ಜ.18 ರಿಂದ ಜಯದೇವ ಶ್ರೀಗಳ ಸ್ಮರಣೋತ್ಸವ

ದಾವಣಗೆರೆ: ಬಸವಕೇಂದ್ರ, ಎಸ್‌ಜೆಎಂ ಶಿವಯೋಗಾಶ್ರಮ ಟ್ರಸ್ಟ್ ಸಹಯೋಗದಲ್ಲಿ ಜ. 18ರಿಂದ 20ರ ವರೆಗೆ ಶಿವಯೋಗಾಶ್ರಮದಲ್ಲಿ ಲಿಂಗೈಕ್ಯ ಶ್ರೀ ಜಯದೇವ ಮುರುಘರಾಜೇಂದ್ರ ಸ್ವಾಮೀಜಿಯವರ 62ನೇ ಸ್ಮರಣೋತ್ಸವ, ಶರಣ ಸಂಸ್ಕೃತಿ ಉತ್ಸವ ನಡೆಯಲಿವೆ.

ನಿತ್ಯ ಬೆಳಗ್ಗೆ ಸಹಜ ಶಿವಯೋಗ, ಸಂಜೆ ವೇದಿಕೆ ಕಾರ್ಯಕ್ರಮ ನಡೆಯಲಿವೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಜ.18ರ ಸಂಜೆ 6.30ಕ್ಕೆ ಸಾಧಕರ ಸಮಾವೇಶದಲ್ಲಿ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್ ಅವರಿಗೆ ಜಯದೇವಶ್ರೀ ಪ್ರಶಸ್ತಿ, ಧಾರವಾಡದ ಸಾಹಿತಿ ಡಾ.ಸಿ.ಆರ್. ಯರವಿನತೆಲಿಮಠ ಅವರಿಗೆ ಶೂನ್ಯಪೀಠ ಅಲ್ಲಮ, ಸಾಹಿತಿ ಕುಂ. ವೀರಭದ್ರಪ್ಪಗೆ ಶೂನ್ಯಪೀಠ ಚನ್ನಬಸವ, ತುಮಕೂರಿನ ಸಮಾಜ ಸೇವಕಿ ಭವ್ಯಾರಾಣಿ ಅವರಿಗೆ ‘ಶೂನ್ಯಪೀಠ ಅಕ್ಕನಾಗಮ್ಮ’ ಪ್ರಶಸ್ತಿ ನೀಡಲಾಗುವುದು. ತಲಾ 25 ಸಾವಿರ ರೂ. ನಗದಿನೊಂದಿಗೆ ಪ್ರಶಸ್ತಿ, ಸ್ಮರಣಿಕೆ ನೀಡಿ ಪುರಸ್ಕರಿಸಲಾಗುವುದು ಎಂದು ತಿಳಿಸಿದರು.

ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಗೃಹ ಸಚಿವ ಎಂ.ಬಿ. ಪಾಟೀಲ್, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ್ ಮತ್ತಿತರರು ಭಾಗವಹಿಸುವರು ಎಂದರು. ಅಂದು ಬೆಳಗ್ಗೆ 11ಕ್ಕೆ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿದೆ.

ಜ.19ರಂದು ಮಧುರೆಯ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ, ಲಾಲನಹಳ್ಳಿಯ ಜಯದೇವ ತಾಯಿ ಸಾನ್ನಿಧ್ಯದಲ್ಲಿ ಮಹಿಳಾ ಸಮಾವೇಶ ನಡೆಯಲಿದೆ. ಮಾಜಿ ಸಿಎಂ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕ ಎಸ್.ಎ. ರವೀಂದ್ರನಾಥ, ಮಾಜಿ ಸಚಿವ ವಿ. ಸೋಮಣ್ಣ, ಡಾ. ಮೈತ್ರೇಯಿಣಿ ಗದಿಗೆಪ್ಪಗೌಡರ, ಡಾ. ಪ್ರಭಾ ಮಲ್ಲಿಕಾರ್ಜುನ ಪಾಲ್ಗೊಳ್ಳುವರು. ಜಯದೇವ ಪ್ರತಿಭಾವಂತ ವಿದ್ಯಾರ್ಥಿ ಪ್ರಶಸ್ತಿ ನೀಡಲಾಗುವುದು.

20 ರಂದು ಧರ್ಮಾಧ್ಯಕ್ಷ ಡಾ.ಎಸ್.ಜಿ. ಪ್ರಾನ್ಸಿಸ್ ಸೆರಾವೋ, ನಂದಿಗುಡಿಯ ಶ್ರೀ ಸಿದ್ದರಾಮೇಶ್ವರ ಸ್ವಾಮೀಜಿ ಸಾನ್ನಿಧ್ಯದಲ್ಲಿ ಸಚಿವ ಎಸ್.ಆರ್. ಶ್ರೀನಿವಾಸ್, ಶಾಸಕ ಡಾ. ಶಾಮನೂರು ಶಿವಶಂಕರಪ್ಪ, ಸಂಸದ ಜಿ.ಎಂ. ಸಿದ್ದೇಶ್ವರ, ಪ್ರಗತಿಪರ ಚಿಂತಕ ರಂಜಾನ್‌ದರ್ಗಾ, ನಿಕೇತ್‌ರಾಜ್, ಶಾಸಕ ಪ್ರೊ.ಎನ್. ಲಿಂಗಣ್ಣ ಪಾಲ್ಗೊಳ್ಳುವರು. ಇದೇ ವೇಳೆ ಹುಬ್ಬಳ್ಳಿ ಕಾರಟಗಿ ಆಸ್ಪತ್ರೆಯ ಡಾ. ರಾಮಚಂದ್ರ ಕಾರಟಗಿ ಅವರನ್ನು ಸನ್ಮಾನಿಸಲಾಗುವುದು.

ಅಂದು ಬೆಳಗ್ಗೆ 9.45ಕ್ಕೆ ಉಚಿತ ಆರೋಗ್ಯ ತಪಾಸಣೆ, ಔಷಧಿ ವಿತರಣೆ ಇದೆ. ನಂತರ ಶ್ರೀ ಜಯದೇವ ಟ್ರೋಫಿ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.

ಗೋಷ್ಠಿಯಲ್ಲಿ ಅಥಣಿಯ ಶ್ರೀ ಶಿವಬಸವ ಸ್ವಾಮೀಜಿ, ಬ್ಯಾಡಗಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಿಳುವಳ್ಳಿಯ ಶ್ರೀ ನಿರಂಜನ ಸ್ವಾಮೀಜಿ, ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿ. ಬಸವರಾಜ್, ಎಂ. ಜಯಕುಮಾರ್, ಎಂ.ಕೆ. ಬಕ್ಕಪ್ಪ, ಓಂಕಾರಪ್ಪ, ಅಂದನೂರು ಮುಪ್ಪಣ್ಣ ಇದ್ದರು.