ಉಪ್ಪಿ-ರಚಿತಾ ಮೋಡಿಗೆ ದಾವಣಗೆರೆ ಫಿದಾ

ದಾವಣಗೆರೆ: ಭಾನುವಾರದ ಮುಸ್ಸಂಜೆ ಹೊತ್ತು, ಟಿವಿ ಕಾರ್ಯಕ್ರಮಗಳಿಗೆ ರಜೆ ಹಾಕಿದ್ದ ಜನರು ಹೈಸ್ಕೂಲ್ ಮೈದಾನದತ್ತ ದೃಷ್ಟಿ ಹಾಯಿಸಿದ್ದರು. ನೆಚ್ಚಿನ ರಿಯಲ್ ಸ್ಟಾರ್ ಉಪೇಂದ್ರ, ಡಿಂಪಲ್ ಕ್ವೀನ್ ರಚಿತಾ ರಾಮ್ ಮೋಡಿಗೆ ಫಿದಾ ಆದರು!

ಎರಡು ವರ್ಷದ ಬಳಿಕ ಉಪ್ಪಿ ಅಭಿನಯದ ‘ಐ ಲವ್ ಯೂ’ ಸಿನಿಮಾ ತಯಾರಾಗುತ್ತಿದೆ. ಇದರ ಧ್ವನಿಸುರುಳಿ ಬಿಡುಗಡೆಗೆ ಸಾಕ್ಷಿಯಾದ ಬೆಣ್ಣೆದೋಸೆ ನಗರಿ, ಹಾಡು-ನೃತ್ಯದ ಅಮಲಿಗೆ ಕರಗಿ ನೀರಾಯಿತು.

ಅಭಿಮಾನಿಗಳು ಮೊಬೈಲ್ ಟಾರ್ಚ್ ಲೈಟ್‌ನ ಸ್ವಾಗತ ನೀಡುತ್ತಿದ್ದಂತೆ ಉಪೇಂದ್ರ ವೇದಿಕೆಗೆ ಎಂಟ್ರಿ ನೀಡಿದರು. ಐ ಲವ್ ಯೂ ಚಿತ್ರದ ‘ಒಂದಾನೊಂದು ಕಾಲದಿಂದ ಹಿಂದೆ ಬಂದೆ…’ ಹಾಡಿಗೆ ಸಿಗ್ನೇಚರ್ ಸ್ಟೆಪ್‌ನೊಂದಿಗೆ ಹೆಜ್ಜೆ ಹಾಕಿದ ಉಪ್ಪಿ, ಜನರತ್ತ ಸಿನಿಮಾದ ಕೈಸಂಜ್ಞೆ ತೋರಿಸಿದರು.

‘ನನ್ನ ನಿರ್ದೇಶನದ ಎ ಚಿತ್ರದ ಶತದಿನೋತ್ಸವವನ್ನು ಇಲ್ಲಿಯೇ ಆಚರಿಸಿದ್ದೆ. ಈಗ ಐ ಲವ್ ಯೂ ಚಿತ್ರದ ಧ್ವನಿಸುರುಳಿ ಬಿಡುಗಡೆ ಆಗುತ್ತಿದೆ. ದಾವಣಗೆರೆ ನನ್ನ ಅದೃಷ್ಟದ ನೆಲ. ಸಮಾಜಸೇವೆ ಮಾಡಬೇಕೆಂಬ ಆಲೋಚನೆ ನನ್ನ ತಲೆಯಲ್ಲಿ ಮೊದಲೇ ಇತ್ತು. ಅದಕ್ಕಾಗಿ ಸಿನಿಮಾಕ್ಕೆ ಬಂದೆ’ ಎಂದೂ ಹೇಳಿಕೊಂಡರು.

ನಟಿ ರಚಿತಾ ರಾಮ್, ಮೈಲಾರಿ ಚಿತ್ರದ ಹಾಡಿಗೆ ಹೆಜ್ಜೆ ಹಾಕಿ ಮನ ತಣಿಸಿದರು. ಅಭಿಮಾನಿಗಳ ಪ್ರೀತಿಗೆ ಭಾವ ಪರವಶರಾಗಿ ಕೆಲ ಕಾಲ ಮಾತನ್ನೇ ಮರೆತರು.

ಹೆಚ್ಚಿನ ವಿವರಕ್ಕೆ ವಿಜಯವಾಣಿ ಓದಿ