ಜ್ಞಾಪಕಶಕ್ತಿ, ಏಕಾಗ್ರತೆ ವೃದ್ಧಿಗೆ ಧ್ಯಾನ ಸಹಕಾರಿ

ದಾವಣಗೆರೆ: ನಿಯಮಿತ ವ್ಯಾಯಾಮ, ಧ್ಯಾನದಿಂದ ಜ್ಞಾಪಕಶಕ್ತಿ, ಏಕಾಗ್ರತೆ ವೃದ್ಧಿಸುತ್ತದೆಯೇ ಹೊರತು, ತಾಯಿತ, ಮಂತ್ರಿಸಿದ ನಿಂಬೆಹಣ್ಣಿನಿಂದ ಅಲ್ಲ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು.
ಲಿಂಗೈಕ್ಯ ಜಯದೇವ ಶ್ರೀಗಳ 62ನೇ ಸ್ಮರಣೋತ್ಸವ ಅಂಗವಾಗಿ ಶಿವಯೋಗಾಶ್ರಮದಲ್ಲಿ ಶುಕ್ರವಾರ ಆಯೋಜಿಸಿದ್ದ ವಿದ್ಯಾರ್ಥಿಗಳೊಂದಿಗೆ ಸಂವಾದದಲ್ಲಿ ಕೇಳಿಬಂದ ಅಭಿಪ್ರಾಯಗಳನ್ನು ಆಲಿಸಿ ಪ್ರತಿಕ್ರಿಯೆ ನೀಡಿದರು.

ಪರೀಕ್ಷೆಯಲ್ಲಿ ಪ್ರಶ್ನೆಪತ್ರಿಕೆ ನೋಡಿದಾಗ ಉತ್ತರಗಳು ನೆನಪಾಗಬೇಕೆ ಹೊರತು ಬೆವರು ಬರಬಾರದು. ಕಷ್ಟಪಟ್ಟು ಓದುವುದಕ್ಕಿಂತ ಇಷ್ಟಪಟ್ಟು ಅಧ್ಯಯನ ಮಾಡಿದರೆ ಎಲ್ಲ ವಿಷಯಗಳೂ ಅರ್ಥವಾಗುತ್ತವೆ ಎಂದರು.

ಹಿಂದಿ, ವಿಜ್ಞಾನ, ಸಮಾಜ ತರಗತಿಯಲ್ಲಿ ನಿದ್ದೆ ಬರುತ್ತದೆ. ಕೇಳಿದ್ದು, ಓದಿದ್ದು ಜ್ಞಾಪಕದಲ್ಲಿದೆ ಅನಿಸಿದರೂ, ಪರೀಕ್ಷೆಯಲ್ಲಿ ನೆನಪಾಗುವುದಿಲ್ಲ ಎಂದು ವಿದ್ಯಾರ್ಥಿಗಳು ಅಭಿಪ್ರಾಯ ಹಂಚಿಕೊಂಡರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಡಿಡಿಪಿಐ ಸಿ.ಆರ್. ಪರಮೇಶ್ವರಪ್ಪ, ಬಿಇಒ ಉಷಾಕುಮಾರಿ, ಪುಷ್ಪಲತಾ, ಮುಖ್ಯಶಿಕ್ಷಕ ದುರುಗಪ್ಪ ಉಪಸ್ಥಿತರಿದ್ದರು. ವಿವಿಧ ಶಾಲೆಗಳ 2 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಸಂವಾದದಲ್ಲಿ ಭಾಗವಹಿಸಿದ್ದರು.

Leave a Reply

Your email address will not be published. Required fields are marked *