ಭವಿಷ್ಯ ರೂಪಿಸುವ ಶಿಕ್ಷಣ ಕ್ರಮ ಅಗತ್ಯ

ದಾವಣಗೆರೆ: ಜಾಗತಿಕ ಮಟ್ಟದ ಸ್ಪರ್ಧಾತ್ಮಕ ಯುಗದ ಪ್ರಸ್ತುತ ಸಂದರ್ಭಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಪೂರಕ ಶೈಕ್ಷಣಿಕ ಪಠ್ಯಕ್ರಮ ರೂಪಿಸುವ ಜತೆಗೆ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡುವುದು ಅಗತ್ಯ ಎಂದು ತುಮಕೂರು ವಿವಿ ಕುಲಸಚಿವ (ಪರೀಕ್ಷಾಂಗ) ಪ್ರೊ.ಕೆ.ಜೆ.ಸುರೇಶ್ ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾನಿಲಯದ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ವಿವಿಯ ರಾಜ್ಯಶಾಸ್ತ್ರ ಪಠ್ಯಕ್ರಮ ಸಿದ್ಧತೆ ಕುರಿತ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಯಾವುದೋ ಕಾಲಘಟ್ಟದಲ್ಲಿ ಸಿದ್ಧಪಡಿಸಿದ ಪಠ್ಯಕ್ರಮವನ್ನೇ ಈಗಲೂ ಓದುವುದರಲ್ಲಿ ಅರ್ಥವಿಲ್ಲ. ಕಾಲಮಾನಕ್ಕೆ ತಕ್ಕಂತೆ ವಿದ್ಯಾರ್ಥಿಗಳ ಜತೆಗೆ ಪ್ರಾಧ್ಯಾಪಕರ ಅಧ್ಯಯನ ಕ್ರಮವೂ ಬದಲಾಗಬೇಕು ಎಂದರು.

ಪಠ್ಯಕ್ರಮದಲ್ಲಿಯೇ ಭಾಷಾ ಜ್ಞಾನ ಅಳವಡಿಸುವ ಕೆಲಸ ಆಗಬೇಕು. ಇಂಗ್ಲಿಷ್ ಜ್ಞಾನ ಅನಿವಾರ್ಯವಾಗಿದೆ. ಇದರೊಂದಿಗೆ ಕಂಪ್ಯೂಟರ್ ಶಿಕ್ಷಣ, ಸಂವಹನ ಮತ್ತು ವೃತ್ತಿ ಕೌಶಲ, ಆತ್ಮವಿಶ್ವಾಸ ರೂಢಿಸುವ ಪ್ರಯತ್ನವೂ ಆಗಬೇಕು. ಯಾವುದೇ ವಿಷಯದ ಬಗ್ಗೆ ಆಳವಾದ ಅಧ್ಯಯನಕ್ಕೆ ಅವಕಾಶ ನೀಡಿ, ಪ್ರಭುತ್ವ ಸಾಧಿಸುವಂತಾಗಬೇಕು ಎಂದು ತಿಳಿಸಿದರು.

ಕಲಾ ಪದವಿಯ ವಿದ್ಯಾರ್ಥಿಗಳೂ ಹೊಸ ವಿಷಯಗಳನ್ನು ಕಲಿಯಲು ಅವಕಾಶ ನೀಡಬೇಕು. ಪ್ರತಿ ವರ್ಷ ಚೀನಾ, ಅಮೆರಿಕದಂತ ರಾಷ್ಟ್ರಗಳ ರಾಜಕೀಯ ವ್ಯವಸ್ಥೆಯ ಅಧ್ಯಯನದ ಜತೆಗೆ ಅಪಘಾನಿಸ್ತಾನ, ಕಜಕಿಸ್ತಾನ್, ಜಪಾನ್, ದಕ್ಷಿಣ ಕೋರಿಯ, ಉತ್ತರ ಕೋರಿಯ, ಮಲೇಷ್ಯಾ, ಸಿಂಗಪುರದಂತಹ ರಾಷ್ಟ್ರಗಳ ಅಧ್ಯಯನಕ್ಕೂ ಅವಕಾಶ ಸಿಕ್ಕಾಗ ಅಲ್ಲಿಯ ವ್ಯವಸ್ಥೆಯ ಅರಿವು ಪಡೆಯಲು ಸಾಧ್ಯವಾಗುತ್ತದೆ ಎಂದು ಸಲಹೆ ನೀಡಿದರು.

ಸಮಾಜ ವಿಜ್ಞಾನವನ್ನು ವಾಣಿಜ್ಯ ಮತ್ತು ವಿಜ್ಞಾನದಿಂದ ದೂರ ಇಡುವ ಪ್ರಯತ್ನ ನಡೆಯುತ್ತಲೇ ಇದೆ. ಇಂಥ ವಾತಾವರಣ ಕೊನೆಗೊಳ್ಳಬೇಕು. ಸಮಾಜ ವಿಜ್ಞಾನ ವಿಭಾಗದ ವಿದ್ಯಾರ್ಥಿಯೂ ಕಂಪ್ಯೂಟರ್ ವಿಜ್ಞಾನ ಕಲಿಯಬೇಕು. ಆಸಕ್ತಿಯ ಇನ್ನೂ ಬೇರೆ ವಿಷಯಗಳನ್ನು ತಿಳಿಯಬೇಕು. ಅದಕ್ಕೆ ಅಗತ್ಯವಿರುವ ಪಠ್ಯಕ್ರಮ ಸಿದ್ಧವಾಗಬೇಕು ಎಂದು ಹೇಳಿದರು.

ಸಮಾಜ ವಿಜ್ಞಾನ ವಿಭಾಗದ ಡೀನ್ ಪ್ರೊ.ಕೆ.ಬಿ.ರಂಗಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ಬೋಧನೆ ಮಾಡುವ ಮುನ್ನ ಪ್ರಾಧ್ಯಾಪಕರು ವಿಷಯದ ಬಗ್ಗೆ ಆಳವಾದ ಅಧ್ಯಯನ ಮಾಡಿಕೊಳ್ಳುವುದು ಅಗತ್ಯ ಎಂದು ತಿಳಿಸಿದರು.

ವಿವಿ ಸಿಂಡಿಕೇಟ್ ಮಾಜಿ ಸದಸ್ಯ ಸಿ.ಎಚ್.ಮುರಿಗೇಂದ್ರಪ್ಪ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯಕ್ಕೆ ಅನುಕೂಲವಾಗುವ ಯಾವುದೇ ಒಳ್ಳೆಯ ಕೆಲಸಕ್ಕೆ ಪ್ರೋತ್ಸಾಹ ಇರುತ್ತದೆ. ವಿವಿಯ ಪ್ರಾಧ್ಯಾಪಕರ ಸಮಸ್ಯೆಗೆ ಸ್ಪಂದಿಸಿ, ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದರು.


ಸಂಪನ್ಮೂಲ ವ್ಯಕ್ತಿ ಪ್ರೊ.ಎಂ.ಆರ್.ಹಲಸಂಗಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದಾವಣಗೆರೆ ವಿವಿ ರಾಜ್ಯಶಾಸ್ತ್ರ ಅಧ್ಯಾಪಕರ ವೇದಿಕೆ ಅಧ್ಯಕ್ಷ ಪ್ರೊ.ಎಂ.ಬಿ.ಹನುಮಂತಪ್ಪ, ಉಪಾಧ್ಯಕ್ಷ ಸಿ.ಎಸ್.ಸೋಮಶೇಖರ್, ಕಾರ್ಯದರ್ಶಿ ಪ್ರೊ.ಕೆ.ರಂಗಸ್ವಾಮಿ, ಖಜಾಂಚಿ ಪ್ರೊ.ಶೈಲಜಾ ಉಪಸ್ಥಿತರಿದ್ದರು. ಡಾ.ಬಿ.ವಿ.ಧನಂಜಯಮೂರ್ತಿ ನಿರೂಪಿಸಿದರು. ಪ್ರಾಚಾರ್ಯ ಬಿ.ವಿ.ವೀರಪ್ಪ ವಂದಿಸಿದರು.