ದಾವಣಗೆರೆ: ರೈಲ್ವೆ ಇಲಾಖೆಯಲ್ಲಿ ಡಿ ದರ್ಜೆ ಹುದ್ದೆಗಳ ನೇಮಕದಲ್ಲಿ ಕನ್ನಡಿಗ್ಟಜಿಗೆ ಮೀಸಲು ನೀಡುವಂತೆ ಆಗ್ರಹಿಸಿ ರೈಲ್ವೆ ನೇಮಕಾತಿ ಹೋರಾಟ ಸಮಿತಿ ಆ.30ರ ಬೆಳಗ್ಗೆ 11 ಗಂಟೆಗೆ ನಗರದಲ್ಲಿ ರೈಲು ತಡೆದು ಪ್ರತಿಭಟನೆ ನಡೆಸಲಿದೆ.
ನೇಮಕಾತಿಯಲ್ಲಿ ಕನ್ನಡಿಗರಿಗೆ ಪದೇ ಪದೆ ಅನ್ಯಾಯವಾಗುತ್ತಿರುವುದನ್ನು ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ವಿವಿಧ ಸಂಘಟನೆಗಳು, ಪರೀಕ್ಷಾರ್ಥಿಗಳು ಭಾಗವಹಿಸುವರು ಎಂದು ಸಮಿತಿ ಸಂಚಾಲಕ ದಾನೇಗೌಡ ಬುಧವಾರ, ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕನ್ನಡಿಗರನ್ನು ವಂಚಿತರನ್ನಾಗಿಸುವ ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ರದ್ದು ಮಾಡಿ, ಹಿಂದಿನಂತೆ ಹುಬ್ಬಳ್ಳಿಯ ರೈಲ್ವೆ ನೇಮಕಾತಿ ಕೋಶ (ಆರ್ಆರ್ಸಿ) ಮೂಲಕ ಪರೀಕ್ಷೆ ನಡೆಸಬೇಕು.
ತಮಿಳುನಾಡು, ಆಂಧ್ರಪ್ರದೇಶ, ಕೇರಳಗಳಲ್ಲಿ ಸ್ಥಳೀಯರಿಗೆ ಶೇ.80ರಷ್ಟು ಮೀಸಲಾತಿ ಇದ್ದು ಕರ್ನಾಟಕದಲ್ಲೂ ಇದೇ ಮಾದರಿ ಅನುಸರಿಸಬೇಕು ಎಂದು ಮನವಿ ಮಾಡಿದರು.
ಹುಬ್ಬಳ್ಳಿ, ಬೆಂಗಳೂರು ಮೈಸೂರು ಜಿಲ್ಲೆ ಒಳಗೊಂಡು ರಾಜ್ಯದ ನೈರುತ್ಯ ರೈಲ್ವೆಯ ಕೇಂದ್ರ ಕಚೇರಿಯಲ್ಲಿ ರೈಲ್ವೆ ನೇಮಕಾತಿ ಕೋಶ ಆರಂಭಿಸಿ, ಡಿ ದರ್ಜೆ ಹುದ್ದೆಗಳಿಗೆ ಆಯ್ಕೆ ಮಾಡುವ ಹೊಣೆ ನೀಡಲಾಗಿತ್ತು.
2012-13ರಲ್ಲಿ ನಡೆದಿದ್ದ ಪರೀಕ್ಷೆಯಲ್ಲಿ ನ್ಯಾಯ ದಕ್ಕಿತ್ತು. ಆದರೆ 2017-18ರಲ್ಲಿ ಕೇಂದ್ರೀಕೃತ ವ್ಯವಸ್ಥೆ ಕಾರಣಕ್ಕೆ 2200 ಹುದ್ದೆಗಳಿಗೆ ನಡೆದ ಪರೀಕ್ಷೆಯಲ್ಲಿ ಕೇವಲ 22 ಕನ್ನಡಿಗರನ್ನು ಆಯ್ಕೆ ಮಾಡಲಾಗಿದೆ ಎಂದು ಆಕ್ಷೇಪಿಸಿದರು.
ಕೇಂದ್ರೀಕೃತ ಪರೀಕ್ಷಾ ವ್ಯವಸ್ಥೆ ಅಡಿಯಲ್ಲಿ ಬಿಹಾರ, ಉತ್ತರ ಪ್ರದೇಶದವರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದು, ಇದರ ಸಾಚಾತನದ ಬಗ್ಗೆ ಸಂಶಯ ಕಾಡುತ್ತವೆ. ಅಲ್ಲದೆ ಈ ಪ್ರಶ್ನೆಪತ್ರಿಕೆಗಳು ಉತ್ತರಭಾರತದ ಪಠ್ಯಾಧಾರಿತವಾಗಿ ತಯಾರಾಗುತ್ತಿವೆ.
ತರ್ಜುಮೆಯಲ್ಲೂ ವ್ಯತ್ಯಾಸವಾಗುತ್ತಿದೆ. ಇದರಿಂದ ಕರ್ನಾಟಕದವರಿಗೆ ಉದ್ಯೋಗ ಸಿಗುತ್ತಿಲ್ಲ. ಈ ವಿಚಾರದಲ್ಲಿ ಶಾಸಕರು, ಸಂಸದರು ಧ್ವನಿ ಎತ್ತುತ್ತಿಲ್ಲ ಎಂದು ಕಿಡಿ ಕಾರಿದರು.
ಪದಾಧಿಕಾರಿಗಳಾದ ಸಂತೋಷ್ರಾಜ್, ಪಿ.ಮಂಜುನಾಥ್, ಟಿ.ಎಚ್.ಮಂಜುನಾಥ್, ಎನ್.ಮಂಜುನಾಥ್, ಎಚ್.ನಾಗರಾಜ್, ಬಿ.ಟಿ.ರಘು, ರಂಗನಾಥ್ ಗೋಷ್ಠಿಯಲ್ಲಿದ್ದರು.