ಕರ್ನಾಟಕ ದರ್ಶನದಲ್ಲಿ ನಾಡಿನ ಸಾಂಸ್ಕೃತಿಕ ಲೋಕ ಅನಾವರಣ

ದಾವಣಗೆರೆ: ನಾಡಿನ ಹಬ್ಬಗಳು, ಆಚರಣೆಗಳು, ದೇವಸ್ಥಾನ, ಮಂದಿರಗಳು, ಪ್ರಮುಖ ವ್ಯಕ್ತಿಗಳು, ಆಹಾರ ಕ್ರಮಗಳು, ವೇಷಭೂಷಣಗಳು ಹೀಗೆ ನಾಡಿನ ಸಾಂಸ್ಕೃತಿಕ ವೈಭವ ನಗರದ ಸಿದ್ಧಗಂಗಾ ಶಾಲಾ ಆವರಣದಲ್ಲಿ ಭಾನುವಾರ ಅನಾವರಣಗೊಂಡಿತು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಿಲ್ಲಾ ಸಂಸ್ಥೆ ಹಾಗೂ ನೇತಾಜಿ ಸ್ಕೌಟ್ ಗ್ರೂಪ್, ಚೇತನ ಗೈಡ್ ಗ್ರೂಪ್, ಸಿದ್ಧಗಂಗಾ ಸ್ಕೌಟ್ಸ್- ಗೈಡ್ಸ್ ಗ್ರೂಪ್ ಸಹಯೋಗದಲ್ಲಿ ಆಯೋಜಿಸಿದ್ದ ‘ಕರ್ನಾಟಕ ದರ್ಶನ’ದಲ್ಲಿ ಮುನ್ನೂರಕ್ಕೂ ಅಧಿಕ ಮಕ್ಕಳು ನಾಡಿನ ಪರಂಪರೆಯನ್ನೇ ತೆರೆದಿಟ್ಟರು. ಪ್ರೇಕ್ಷಕರಿಗೆ ಪಿಕ್‌ನಿಕ್ ಸ್ಪಾಟ್‌ಗೆ ಹೋದ ಅನುಭವವಾಯಿತು.

ಶನಿವಾರ ಮಧ್ಯರಾತ್ರಿ ನಿಧನರಾದ ಚಿತ್ರನಟ ಅಂಬರೀಷ್ ಅವರ ವ್ಯಕ್ತಿತ್ವ ಪರಚಿಯಿಸುವ ಫಲಕಗಳನ್ನು ಮಂಡ್ಯ ಜಿಲ್ಲೆಯ ತಂಡ ಪ್ರದರ್ಶಿಸಿತು. ಮಲ್ಲಿಕಾರ್ಜುನ ದೇವಾಲಯ ಸೇರಿದಂತೆ ಅಲ್ಲಿನ ಐತಿಹಾಸಿಕ ಸ್ಥಳಗಳು, ಕವಿಗಳ ಕಿರು ಮಾಹಿತಿ ನೀಡಿದರು.

ವಿದ್ಯಾರ್ಥಿನಿ ಬಿ.ಎನ್. ನಂದಿನಿ ನೇತೃತ್ವದ ದಾವಣಗೆರೆ ತಂಡ ಮಧ್ಯಕರ್ನಾಟಕದ ಇತಿಹಾಸ ಪ್ರಸಿದ್ಧ ಆನೆಕೊಂಡ ದೇವಸ್ಥಾನ, ನಗರದೇವತೆ ದುರ್ಗಾಂಬಿಕಾ ದೇವಿ ದೇವಾಲಯ, ಬೆಣ್ಣೆದೋಸೆ ಮತ್ತಿತರ ಖಾದ್ಯಗಳನ್ನು ಪರಿಚಯಿಸಿತು.

ಜೆ.ಎಸ್. ಚಿನ್ಮಯ್ ನೇತೃತ್ವದ ಮೈಸೂರು ತಂಡ ಜಿಲ್ಲೆಯ ಸೊಬಗನ್ನೇ ಉಣ ಬಡಿಸಿತು. ಯುದ್ಧ ಫಿರಂಗಿಗಳೊಂದಿಗೆ ಚಾಮುಂಡಿ ಬೆಟ್ಟ, ಲಲಿತಮಹಲ್, ಮೃಗಾಲಯ, ಅರಮನೆ, ಕೆ.ಆರ್.ಎಸ್. ಜಲಾಶಯಗಳ ಮಾಹಿತಿಯನ್ನು ಸಾದರಪಡಿಸಿತು.

ಚಿತ್ರದುರ್ಗದ ಸ್ವಾತಂತ್ರೃ ಯೋಧರು, ಕವಿ, ವಚನಕಾರರ ವೇಷದಲ್ಲಿ ಮಕ್ಕಳು ಗಮನ ಸೆಳೆದರು. ದುರ್ಗದ ಕೋಟೆ ಮತ್ತಿತರ ಸ್ಥಳಗಳ ಮಾಹಿತಿ ಪ್ರದರ್ಶಿಸಲಾಗಿತ್ತು. ಪಿ.ಆರ್. ಭರತ್ ಮತ್ತವರ ತಂಡ ಬೀದರ್ ಜಿಲ್ಲೆಯ ಕೋಟೆ, ಗುಂಬಜ್ ದರ್ವಾಜಾ, ಬರೀದ್ ಶಾಯಿ ಪಾರ್ಕ್ ಪರಿಚಯಿಸಿದರೆ, ಕಾರ್ತಿಕ್ ತಂಡ ರಾಮನಗರ ಜಿಲ್ಲೆಯ ಸಾವನದುರ್ಗ ಬೆಟ್ಟ, ಅರ್ಕಾವತಿ, ಕಾವೇರಿ, ವೃಷಭಾವತಿ ನದಿಗಳ ಸಂಗಮದ ಮಹತ್ವವನ್ನು ವಿವರಿಸಿತು.

ಎನ್.ಜೆ. ಸಾಯಿ ತಂಡ ಹಾಸನ ಜಿಲ್ಲೆಯ ಗೊಮ್ಮಟೇಶ್ವರ, ಬೇಲೂರು, ಹಳೇಬೀಡುಗಳ ಇತಿಹಾಸ, ಎ.ಎಂ. ಆದರ್ಶ ವಿಜಯಪುರದ ಗೋಲಗುಮ್ಮಟ, ಬಸವಣ್ಣನ ನೆಲೆಯನ್ನು ಪರಿಚಯಿಸಿದರು. ವಿಕಾಸ್ ತಂಡ ಹಾವೇರಿಯ ಹುಕ್ಕೇರಿ ಮತ್ತಿತರ ಮಠಗಳ ಚಿತ್ರಣ ನೀಡಿತು.

ಇದಲ್ಲದೆ ಚುರುಮುರಿ, ಮಂಡಕ್ಕಿ, ರೊಟ್ಟಿ, ಎಣಗಾಯಿ ಪಲ್ಯ, ತಟ್ಟೆ ಇಡ್ಲಿ ಮೊದಲಾದ ಖಾದ್ಯಗಳು ನೀರೂರಿಸಿದವು.

ಸಿದ್ದಗಂಗಾ ಶಾಲೆ ಮುಖ್ಯ ಶಿಕ್ಷಕಿ ಜಸ್ಟೀನ್ ಡಿಸೋಜ ಪ್ರದರ್ಶನಕ್ಕೆ ಚಾಲನೆ ನೀಡಿದರು. ಶಾಲೆಯ ಸಂಸ್ಥಾಪಕ ಎಂ.ಎಸ್. ಶಿವಣ್ಣ, ನಿರ್ದೇಶಕ ಜಯಂತ್, ನೇತಾಜಿ ಸ್ಕೌಟ್ಸ್ ಮತ್ತು ಗೈಡ್ಸ್‌ನ ಲೀಡರ್ ವಿಜಯ್, ಸ್ಕೌಟ್ಸ್ ಪೋಷಕರ ಸಮಿತಿ ಅಧ್ಯಕ್ಷ ಪಾಟೀಲ್ ಮತ್ತಿತರರಿದ್ದರು.