ ಸ್ವಾವಲಂಭಿಯಾಗಿ ಬೆಳೆಯಬೇಕು. ಎಲ್ಲರೂ ಆಟಿಸಂ ಸ್ವೀಕರಿಸಿ, ಗೌರವಿಸಬೇಕು ಎಂಬುದು ನನ್ನ ಕನಸು.
ಡಾ. ಜಿ. ಸುಮನ್
ಅನನ್ಯ ಶಾಲೆ ಸಂಸ್ಥಾಪಕ ಕಾರ್ಯದರ್ಶಿ.

Share This Article

ಈ ಮಸಾಲೆಗಳು ವಿಟಮಿನ್ ಬಿ 12 ವೇಗವಾಗಿ ಹೆಚ್ಚಾಗಲು ಸಹಕರಿಸುತ್ತವೆ; ನಿಮಗಾಗಿ ಹೆಲ್ತಿ ಮಾಹಿತಿ | Health Tips

ಜೀವಸತ್ವಗಳು ದೇಹದ ಕಾರ್ಯನಿರ್ವಹಣೆಗೆ ಮಾತ್ರ ಅಗತ್ಯವಲ್ಲ, ಅವು ಶಕ್ತಿಯನ್ನು ಸಹ ಒದಗಿಸುತ್ತವೆ. ಅವುಗಳ ಕೊರತೆಯು ನರಗಳು,…

ಪಿರಿಯಡ್ಸ್​ ನೋವನ್ನು ಕಡಿಮೆ ಮಾಡುವುದು ಹೇಗೆ?; ಮಹಿಳೆಯರು ತಿಳಿದುಕೊಳ್ಳಲೆಬೇಕಾದ ಮಾಹಿತಿ | Health Tips

ಋತುಬಂಧವನ್ನು ಈ ರೀತಿ ಅರ್ಥಮಾಡಿಕೊಳ್ಳಬಹುದು. ಋತುಬಂಧ ಎಂಬ ಪದವು ಎರಡು ಗ್ರೀಕ್ ಪದಗಳಿಂದ ಬಂದಿದೆ. ಮೆನೊ…

ಬೇಸಿಗೆಯಲ್ಲಿ ಬೆಳ್ಳುಳ್ಳಿಯನ್ನು ಹೆಚ್ಚು ತಿನ್ನುತ್ತೀರಾ? ಈ ಮಾಹಿತಿ ನಿಮಗಾಗಿ..garlic

garlic: ಬೆಳ್ಳುಳ್ಳಿ ನಮ್ಮ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.  ಆದರೆ ಬೇಸಿಗೆಯಲ್ಲಿ ಹೆಚ್ಚು ಬೆಳ್ಳುಳ್ಳಿ ತಿಂದರೆ…