20 ಸೌರ ಘಟಕ ನಿರ್ಮಾಣದತ್ತ ಬೆಸ್ಕಾಂ ಹೆಜ್ಜೆ

blank

ಡಿ.ಎಂ.ಮಹೇಶ್, ದಾವಣಗೆರೆ: ವಿದ್ಯುತ್ ಉತ್ಪಾದನಾ ವೆಚ್ಚ ತಗ್ಗಿಸಿ ಸೌರಶಕ್ತಿ ಬಳಕೆಗೆ ಉತ್ತೇಜಿಸುವ ಪ್ರಧಾನ ಮಂತ್ರಿ ಕುಸುಮ್-ಸಿ ಯೋಜನೆ ಬುಧವಾರ ರಾಜ್ಯವ್ಯಾಪಿ ಚಾಲನೆಗೊಳ್ಳುತ್ತಿದೆ. ಸ್ಥಳೀಯ ಮಟ್ಟದ ಸೌರಶಕ್ತಿ ಬಳಸಿ ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲಿ ಗುಣಮಟ್ಟ ಮತ್ತು ಸಮರ್ಪಕ ವಿದ್ಯುತ್ ಪೂರೈಸುವ ಕಾರ್ಯಕ್ರಮದ ಬಗ್ಗೆ ಜಿಲ್ಲೆಯಲ್ಲೂ ನಿರೀಕ್ಷೆ ಹೆಚ್ಚಿದೆ.
ದಾವಣಗೆರೆ ಜಿಲ್ಲೆಯಲ್ಲಿ ಗುರುತಿಸಿದಂತೆ, ಕೃಷಿ ಪಂಪ್‌ಸೆಟ್‌ಗಳು ಹೆಚ್ಚಿರುವ 20 ಕಡೆಗಳಲ್ಲಿ, ಮೊದಲ ಹಂತದಲ್ಲಿ ಸೌರ ವಿದ್ಯುತ್ ಘಟಕಗಳು ಕಾರ್ಯಾರಂಭ ಮಾಡಲಿವೆ. (ನವೀಕರಿಸಬಹುದಾದ ಇಂಧನದ ಸೇವಾ ಕಂಪನಿ) ರೆಸ್ಕೋ ಮಾದರಿಯಡಿ ಖಾಸಗಿ ಗುತ್ತಿಗೆದಾರ ಕಂಪನಿಗಳು ಇದರ ಕಾರ್ಯಭಾರ ನಿಭಾಯಿಸಲಿವೆ.
ವಸತಿ, ಕೈಗಾರಿಕೆ ಎಲ್ಲವೂ ಸೇರಿದಂತೆ ಜಿಲ್ಲೆಯಲ್ಲಿ ಗಂಟೆಯೊಂದಕ್ಕೆ ಅಂದಾಜು 500 ಮೆಗಾವಾಟ್ ವಿದ್ಯುತ್ ಬೇಡಿಕೆ ಇದೆ. ಇದರಲ್ಲಿ ಶೇ.70 ರಷ್ಟು ವಿದ್ಯುತ್ ಪಂಪ್‌ಸೆಟ್‌ಗಳಿಗೇ ಬೇಕಿದೆ ! ಸದ್ಯಕ್ಕೆ ಉದ್ದೇಶಿತ ಸೌರ ಘಟಕಗಳಿಂದ ಪ್ರತಿ ಗಂಟೆಗೆ 155 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ಗುರಿ ಇದೆ. ಮೂರು ತಿಂಗಳಲ್ಲಿ ಸ್ಥಾವರಗಳನ್ನು ಕಾರ್ಯಚಾಲನೆಗೊಳಿಸಬೇಕಿದೆ.
ಇದರಿಂದಾಗಿ ಹೊರಗಿನ ವಿದ್ಯುತ್ ಉತ್ಪಾದನಾ ಸ್ಥಾವರಗಳಲ್ಲಿ ಸಂಗ್ರಹಿಸಿ, ಮಾರ್ಗಗಳ ಮೂಲಕ ಪಡೆಯುವ ವಿದ್ಯುತ್ ಅವಲಂಬನೆ ತುಸು ಕಡಿಮೆಯಾಗಲಿದೆ. ಜತೆಗೆ ಖರೀದಿ ವೆಚ್ಚ ತಗ್ಗುವ ಜತೆಗೆ ವಿದ್ಯುತ್ ಉಳಿತಾಯವೂ ಸಾಧ್ಯವಾಗಲಿದೆ. ಮುಖ್ಯವಾಗಿ ವಿದ್ಯುತ್ ವೋಲ್ಟೇಜ್‌ನಿಂದಾಗಿ ಮೋಟಾರುಗಳ ದುರಸ್ತಿ ಪ್ರಮೇಯ ಬಾರದೆ ಹಗಲು ವೇಳೆ ಏಳು ತಾಸುಗಳ ಸಮರ್ಪಕ ವಿದ್ಯುತ್ ರೈತರಿಗೆ ಸಿಗಲಿದೆ ಎನ್ನುತ್ತಾರೆ ಬೆಸ್ಕಾಂ ಅಧಿಕಾರಿಗಳು.
* 45000 ಪಂಪ್‌ಸೆಟ್‌ಗಳಿಗೆ ಅನುಕೂಲ
ಜಿಲ್ಲೆಯಲ್ಲಿ 2.62 ಲಕ್ಷ ಕೃಷಿ ಪಂಪ್‌ಸೆಟ್‌ಗಳಿವೆ. ಈ ಪೈಕಿ ಕುಸುಮ್-ಸಿ ಯೋಜನೆಯ ಮೊದಲ ಹಂತದಲ್ಲಿ 45 ಸಾವಿರ ಪಂಪ್‌ಸೆಟ್‌ಗಳಿಗೆ ವರದಾನ ಆಗಲಿವೆ. ಕಾರ್ಯಗತವಾದ ಬಳಿಕ ಎರಡು, ಮೂರನೇ ಹಂತದ ಕಾಮಗಾರಿಗಳನ್ನು ಬೆಸ್ಕಾಂ ಕೈಗೆತ್ತಿಕೊಳ್ಳಲಿದೆ.
ಬೇಕಿದೆ 774.50 ಎಕರೆ
ಸೌರ ವಿದ್ಯುತ್ ಘಟಕಗಳ ಸ್ಥಾಪನೆ ಸಂಬಂಧ ಜಿಲ್ಲೆಯಲ್ಲಿ 774.50 ಎಕರೆ ಜಾಗದ ಅಗತ್ಯವಿದೆ. ಈ ಪೈಕಿ 341 ಎಕರೆ ಸರ್ಕಾರಿ ಖರಾಬು ಜಮೀನು ಈಗಾಗಲೆ ಗುರುತಿಸಿರುವ ಜಿಲ್ಲಾಡಳಿತ, ಆಯಾ ಜಾಗಕ್ಕೆ ಒಪ್ಪಂದದಂತೆ ವಾರ್ಷಿಕ 25 ಸಾವಿರ ರೂ. ಮೊತ್ತವನ್ನು ಆಯಾ ಗ್ರಾಪಂಗಳಿಗೆ ನೀಡಲಿದೆ.
ಲಿಂಗದಹಳ್ಳಿ, ಕೆರೆಬಿಳಚಿ, ತಾವರಕೆರೆ, ಸೊಕ್ಕೆ, ತ್ಯಾವಣಗಿ, ಹೊನ್ನಾಳಿ, ಗುತ್ತೂರು, ನ್ಯಾಮತಿ, ನಲ್ಲೂರಿನ ವಿದ್ಯುತ್ ವಿತರಣಾ ಘಟಕಗಳ ಬಳಿ ಸರ್ಕಾರಿ ಭೂಮಿ ಗುರುತಿಸಲಾಗಿದೆ. ಇದರಲ್ಲಿ ನಲ್ಲೂರಲ್ಲಿ ಸೌರ ವಿದ್ಯುತ್ ಘಟಕ ಕಾಮಗಾರಿ ಪೂರ್ಣಗೊಂಡು ಕಾರ್ಯಚಾಲನೆಗೆ ಕಾಯುತ್ತಿದೆ.
ಖಾಸಗಿ ಜಮೀನುಗಳ ಪೈಕಿ ಆನಗೋಡು, ಶ್ಯಾಗಲೆ, ದೇವರಬೆಳಕೆರೆ, ಭಾನುವಳ್ಳಿ, ನಂದಿಗುಡಿ ಕಡೆಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಜಗಳೂರು, ಹರಿಹರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಬೇಕಿದೆ. ಯರಗುಂಟೆ ಹಾಗೂ ಮಲೆಬೆನ್ನೂರಿನಲ್ಲಿ ರೈತರು ಜಮೀನು ನೀಡಲು ಒಪ್ಪದ್ದರಿಂದ ಸ್ಥಳ ಬದಲಿಗೆ ಬೆಸ್ಕಾಂಗೆ ಚಿಂತನೆ ನಡೆಸಿದೆ.
ಖಾಸಗಿ ಜಮೀನಿನ ಮಾಲೀಕರೊಂದಿಗೆ ಏಜೆನ್ಸಿಯವರು 30 ವರ್ಷಕ್ಕೆ ಲೀಸ್ ಆಧಾರದಡಿ ಒಡಂಬಡಿಕೆ ಮಾಡಿಕೊಳ್ಳಲಿದ್ದಾರೆ. ಪ್ರತಿ ಎಕರೆಗೆ 25 ಸಾವಿರ ರೂ.ನಿಂದ 40 ಸಾವಿರ ರೂ.ವರೆಗೆ ನೆರವು ನೀಡಲಿದ್ದು, ಪ್ರತಿ ವರ್ಷಕ್ಕೆ ಶೇ.5ರಷ್ಟು ಮೊತ್ತ ಹೆಚ್ಚಳವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.
56 ಜನರಿಗೆ ವೈಯಕ್ತಿಕ ಲಾಭ
ಕುಸುಮ್ ಬಿ ಯೋಜನೆಯಡಿ 5ರಿಂದ 10 ಎಚ್‌ಪಿ ವರೆಗಿನ ಕೃಷಿ ಪಂಪ್‌ಸೆಟ್‌ಗಳಿಗೆ ವೈಯಕ್ತಿಕ ಸೌರ ಘಟಕ ನಿರ್ಮಿಸಿಕೊಳ್ಳಲು ಅವಕಾಶವಿದೆ. ಕೇಂದ್ರ ಸರ್ಕಾರದಿಂದ ಶೇ.50, ರಾಜ್ಯ ಸರ್ಕಾರದಿಂದ ಶೇ.30ರ ಸಹಾಯಧನ ಸಿಗಲಿದೆ. ರೈತರು ಶೇ.20ರಷ್ಟನ್ನು ವ್ಯಯಿಸಬೇಕು. ಜಿಲ್ಲೆಯಲ್ಲಿ 56 ಮಂದಿ ರೈತರು ಇದರ ಲಾಭ ಪಡೆದಿದ್ದಾರೆ.
—–
ಕುಸುಮ್-ಸಿ ಯೋಜನೆಯು ಕೃಷಿ ಪಂಪ್‌ಸೆಟ್‌ಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯಲ್ಲಿ ಹಗಲು ವೇಳೆಯಲ್ಲಿ ಹೆಚ್ಚಿನ ವಿದ್ಯುತ್ ಬೇಡಿಕೆ ಇದೆ. ಸೌರ ವಿದ್ಯುತ್ ಘಟಕಗಳ ಸ್ಥಾಪನೆಯಿಂದ ಸ್ವಲ್ಪ ಒತ್ತಡ ಕಡಿಮೆಯಾಗಲಿದೆ.
ಎಸ್.ಕೆ. ಪಟೇಲ್
ಬೆಸ್ಕಾಂ ಅಧೀಕ್ಷಕ ಇಂಜಿನಿಯರ್.

Share This Article

ಹೃದ್ರೋಗ ದೂರ, ಮೆದುಳಿನ ಆರೋಗ್ಯಕ್ಕೆ ಬಲ: ಟ್ಯೂನ ಮೀನಿನಲ್ಲಿದೆ ಹಲವು ಆರೋಗ್ಯ ಪ್ರಯೋಜನಗಳು! Tuna Fish Benefits

Tuna Fish Benefits: ಮೀನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎಂದು ಸಾಮಾನ್ಯವಾಗಿ ಹೇಳಲಾಗುತ್ತದೆ. ಮೀನಿನಲ್ಲಿ ಹಲವು…

ಯುವಜನರಲ್ಲಿ ಹೃದಯಾಘಾತ ಹೆಚ್ಚಾಗಲು ಪ್ರಮುಖ ಕಾರಣಗಳಿವು… ತಕ್ಷಣ ಎಚ್ಚೆತ್ತುಕೊಳ್ಳದಿದ್ರೆ ಅಪಾಯ ಫಿಕ್ಸ್​! Cardiac Arrest

Cardiac Arrest : ಒಂದು ಕಾಲದಲ್ಲಿ ವಯಸ್ಸಾದವರಲ್ಲಿ ಮಾತ್ರ ಕಂಡುಬರುತ್ತಿದ್ದ ಹೃದಯ ಸಂಬಂಧಿ ಸಮಸ್ಯೆಗಳು ಈಗ…