ದಾವಣಗೆರೆ: ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಯುವಜನರ ಮೇಲಿದೆ. ಪ್ರೌಢಶಾಲಾ ಹಂತದಿಂದಲೇ ಜನಪದ ಕಲೆಗಳ ತರಬೇತಿ ನೀಡುವ ಅಗತ್ಯವಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್ ಅರುಣ್ ಕುಮಾರ್ ಆಶಯ ವ್ಯಕ್ತಪಡಿಸಿದರು.
ರಂಗ ಅನಿಕೇತನ, ದಾವಣಗೆರೆ ಮಾನವ ಬಂಧುತ್ವ ವೇದಿಕೆ ಸಹಯೋಗದಲ್ಲಿ ಎ.ವಿ.ಕಮಲಮ್ಮ ಕಾಲೇಜಿನಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಂಡಿದ್ದ ತಮಟೆ ಮತ್ತು ಕಂಸಾಳೆ ತರಬೇತಿ ಶಿಬಿರವನ್ನು ತಮಟೆ ಬಾರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಇಂದಿನ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಮಾಧ್ಯಮಗಳ ಪ್ರಭಾವದಿಂದ ಜನಪದ ಕಲೆಯ ಭವ್ಯಪರಂಪರೆ ಕ್ಷೀಣಿಸಿದೆ. ಈಗಿನ ಮಕ್ಕಳು ಸಾಮಾಜಿಕ ಜಾಲತಾಣಗಳು ಮತ್ತು ಮೊಬೈಲ್‌ಗಳ ಪ್ರಭಾವಕ್ಕೆ ಒಳಗಾಗಿದ್ದು, ಅವುಗಳಿಂದ ಹೊರತರಲು ಜಾನಪದ ಕಲೆಗಳ ತರಬೇತಿ ನಿವಾರ್ಯವಾಗಿದೆ ಎಂದರು.
ಕರ್ನಾಟಕವು ಕಲೆ ಮತ್ತು ಸಂಸ್ಕೃತಿಯಲ್ಲಿ ಶ್ರೀಮಂತ ರಾಜ್ಯವಾಗಿದ್ದು, ಇಲ್ಲಿ ಸಾವಿರಾರು ಜನಪದ ಕಲೆಗಳು ಒಬ್ಬರಿಂದ ಒಬ್ಬರಿಗೆ ಮೌಖಿಕವಾಗಿ ಸಾಗುತ್ತಾ ಬಂದಿವೆ ಎಂದ ಅವರು, ಸರ್ಕಾರ ಮತ್ತು ಸಂಘ ಸಂಸ್ಥೆಗಳು ಇಂತಹ ಶಿಬಿರಗಳನ್ನು ಸಂಘಟಿಸುವ ಮೂಲಕ ಜಾನಪದ ಕಲೆಗಳಿಗೆ ಜೀವ ತುಂಬಬೇಕಿದೆ ಎಂದು ತಿಳಿಸಿದರು.
ಆರ್.ಆರ್.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಹಿರಿಯ ವಕೀಲರಾದ ಬಿ.ಎಂ. ಹನುಮಂತಪ್ಪ, ಎಚ್.ಎಸ್. ಯೋಗೀಶ್, ರಂಗ ಅನಿಕೇತನದ ಅಧ್ಯಕ್ಷೆ ಎಚ್.ಎನ್. ಸುಧಾ, ಯುವ ವಕೀಲರಾದ ಉಷಾ ಕೈಲಾಸದ್, ನಾಗಮಣಿ ಹಂಪಾಳಿ, ಸಂಪನ್ಮೂ ವ್ಯಕ್ತಿಗಳಾಗಿ ಮನೋಜ್ ಆರ್. ಕಂಬಾಳಿ ಹಾಗೂ ಪ್ರಮೋದ್ ಕುಮಾರ್ ಭಾಗವಹಿಸಿದ್ದರು. ಸಹಾಯಕ ಪ್ರಾಧ್ಯಾಪಕಿ ಆರ್.ಜಿ.ಸವಿತಾ ಸ್ವಾಗತಿಸಿದರು. ಡಾ.ಎಚ್.ಎನ್.ಲೋಹಿತ್ ವಂದಿಸಿದರು. ಎಂ.ಪಿ.ರೇಖಾ, ಪಲ್ಲವಿ ಕಾರ್ಯಕ್ರಮ ನಿರ್ವಹಿಸಿದರು.
—
