ವಿರೋಧದ ನಡುವೆ ಟಿಪ್ಪು ಜಯಂತಿ ಆಚರಣೆ

ದಾವಣಗೆರೆ: ಹಿಂದುಪರ ಸಂಘಟನೆಗಳ ವಿರೋಧದ ನಡುವೆಯೇ ಜಿಲ್ಲಾಡಳಿತದಿಂದ ನಗರದಲ್ಲಿ ಶನಿವಾರ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಯಿತು.

ಬಿಗಿ ಪೊಲೀಸ್ ಭದ್ರತೆಯ ನಡುವೆ ಇಲ್ಲಿನ ಹೈಸ್ಕೂಲ್ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸುತ್ತಲೂ ತಗಡಿನಿಂದ ತಾತ್ಕಾಲಿಕ ಗೋಡೆ ನಿರ್ಮಾಣ ಮಾಡಲಾಗಿತ್ತು. ಪ್ರವೇಶದ್ವಾರದಲ್ಲಿ ಲೋಹಶೋಧಕ ಅಳವಡಿಸಲಾಗಿತ್ತು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಟಿಪ್ಪು ಜಯಂತಿ ಆಚರಿಸುವುದು ನಾಡಿಗೆ ಹೆಮ್ಮೆಯ ವಿಷಯ. ಆದರೆ ಈ ರೀತಿ ಬಿಗಿ ಭದ್ರತೆ ಕಲ್ಪಿಸಿ ಆಚರಿಸಬೇಕಾಗಿರುವುದು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದರು.

ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ಸ್ವಾತಂತ್ರೃ ಹೋರಾಟಗಾರ. ಸಾಮಾಜಿಕ ಕಳಕಳಿಯ ಜತೆಗೆ ಮನುಕುಲದ ಒಳಿತಿಗಾಗಿ ಹೋರಾಡಿದ ವ್ಯಕ್ತಿ. ಅಂಥವರ ಜಯಂತಿ ಆಚರಣೆಗೆ ವಿರೋಧಿಸುವುದು ಸರಿಯಲ್ಲ ಎಂದರು.

ಮಾಜಿ ಶಾಸಕ ಎಚ್.ಎಸ್.ಶಿವಶಂಕರ್, ಮೇಯರ್ ಶೋಭಾ ಪಲ್ಲಾಗಟ್ಟೆ, ಉಪಮೇಯರ್ ಚಮನ್‌ಸಾಬ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ಮಹಮದ್ ಸಿರಾಜ್, ತಂಜಿಮುಲ್ ಮುಸ್ಲಿಮೀನ್ ಫಂಡ್ ಅಧ್ಯಕ್ಷ ಸಾದಿಕ್ ಪೈಲ್ವಾನ್, ಜೆಡಿಎಸ್ ಮುಖಂಡ ಅಮಾನುಲ್ಲಾ ಖಾನ್ ಇದ್ದರು.
ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಎಸ್ಪಿ ಆರ್. ಚೇತನ್, ಉಪ ವಿಭಾಗಾಧಿಕಾರಿ ಬಿ.ಟಿ. ಕುಮಾರಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ ಉಪಸ್ಥಿತರಿದ್ದರು.

ಪ್ರತಿಭಟನೆ, ಬಂಧನ: ಟಿಪ್ಪು ಜಯಂತಿ ವಿರೋಧಿಸಿ ಟಿಪ್ಪು ಜಯಂತಿ ವಿರೋಧಿ ಸಮಿತಿಯಡಿ ಹಿಂದುಪರ ಸಂಘಟನೆಗಳ ಮುಖಂಡರು ಕಪ್ಪುಪಟ್ಟಿ ಧರಿಸಿ ಜಯದೇವ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಮುಂಜಾಗ್ರತಾ ಕ್ರಮವಾಗಿ 44 ಕಾರ್ಯಕರ್ತರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಯಿತು.

ಮುಖಂಡರಾದ ಎಸ್.ಟಿ.ವೀರೇಶ್, ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ಪಿ.ಸಿ.ಶ್ರೀನಿವಾಸ್, ಸತೀಶ್ ಪೂಜಾರಿ, ಮಂಜುನಾಥ್, ರಾಕೇಶ್, ಆನಂದಸ್ವಾಮಿ, ಟಿಂಕರ್ ಮಂಜಣ್ಣ, ಕೆ.ಬಿ.ಗುರು, ಶಿವನಗೌಡ ಪಾಟೀಲ್ ಮತ್ತಿತರರಿದ್ದರು.