ದಾವಣಗೆರೆ: ಸಿರಿಗೆರೆ ತರಳಬಾಳು ಮಠಕ್ಕೆ ಹೊಸ ಪೀಠಾಧಿಪತಿ ಆಯ್ಕೆ ಸೇರಿ 4 ಪ್ರಮುಖ ವಿಷಯಗಳನ್ನು ಮುಂದಿಟ್ಟುಕೊಂಡು ಹೋರಾಟಕ್ಕಿಳಿದಿರುವ ಭಕ್ತರ ಒಂದು ಸಮೂಹ ತಾಲೂಕು, ಹೋಬಳಿವಾರು ಸಭೆಗಳನ್ನು ಸಂಘಟಿಸುವ ಮೂಲಕ ಹೋರಾಟವನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು ನಿರ್ಧರಿಸಿದೆ.
ದಾವಣಗೆರೆಯ ಅಪೂರ್ವ ರೆಸಾರ್ಟ್ ಆವರಣದ ಕಲ್ಯಾಣ ಮಂಟಪದಲ್ಲಿ ಭಾನುವಾರ ಸಭೆ ಸೇರಿದ್ದ 150 ಕ್ಕೂ ಅಧಿಕ ಪ್ರಮುಖರು ಆಗಸ್ಟ್ ನಾಲ್ಕರ ಸಮಾಲೋಚನೆ ಸಭೆ ಬಳಿಕ ನಡೆದ ವಿದ್ಯಮಾನಗಳ ಕುರಿತು ವಿಚಾರ ವಿನಿಮಯ ನಡೆಸಿದರು.
ನಾವಾರೂ ಮಠ ಅಥವಾ ಸಮಾಜದ ವಿರುದ್ಧವಿಲ್ಲ. ಲಿಂ.ಶ್ರೀ ಶಿವಕುಮಾರ ಸ್ವಾಮಿಗಳು ತೋರಿದ ಮಾರ್ಗದಲ್ಲಿ ಮುನ್ನಡೆಯಬೇಕು. ಸಮಾಜಕ್ಕೆ ಒಳಿತಾಗಬೇಕು ಎಂಬುದಷ್ಟೇ ನಮ್ಮ ಆಶಯ ಎಂದು ಸಾರಿದರು.
ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಪೂರ್ವ ರೆಸಾರ್ಟ್ ಮಾಲೀಕ ಅಣಬೇರು ರಾಜಣ್ಣ, ಮಾಜಿ ಸಚಿವ ಬಿ.ಸಿ.ಪಾಟೀಲ್, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಸಾಧು ಸದ್ಧರ್ಮ ಸಮಾಜದ ಹಿತ ಕಾಯಲು ನಮ್ಮ ಹೋರಾಟ ಮುಂದುವರಿಯಲಿದೆ ಎಂದು ಘೋಷಿಸಿದರು.
ಆ. 4 ರ ದಾವಣಗೆರೆ ಸಭೆ ಬಳಿಕ ಹಿರೇಕೇರೂರಲ್ಲಿ ಸಮಾಜದ ಸಭೆ ಆಯೋಜಿಸಲಾಗಿತ್ತು. ಇದೀಗ ರಾಜ್ಯದ 40 ತಾಲೂಕುಗಳಲ್ಲಿ ಇಂಥ ಸಭೆಗಳನ್ನು ಸಂಘಟಿಸಿ ಭಕ್ತರಿಗೆ ಮನವರಿಕೆ ಮಾಡಿಕೊಡಲು ನಿರ್ಧರಿದ್ದೇವೆ ಎಂದು ಪ್ರಕಟಿಸಿದರು.
ಹಳೆ ಬೈಲಾ ಪ್ರಕಾರ ಹೊಸ ಪೀಠಾಧಿಪತಿ ಆಯ್ಕೆ, ಏಕವ್ಯಕ್ತಿ ಡೀಡ್ ರದ್ದು, ಸಮಾಜದ ಶಾಲಾ, ಕಾಲೇಜುಗಳ ಸಮರ್ಪಕ ನಿರ್ವಹಣೆ, ಭಕ್ತರ ಮೇಲಿನ ಕೇಸ್ ವಾಪಸ್ ಪಡೆಯಬೇಕು ಎಂದು ಪುನರುಚ್ಚರಿಸಿದರು.
ಆ.4 ರ ದಾವಣಗೆರೆ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಆ.18 ರಂದು ಶ್ರೀಗಳನ್ನು ಭೇಟಿ ಮಾಡಬೇಕಿತ್ತು. ಯಾರೂ ತಮ್ಮನ್ನು ಭೇಟಿಯಾಗುವುದು ಬೇಡ. ಸಮಾಜದ ಅಧ್ಯಕ್ಷರಿಗೆ ಅರ್ಜಿ ಕೊಡಿ ಆಮೇಲೆ ನಿರ್ಧರಿಸುತ್ತೇವೆ ಎಂದು ಅವರು ಹೇಳಿದ್ದರಿಂದ ಹಿನ್ನಡೆಯಾಯಿತು.
ದಾವಣಗೆರೆ ಸಭೆಯಲ್ಲಿ ಪಾಲ್ಗೊಂಡವರ ಬಗ್ಗೆ ಶ್ರೀಗಳು ಆಡಿದ ಮಾತು ಬೇಸರ ತರಿಸಿದೆ. ಸಮಾಜ ಒಡೆಯುವ, ಭಕ್ತರಲ್ಲಿ ಒಡಕು ಮೂಡಿಸುವ ಹೇಳಿಕೆ ನೀಡದಂತೆ ವಿನಂತಿಸುವುದಾಗಿ ತಿಳಿಸಿದರು.
ಏಕವ್ಯಕ್ತಿ ಡೀಡ್ ಮೂಲಕ ಅಂದಾಜು 2000 ಕೋಟಿ ರೂ.ಮೌಲ್ಯದ ಆಸ್ತಿಯನ್ನು ಸ್ವಾಮೀಜಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಡೀಡ್‌ನ್ನು 30 ವರ್ಷಗಳಿಂದ ರಹಸ್ಯವಾಗಿಟ್ಟಿದ್ದಾರೆಂಬುದು ನಮ್ಮ ಆಕ್ಷೇಪಕ್ಕೆ ಕಾರಣ ಎಂದು ಅಣಬೇರು ರಾಜಣ್ಣ ತಿಳಿಸಿದರು.
77ರ ಬೈಲಾ ಪಾಲಿಸಿ
ಶ್ರೀ ಶಿವಕುಮಾರ ಶ್ರೀಗಳು 1977ರಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘ ರಚಿಸಿ ರೂಪಿಸಿದ ಬೈಲಾ ಪಾಲಿಸಿದರೆ ಎಲ್ಲ ಸಮಸ್ಯೆಗಳು ಬಗೆಹರಿಯುತ್ತವೆ ಎಂದು ಮಾಜಿ ಸಚಿವ ಬಿ.ಸಿ.ಪಾಟೀಲ್ ತಿಳಿಸಿದರು.
1938ರಲ್ಲಿ ಗುರುಶಾಂತ ಸ್ವಾಮೀಜಿ ಶ್ರಿ ಮದುಜ್ಜಯಿನಿ ಸದ್ಧರ್ಮ ಸಿಂಹಾಸನಾಧೀಶ ಸದ್ಮಠ ಪಾಲುಕುರ್ಕೆ, ಸಿರಿಗೆರೆ ತರಳಬಾಳು ಜಗದ್ಗುರು ಬ್ರಹನ್ಮಠ ಎಂದು ಹೆಸರಿಸಿದ್ದರು. ಅದೇ ಮೂಲ ಮಠ.
1977ರಲ್ಲಿ ಹಿರಿಯ ಶ್ರೀ ಶಿವಕುಮಾರ ಶ್ರೀಗಳು ಸಾಧು ಸದ್ಧರ್ಮ ವೀರಶೈವ ಸಂಘ ಸ್ಥಾಪಿಸಿ ಅದಕ್ಕೊಂದು ಬೈಲಾ ರಚಿಸಿದ್ದರು. 60 ವರ್ಷಕ್ಕೆ ಪೀಠಾಧಿಕಾರಿ ನಿವೃತ್ತಿಯಾಗಬೇಕು ಎಂದು ನಮೂದಿಸಿದ್ದರು.
ಈಗಿನ ಶ್ರೀಗಳು 1990ರಲ್ಲಿ ಶ್ರೀ ಮದುಜ್ಜಯನಿ ಸದ್ಧರ್ಮ ಸಿಂಹಾನಾಧೀಶ ತರಳಬಾಳು ಜಗದ್ಗುರು ಎಂದು ಟ್ರಸ್ಟ್ ರಚಿಸಿ ಏಕ ವ್ಯಕ್ತಿ ಡೀಡ್ ಮಾಡಿದರು. ಆದರೆ ವಾಸ್ತವವಾಗಿ ಅದು ಶ್ರೀ ಮದುಜ್ಜಯಿಮನಿ ಸದ್ಧರ್ಮ ಸಿಂಹಾಸನಾಧೀಶ ಸದ್ಮಠ ಪಾಲುಕುರ್ಕೆ, ಸಿರಿಗೆರೆ ತರಳಬಾಳು ಜಗದ್ಗುರು ಬ್ರಹನ್ಮಠ – ರೆಪ್ರಸೆಂಟೆಂಡ್ ಬೈ ಶಿವಮೂರ್ತಿ ಶ್ರೀ ಆಗಬೇಕಿತ್ತು ಎಂದರು.
ಹೊಸ ಟ್ರಸ್ಟ್ ರಚನೆ ವೇಳೆ ಹಳೇ ಮಠ, ಹಳೇ ಬೈಲಾ ತೆಗೆದು ಹಾಕಿದರು. ಭಕ್ತಾದಿಗಳಿಗೆ ಇದು ತಿಳಿದಿಲ್ಲ. ಇದರ ಪ್ರಕಾರ ಮಠದ ಆಸ್ತಿ ಹೊಸ ಟ್ರಸ್ಟ್‌ಗೆ ಬರುತ್ತದೆ. ಇದಕ್ಕೆ ಏಕವ್ಯಕ್ತಿ ಸರ್ವಾಧಿಕಾರಿ. ಪೀಠಾಧಿಕಾರಿ ನೇಮಿಸುವ ಅಧಿಕಾರ ಅವರಿಗಿದೆ ಎಂದು ಮಾಹಿತಿ ನೀಡಿದರು.
ಭಕ್ತರ ಮನಸ್ಸಲ್ಲಿ ವಿಷ ಹಾಕಬೇಡಿ
ಭಕ್ತರನ್ನು ಎತ್ತಿ ಕಟ್ಟಿ ಅವರ ನಡುವೆ ಒಡಕು ಮೂಡಿಸುವ ಪ್ರಯತ್ನ ಬೇಡ. ಜನರನ್ನು ಕರೆಸಿ ವಾಟ್ಸ್ ಆ್ಯಪ್‌ನಲ್ಲಿ ಬರೆಸುವುದು ಸರಿಯಾದ ಕ್ರಮವಲ್ಲ. ಭಕ್ತರ ಮನಸ್ಸಲ್ಲಿ ವಿಷ ಹಾಕಬೇಡಿ ಎಂದು ಪಾಟೀಲ್ ವಿನಂತಿಸಿದರು. ಸಮಾಜ ದಾರಿ ತಪ್ಪಿದಾಗ ಅದನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕೇ ಹೊರತು ಒಡಕು ಮೂಡಿಸಬಾರದು ಎಂದರು.
ಸಭೆ ಮಾಡಿದವರು ಬಂಡವಾಳಶಾಹಿಗಳು ಎಂದು ಸ್ವಾಮೀಜಿ ಹೇಳುತ್ತಾರೆ ಆದರೆ. 2000 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಸ್ವಾಮೀಜಿಗಿಂತ ದೊಡ್ಡ ಬಂಡವಾಳ ಷಾಹಿಗಳು ಯಾರು ಎಂದು ಪಾಟೀಲ್ ಪ್ರಶ್ನಿಸಿದರು.
ವಡ್ನಾಳ್ ರಾಜಣ್ಣ ಮಾತನಾಡಿ, ಪೀಠ ತ್ಯಾಗ ಮಾಡಿ ಎಂದು ನಾವಾರೂ ಕೇಳಿರಲಿಲ್ಲ. 2012 ರಲ್ಲಿ ನೀವೇ ಹೇಳಿದ್ದಿರಿ. ಸಮಯ ಆಗಿದೆ. ಪೀಠಕ್ಕೆ ಉತ್ತರಾಧಿಕಾರಿ ನೇಮಿಸಿ. ಅವರಿಗೆ ಸಂಸ್ಕಾರ ನೀಡಿ ಹಾಗೂ ಏಕ ವ್ಯಕ್ತಿ ಡೀಡ್ ರದ್ದುಪಡಿಸಿ ಎಂದು ಮನವಿ ಮಾಡಿದರು.
ಮಾಜಿ ಸಚಿವ ಎಸ್.ಎ. ರವೀಂದ್ರನಾಥ್, ಆನಗೋಡು ನಂಜುಂಡಪ್ಪ, ಬೆನಕಪ್ಪ , ಡಿ.ಸಿ. ರಾಜಪ್ಪ ,ಓಂಕಾರಪ್ಪ , ಕೆ ಸಿದ್ದಪ್ಪ , ಜಿ ಬಿ ವೆಂಕಟೇಶ್, ಕಾಂತೇಶ, ಬಸವನಗೌಡ್ರು, ಲಿಂಗರಾಜು, ಶ್ರೀನಿವಾಸ, ಚೇತನ್, ನಾಗರಾಜ, ಬಸವಲಿಂಗಪ್ಪ , ಟಿ.ಎಂ ಶಿವಮೂರ್ತಯ್ಯ ವಿಶ್ವನಾಥ್ ಇತರರಿದ್ದರು.
ತಾಲೂಕು-ಹೋಬಳಿವಾರು ಸಂಘಟನೆ ಸಿರಿಗೆರೆ ಮಠದ ಭಕ್ತರ ಗುಂಪಿನ ನಿರ್ಣಯ

ಈ ನಾಲ್ವರೊಂದಿಗೆ ನೀವು ಎಂದಿಗೂ ಜಗಳವಾಡಬೇಡಿ; ಅದರಿಂದ ನಿಮಗೆ ಹಾನಿ | Chanakya Niti
ಆಚಾರ್ಯ ಚಾಣಕ್ಯ ತನ್ನ ಒಂದು ನೀತಿಯ ಮೂಲಕ ಮಾನವನಿಗೆ ತನ್ನ ಜೀವನವನ್ನು ನಡೆಸುವ ಮಾರ್ಗವನ್ನು ಹೇಳಿದ್ದಾರೆ.…
ಬೊಜ್ಜು ಕರಗಿಸಿ ಫಿಟ್ ಆಗಿರಲು ಈ ತರಕಾರಿಗಳೇ ಸಾಕು; ನಿಮಗಾಗಿ ಹೆಲ್ತಿ ಮಾಹಿತಿ | Health Tips
ಇಂದಿನ ಕಾರ್ಯನಿರತ ಜೀವನದಲ್ಲಿ ತೂಕ ಹೆಚ್ಚಾಗುವುದು ತುಂಬಾ ಸಾಮಾನ್ಯ ಸಮಸ್ಯೆಯಾಗಿದೆ. ಅನೇಕರು ಹೆಚ್ಚಿದ ತೂಕದ ಬಗ್ಗೆ…
ಡಯಟ್ ಸೋಡಾ ಕುಡಿಯಲು ಇಷ್ಟಪಡುತ್ತೀರಾ?; ಹಾಗಾದ್ರೆ ನೀವು ತಿಳಿದುಕೊಳ್ಳಲೇಬೇಕಾದ ಮಾಹಿತಿ ಇದು.. | Health Tips
ನಮ್ಮ ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸುವ ಜನರು ಸಾಮಾನ್ಯ ಸೋಡಾಕ್ಕಿಂತ ಡಯಟ್ ಸೋಡಾ ಕುಡಿಯಲು…