ದಾವಣಗೆರೆ: ನಗರದ ಶ್ರೀ ಸೋಮೇಶ್ವರ ವಿದ್ಯಾಲಯದಲ್ಲಿ ಜ. 3ರಿಂದ ಮೂರು ದಿನಗಳ ಕಾಲ ಸೋಮೇಶ್ವರೋತ್ಸವ-2025 ವಾರ್ಷಿಕೋತ್ಸವ ಕಾರ್ಯಕ್ರಮ ನಡೆಯಲಿವೆ ಎಂದು ಶಾಲೆಯ ಪ್ರಾಚಾರ್ಯೆ ಪ್ರಭಾವತಿ ತಿಳಿಸಿದರು.
ಎಸ್ಸೆಸ್ಸೆಲ್ಸಿ ರಾಜ್ಯ ಹಾಗೂ ಕೇಂದ್ರ ಪಠ್ಯಕ್ರಮದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ವಿದ್ಯಾರ್ಥಿನಿ ವೈ. ಎಂ. ಸೃಜನಾ ಹಾಗೂ ವಿದ್ಯಾರ್ಥಿ ಎಚ್.ಎಂ. ಪವನ್ ಅವರಿಗೆ 25 ಸಾವಿರ ರೂ. ನಗದು ಸಹಿತ ಸೋಮೇಶ್ವರ ಸಾಧನಾ ಸಿರಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶೇ.90ಕ್ಕಿಂತ ಹೆಚ್ಚು ಅಂಕ ಪಡೆದ ವಿದ್ಯಾರ್ಥೀಗಳಿಗೆ ತಲಾ 5 ಸಾವಿರ ರೂ. ನಗದು ಪುರಸ್ಕಾರ, ಅಂತರಶಾಲಾ ಗೀತಗಾಯನ, ಚದುರಂಗ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಗಾನಸಿರಿ, ಚದುರಂಗ ಸಿರಿ ಪ್ರಶಸ್ತಿ ನೀಡಲಾಗುವುದು.
ಹಿರಿಯ ಸಾಹಿತಿ ಮಳಲ್ಕೆರೆ ಗುರುಮೂರ್ತಿ ಅವರಿಗೆ ಶಿಕ್ಷಣ ಸಿರಿ, ನಿವೃತ್ತ ಶಿಕ್ಷಕ ಮಹಲಿಂಗಪ್ಪ ಯಾದವ್, ಪಿಜಿಯೋಥೆರಪಿಸ್ಟ್ ಡಾ. ಬಸವರಾಜ್ ಶಿವಪೂಜೆ, ಕೆನರಾಬ್ಯಾಂಕ್ ಎಂಪ್ಲಾಯಿಸ್ ಯೂನಿಯನ್ ರಾಷ್ಟ್ರೀಯ ಕಾರ್ಯದರ್ಶಿ ಕೆ. ರಾಘವೇಂದ್ರ ನಾಯರಿ, ವಿಜಯವಾಣಿ ವಿಶೇಷ ವರದಿಗಾರ ರಮೇಶ್ ಜಹಗೀರ್‌ದಾರ್, ಪತ್ರಕರ್ತೆ ದೇವಿಕಾ ಸುನಿಲ್ ಅವರಿಗೆ ಸೋಮೇಶ್ವರ ಸಿರಿ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಹುಬ್ಬಳ್ಳಿಯ ಚಿನ್ಮಯ ಮಿಷನ್‌ನ ಸ್ವಾಮಿ ಕೃತಾತ್ಮಾನಂದ ದಿವ್ಯಸಾನ್ನಿಧ್ಯದಲ್ಲಿ, ಜ. 3ರಂದು ಸಂಜೆ 5-45ಕ್ಕೆ ಬಸವನ ಬಾಗೇವಾಡಿಯ ಸಾಹಿತಿ ಅಶೋಕ್ ಹಂಚಲಿ ಕಾರ್ಯಕ್ರಮ ಉದ್ಘಾಟಿಸುವರು. ವಿಧಾನ ಪರಿಷತ್‌ನ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ, ರಾಣೆಬೆನ್ನೂರಿನ ಮಾಜಿ ಶಾಸಕ ಅರುಣ್‌ಕುಮಾರ್ ಪೂಜಾರ್, ಶಾಲೆಯ ಆಡಳಿತ ನಿರ್ದೇಶಕ ಪಿ.ಎನ್.ಪರಮೇಶ್ವರಪ್ಪ ಪಾಲ್ಗೊಳ್ಳುವರು.
ಜ. 4ರಂದು ಸಂಜೆ ಹರಿಹರ ಪಂಚಮಸಾಲಿ ಪೀಠದ ಶ್ರೀ ವಚನಾನಂದ ಸ್ವಾಮೀಜಿ ಸಾನ್ನಿಧ್ಯದಲ್ಲಿ ಪ್ರತಿಭಾ ಪುರಸ್ಕಾರ ನಡೆಯಲಿದೆ. ಎಸ್ಪಿ ಉಮಾ ಪ್ರಶಾಂತ್, ಕಸಾಪ ಜಿಲ್ಲಾಧ್ಯಕ್ಷ ಬಿ. ವಾಮದೇವಪ್ಪ ಅತಿಥಿಗಳಾಗಿ ಭಾಗವಹಿಸುವರು. ಹಾರಿಕಾ ಮಂಜುನಾಥ್ ವಿಶೇಷ ಉಪನ್ಯಾಸ ನೀಡುವರು.
ಜ. 5ರಂದು ಸಂಜೆ ಸಮಾರೋಪ ನಡೆಯಲಿದ್ದು, ಜಗಳೂರು ಕಣ್ವಕುಪ್ಪೆ ಗವಿಮಠದ ಡಾ. ನಾಲ್ವಡಿ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್, ಡಿಡಿಪಿಐ ಜಿ. ಕೊಟ್ರೇಶ್, ಲಿಂಗಾಯತ ಪಂಚಮಸಾಲಿ ಪೀಠದ ಧರ್ಮದರ್ಶಿ ಬಿ.ಸಿ.ಉಮಾಪತಿ, ವೈದ್ಯ ಡಾ. ಅಂದನೂರು ರುದ್ರಮುನಿ ಪಾಲ್ಗೊಳ್ಳುವರು. ಹಿನ್ನೆಲೆಗಾಯಕಿ ಎಂ.ಡಿ.ಪಲ್ಲವಿ ಮತ್ತು ತಂಡದಿಂದ ಸುಶ್ರಾವ್ಯ ಸಂಗೀತ ನಡೆಸಿಕೊಡುವರು. ನಟ ರಮೇಶ್ ಅರವಿಂದ್ ಭಾಗವಹಿಸುವರು ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಆಡಳಿತ ನಿರ್ದೇಶಕ ಪಿ.ಎನ್.ಪರಮೇಶ್ವರಪ್ಪ, ಮುಖ್ಯ ಶಿಕ್ಷಕಿ ಎಚ್.ಕೆ. ಗಾಯತ್ರಿ, ಆಡಳಿತಾಧಿಕಾರಿ ಹರೀಶ್‌ಬಾಬು ಇದ್ದರು.
