ಜನಪದ ಸಾಹಿತ್ಯದಲ್ಲಿದೆ ಬದುಕಿನ ಮೌಲ್ಯ: ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಅನಿಸಿಕೆ

ದಾವಣಗೆರೆ: ಸಮಾಜದ ಲೋಪ ಸರಿಪಡಿಸಿ, ಬದುಕನ್ನು ಸರಿದಾರಿಗೆ ತರುವ ಮೌಲ್ಯ ಜನಪದ ಸಾಹಿತ್ಯದಲ್ಲಿದೆ ಎಂದು ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಿರಿನಾಡು ರೂರಲ್ ಅಂಡ್ ಅರ್ಬನ್ ಡೆವಲಪ್‌ಮೆಂಟ್ ಸೊಸೈಟಿಯಿಂದ ಕುವೆಂಪು ಕನ್ನಡ ಭವನದಲ್ಲಿ ಆಯೋಝಿಸಿದ್ದ ರಾಜ್ಯ ಮಟ್ಟದ ಜನಪದ ನೃತ್ಯ, ಜನಪದ ಸಂಗೀತ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಪಂಡಿತರು, ಮೇಧಾವಿಗಳಿಂದ ಶಾಸ್ತ್ರೀಯ ಹಾಗೂ ಸುಗಮ ಸಂಗೀತದ ಪ್ರಕಾರ ಹುಟ್ಟಿದ್ದರೆ, ಜನಪದ ಸಂಗೀತ ಜನಸಾಮಾನ್ಯರ ಬಾಯಿಂದ ಬಾಯಿಗೆ ತಲುಪುವ ಮೂಲಕ ಜನ್ಮ ತಾಳಿದೆ. ಇದು ವ್ಯಕ್ತಿ ಅಥವಾ ಜಾತಿ ಸೂಚಕವಲ್ಲ; ಮೌಲ್ಯದ ಸಂಕೇತ ಎಂದರು.

ಹಿಂದೆಲ್ಲ ಹಿರಿಯರು ಬೆಳಗ್ಗೆ ಎದ್ದಾಗ ಭೂ ತಾಯಿಗೆ ನಮಸ್ಕರಿಸಿ ನಿತ್ಯದ ಜೀವನ ಆರಂಭಿಸುತ್ತಿದ್ದರು. ಇಂದು ಹಾಸಿಗೆಯಿಂದ ಎದ್ದ ತಕ್ಷಣವೇ ಮೊಬೈಲ್ ತೆಗೆದು ವಾಟ್ಸ್‌ಆ್ಯಪ್, ಫೇಸ್‌ಬುಕ್ ಸಂದೇಶ ಹುಡುಕುವ ಪರಿಪಾಠ ಬೆಳೆದಿದೆ. ಜನಪದ ಸಂಸ್ಕೃತಿ ದೂರವಾಗಿ ಪಾಶ್ಚಿಮಾತ್ಯ ಸಂಸ್ಕೃತಿ ಬೇರೂರುತ್ತಿದೆ ಎಂದು ವಿಷಾದಿಸಿದರು.

ಹೆಣ್ಣುಮಕ್ಕಳು ರಾಗಿ-ಗೋಧಿ ಬೀಸುವಾಗ ಮನಸ್ಸಿನ ಮುದಕ್ಕಾಗಿ ಹಾಡುತ್ತಿದ್ದ ಪದಗಳೇ ಬೀಸುಕಲ್ಲಿನ ಪದಗಳಾದವು. ಮಕ್ಕಳನ್ನು ತೂಗುವುದು, ಅಕ್ಕಿ ಭತ್ತ ಕುಟ್ಟುವಾಗ ಹಾಡುತ್ತಿದ್ದ ಹಾಡುಗಳೇ ಕ್ರಮೇಣ ಜನಪದ ಗೀತೆಗಳಾದವು ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಉದ್ಯಮಿ ಬಿ.ಜಿ.ಅಜಯ್‌ಕುಮಾರ್, ಜನಪದ ಕಾರ್ಯಕ್ರಮಗಳ ಸಂಖ್ಯೆ ಹೆಚ್ಚಬೇಕು. ವೀಕ್ಷಕರ ಸಂಖ್ಯೆ ಮುಖ್ಯವಲ್ಲ ಎಂದು ತಿಳಿಸಿದರು.

ವಕೀಲ ಮಂಜಪ್ಪ ಮಾತನಾಡಿ, ಜನಪದ ಗೀತೆಗಳು ಜನರನ್ನು ಬಡಿದೆಬ್ಬಿಸುತ್ತವೆ. ಮೌಢ್ಯಗಳನ್ನು ನಿವಾರಿಸಿ ಸಮಾಜದ ಸ್ವಾಸ್ಥ್ಯವನ್ನು ಹೆಚ್ಚಿಸುತ್ತದೆ ಎಂದರು.

ಶಶಿಕಲಾ ಅಕ್ಕಿ, ಗಣೇಶ್, ಡಾ. ಎಸ್.ಎಚ್.ವಿನಯಕುಮಾರ್ ಸಾಹುಕಾರ್, ಐರಣಿ ಚಂದ್ರು, ಗೀತಾ ಚವ್ಹಾಣ್, ಎಲ್.ಜಯಣ್ಣ ಇದ್ದರು. ವಿವಿಧ ರಂಗದ ಸಾಧಕರನ್ನು ಸನ್ಮಾನಿಸಲಾಯಿತು. ಜನಪದ ನೃತ್ಯ, ಸಂಗೀತ ಕಾರ್ಯಕ್ರಮಗಳು ಪ್ರದರ್ಶಿತವಾದವು.

Leave a Reply

Your email address will not be published. Required fields are marked *