ಪಾಲಿಕೆಗೆ ಸವಾಲಾದ ನೀರು ಪೂರೈಕೆ ನಿರ್ವಹಣೆ

ರಮೇಶ ಜಹಗೀರದಾರ್ ದಾವಣಗೆರೆ: ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ನಿಂತಿದ್ದು ನಗರದ ಕುಡಿವ ನೀರಿನ ಪೂರೈಕೆ ಮೇಲೆ ನೇರ ಪರಿಣಾಮ ಬೀರಿದೆ.

ಇದರಿಂದ 20 ವಾರ್ಡ್‌ಗಳಿಗೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನದಿಯಲ್ಲಿ ನೀರು ಬರುವವರೆಗೆ ಪರಿಸ್ಥಿತಿ ಎದುರಿಸುವುದು ಪಾಲಿಕೆಗೆ ಸವಾಲಾಗಿದೆ.

ನಗರಕ್ಕೆ ಪ್ರತಿ ದಿನ 80 ಎಂ.ಎಲ್.ಡಿ. ನೀರು ಅಗತ್ಯ. ನೀರಿನ ಲಭ್ಯತೆ ಸಮರ್ಪಕವಾಗಿದ್ದಾಗ 50-55 ಎಂ.ಎಲ್.ಡಿ. ಯಷ್ಟು ನೀರು ಪೂರೈಕೆ ಮಾಡಲಾಗುತ್ತದೆ. ನದಿಯಲ್ಲಿ ನೀರಿಲ್ಲದೆ ಪ್ರಸ್ತುತ 36 ಎಂ.ಎಲ್.ಡಿ. ನೀರು ಮಾತ್ರ ಕೊಡಲು ಸಾಧ್ಯವಾಗುತ್ತಿದೆ.

ನಗರದ ಜಲಮೂಲಗಳಾದ ಕುಂದುವಾಡ ಕೆರೆಯಲ್ಲಿ 4.5 ಮೀ., ಟಿ.ವಿ. ಸ್ಟೇಷನ್ ಕೆರೆಯಲ್ಲಿ 3 ಮೀ. ನೀರು ಲಭ್ಯವಿದೆ. ಭದ್ರಾ ನಾಲೆಗೆ ನೀರು ಬಂದಿರುವುದರಿಂದ, ನೀರು ಪಡೆದು ಲೋ ಲಿಫ್ಟ್ ಹೌಸ್‌ನಿಂದ ಮೋಟಾರ್ ಪಂಪ್‌ಗಳನ್ನು ಬಳಸಿ ಟಿ.ವಿ. ಸ್ಟೇಷನ್ ಕೆರೆ ತುಂಬಿಸಲಾಗುತ್ತಿದೆ.

ಕೊರತೆಯಾಗಿರುವ 20 ವಾರ್ಡ್‌ಗಳಿಗೆ ಟಿ.ವಿ. ಸ್ಟೇಷನ್ ಪಂಪ್‌ಹೌಸ್‌ನಿಂದಲೇ ನೀರು ಪೂರೈಸಲು ಪಾಲಿಕೆ ಉದ್ದೇಶಿಸಿದೆ. ನಗರದ ಹೊಸ ಭಾಗಕ್ಕೆ 3 ದಿನ, ಹಳೇ ಭಾಗಕ್ಕೆ 4 ದಿನದಂತೆ ವೇಳಾಪಟ್ಟಿ ಮಾಡಿಕೊಂಡು ನೀರು ಬಿಡಲಾಗುತ್ತಿದೆ.

ಇಷ್ಟು ದಿನ ವಾರಕ್ಕೆ 2 ದಿನ ಸಾರ್ವಜನಿಕರಿಗೆ ಕುಡಿವ ನೀರು ಸರಬರಾಜು ವ್ಯವಸ್ಥೆಯಿತ್ತು. ಇನ್ನೊಂದು ತಿಂಗಳವರೆಗೆ ವಾರಕ್ಕೆ ಒಂದೇ ದಿನ ಒಂದು ಗಂಟೆ ಮಾತ್ರ ನೀರು ಸಿಗಲಿದೆ.

ಕೊಳವೆಬಾವಿ ನೀರು: ಪಾಲಿಕೆ ವ್ಯಾಪ್ತಿಯಲ್ಲಿ ವಿದ್ಯುತ್ ಪಂಪ್ ಚಾಲಿತ 800 ಕೊಳವೆಬಾವಿಗಳು, 300 ಕೈಪಂಪುಗಳಿವೆ. ಸಾರ್ವಜನಿಕರು ನಿತ್ಯ ಬಳಕೆಗೆ ಇವುಗಳ ನೀರು ಬಳಸಿಕೊಳ್ಳುವಂತೆ ಪಾಲಿಕೆ ಮನವಿ ಮಾಡಿದೆ.

ನಗರದಲ್ಲಿ 29 ಶುದ್ಧ ಕುಡಿವ ನೀರಿನ ಘಟಕಗಳಿದ್ದು ಅವುಗಳನ್ನು ಚಾಲ್ತಿಯಲ್ಲಿ ಇಡಲಾಗಿದೆ. ಇದರ ಜತೆಗ ಅಗತ್ಯವಿರುವ ಕಡೆಗೆ ಪೂರೈಸಲು 3 ಟ್ಯಾಂಕರ್‌ಗಳನ್ನು ಕಾದಿರಿಸಲಾಗಿದೆ.

ಡಿಸಿಗೆ ಪಾಲಿಕೆ ಪತ್ರ: ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಬಿಡಿಸಲು ವ್ಯವಸ್ಥೆ ಮಾಡುವಂತೆ ಕೋರಿ ಮಹಾನಗರ ಪಾಲಿಕೆ ಆಯುಕ್ತರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರಿಗೆ ಪತ್ರ ಬರೆದಿದ್ದಾರೆ.

ಬೇಸಿಗೆ ಸಮೀಪಿಸುತ್ತಿದ್ದು ನೀರಿನ ಹಾಹಾಕಾರ ಉಂಟಾಗುವ ಸಂಭವವಿದೆ. ಆದ್ದರಿಂದ ಸಾರ್ವಜನಿಕರ ಹಿತ ದೃಷ್ಟಿಯಿಂದ ಭದ್ರಾ ಜಲಾಶಯದಿಂದ ತುಂಗಭದ್ರಾ ನದಿಗೆ ನೀರು ಹರಿಸುವ ಬಗ್ಗೆ ತುರ್ತು ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ತುಂಗಭದ್ರಾ ನದಿಯಲ್ಲಿ ನೀರು ಇಲ್ಲದಿರುವ ಕಾರಣ ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ನದಿಗೆ ನೀರು ಬಂದ ನಂತರ ಪೂರೈಕೆ ಮತ್ತೆ ಸಹಜ ಸ್ಥಿತಿಗೆ ಬರಲಿದೆ ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಹೇಳಿದರು.