More

  ಯಡಿಯೂರಪ್ಪರನ್ನು ಮುಟ್ಟಿದರೆ ಹುಷಾರ್    ಕಾಂಗ್ರೆಸ್ ಸರ್ಕಾರಕ್ಕೆ ರೇಣುಕಾಚಾರ್ಯ ಎಚ್ಚರಿಕೆ

  ದಾವಣಗೆರೆ: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪ್ರಕರಣಕ್ಕೆ ಮರುಜೀವ ನೀಡಲು ಕಾಂಗ್ರೆಸ್ ಷಡ್ಯಂತ್ರ ನಡೆಸಿದೆ. ಬಿಜೆಪಿ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ದೂರಿದರು.
  ಲೋಕಸಭಾ ಚುನಾವಣೆ ಪೂರ್ವದಲ್ಲಿ ದೂರು ನೀಡಿದ್ದ ಮಹಿಳೆ, ಮಾನಸಿಕ ಅಸ್ವಸ್ಥೆಯಾಗಿದ್ದು ಆಕೆಯ ಹೇಳಿಕೆ ನಿರಾಧಾರ ಎಂಬುದಾಗಿ ಸ್ವತಃ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದರು. ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು, 60 ದಿನದ ಬಳಿಕ ದಿಢೀರನೇ ಪ್ರಕರಣಕ್ಕೆ ಕಾಂಗ್ರೆಸ್ ಜೀವ ಕೊಡುತ್ತಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.
  ದೂರು ನೀಡಿದ್ದ ಮಹಿಳೆ ಮೃತಪಟ್ಟಿದ್ದು, ಅವರ ಜತೆಗೆ ವಾಸವಿರದಿದ್ದ ಮಗನಿಗೆ ಕಾಂಗ್ರೆಸ್ ಮುಖಂಡರು ನಾಲ್ಕು ದಿನದ ಹಿಂದೆ ಆಮಿಷವೊಡ್ಡಿದ್ದಾರೆ. ಬಿಎಸ್‌ವೈ ಅವರನ್ನು ಮೂಲೆಗುಂಪಾಗಿಸಲು ಎಐಸಿಸಿ ಮುಖಂಡ ರಣದೀಪ್ ಸುರ್ಜೇವಾಲಾ, ರಾಹುಲ್ ಗಾಂಧಿ ಅವರು ರಾಜ್ಯ ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಬಿಜೆಪಿಗೆ ಕೆಟ್ಟ ಹೆಸರು ತರುವ ಪ್ರಯತ್ನ ನಡೆದಿದೆ ಎಂದು ದೂರಿದರು.
  ಮೃತ ಮಹಿಳೆ ನೀಡಿದ್ದ ಪೋಕ್ಸೋದಡಿ ಐಎಎಸ್, ಐಪಿಎಸ್ ಅಧಿಕಾರಿಗಳು, ವಕೀಲರು, ಇತ ರಾಜಕಾರಣಿಗಳೂ ಸೇರಿ ಇತರ 52 ಜನರ ಮೇಲೆ ದೂರು ಇದೆ. ಅವರನ್ನೇಕೆ ಸರ್ಕಾರ ಬಂಧಿಸುತ್ತಿಲ್ಲ? ವಿಚಾರಣೆ ನಡೆಸುತ್ತಿಲ್ಲ? ಮೃತಳ ಗಂಡನ ಸಹೋದರ ಸಂಬಂಧಿಕರು ಬಾಲಕಿ ಮೆಲೆ ನಡೆಸಿದ್ದಾರೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಗಳನ್ನೇಕೆ ಬಂಧಿಸಿಲ್ಲ? ಎಂದು ಪ್ರಶ್ನಿಸಿದರು.
  ಬಜಾಜ್ ಕಂಪನಿಯಿಂದ 5 ಸಾವಿರ ಕೋಟಿ ರೂ. ವಾಪಾಸ್ ಕೊಡಿಸುವಂತೆ ಮೃತ ಮಹಿಳೆ ಕೇಳಿದ್ದರು. ಈ ಹಣ ಯಾವ ಖಾತೆಯಿಂದ ವರ್ಗಾವಣೆಯಾಗಿದೆ. ಅದರ ಬಗ್ಗೆಯೂ ಸರ್ಕಾರ ತನಿಖೆ ನಡೆಸಲಿ ಎಂದೂ ರೇಣುಕಾಚಾರ್ಯ ಸವಾಲು ಹಾಕಿದರು.
  ಬಿಎಸ್‌ವೈ ವಿರುದ್ಧದ ಷಡ್ಯಂತ್ರದ ಹಿಂದೆ ಸರ್ಕಾರದ ಪ್ರಭಾವಿ ಸಚಿವರ ಪಾತ್ರವಿದೆ. ಇದನ್ನು ಸಂದರ್ಭ ಬಂದಾಗ ಬಹಿರಂಗ ಪಡಿಸುವೆ ಎಂದ ರೇಣುಕಾಚಾರ್ಯ, ನೇರವಾಗಿ ಬಿಎಸ್‌ವೈ ಅವರನ್ನು ಬಂಧಿಸಿದರೆ ಸರ್ಕಾರಕ್ಕೆ ಕೆಟ್ಟ ಹೆಸರು ಬರಲಿದೆ ಎಂಬ ಕಾರಣಕ್ಕೆ ಕೋರ್ಟ್ ಮೂಲಕವೇ ಸರ್ಕಾರ ಬಂಧನದ ವಾರೆಂಟ್ ಕೊಡಿಸಿದೆ. ಕಾಂಗ್ರೆಸ್‌ಗೆ ರಾಜ್ಯದ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದರು.
  ಮಹಿಳೆ ದೂರು ಕೊಟ್ಟಾಗ ವಿಚಾರಣೆ ನಡೆಸುವ ಅಗತ್ಯವಿಲ್ಲ, ಧ್ವನಿ ಸ್ಯಾಂಪಲ್ ಕೇಳಿದ್ದ ಸಿಐಡಿ ಅಧಿಕಾರಿಗಳು ಇದೀಗ ನೋಟಿಸ್ ನೀಡಿದ್ದಾರೆ. ಯಡಿಯೂರಪ್ಪನವರು ತಲೆಮರೆಸಿಕೊಂಡಿಲ್ಲ. ಜೂ. 17ರಂದು ಸಿಐಡಿ ಎದುರು ಹಾಜರಾಗುವುದಾಗಿ ಸ್ಪಷ್ಟಪಡಿಸಿದ್ದಾರೆ.
  ಬಿಎಸ್‌ವೈ ಅವರು ಈ ಪ್ರಕರಣದಿಂದ ಬಗ್ಗುವುದಿಲ್ಲ. ಕುಗ್ಗುವುದೂ ಇಲ್ಲ. ಮತ್ತಷ್ಟು ಬಲಿಷ್ಠವಾಗಲಿದ್ದಾರೆ. ಅವರನ್ನು ಯಾರೇ ಟಚ್ ಮಾಡಿದರೂ ಹುಷಾರ್. ಅವರನ್ನು ಬಂಧಿಸಿದಲ್ಲಿ ರಾಜ್ಯವ್ಯಾಪಿ ಬಿಜೆಪಿ ಹೋರಾಟಕ್ಕಿಳಿಯಲಿದೆ ಎಂದೂ ಎಚ್ಚರಿಕೆ ನೀಡಿದರು.
  ಬಿಜೆಪಿ ಜಿಲ್ಲಾಧ್ಯಕ್ಷ ರಾಜಶೇಖರ್ ನಾಗಪ್ಪ, ಮುಖಂಡರಾದ ಮಾಡಾಳು ಮಲ್ಲಿಕಾರ್ಜುನ್, ಬಿ.ಎಂ.ಸತೀಶ್, ಧನಂಜಯ್ ಕಡ್ಲೇಬಾಳ್, ಸಂತೆಬೆನ್ನೂರು ಬಸವರಾಜ್ ಸುದ್ದಿಗೋಷ್ಠಿಯಲ್ಲಿದ್ದರು.
  ದರ್ಶನ್ ಚಿತ್ರಗಳು ಬ್ಯಾನ್ ಆಗಲಿ
  ಹತ್ಯೆಗೀಡಾದ ರೇಣುಕಸ್ವಾಮಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ನಟ ದರ್ಶನ್ ಅವರ ಎಲ್ಲ ಚಿತ್ರಗಳನ್ನು ಬ್ಯಾನ್ ಮಾಡಬೇಕು ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಗ್ರಹಿಸಿದರು.
  ದರ್ಶನ್, ಕಾನೂನನ್ನು ಕೈಗೆತ್ತಿಕೊಂಡಿದ್ದು ಅಪರಾಧ. ರೇಣುಕಸ್ವಾಮಿ ತಪ್ಪೆಸಗಿದ್ದಲ್ಲಿ ಕೋರ್ಟ್‌ನಲ್ಲಿ ಕೇಸ್ ದಾಖಲಿಸಬಹುದಿತ್ತು. ಸಿಟ್ಟಿದ್ದರೆ ಕಪಾಳಕ್ಕೆ ಹೊಡೆಯಬಹುದಿತ್ತು. ಆದರೆ ಇಷ್ಟು ಕ್ರೂರಿಯಾಗಿ ವರ್ತಿಸಿದ್ದು ಸರಿಯಲ್ಲ. ಇದಕ್ಕೆ ಸರಿಯಾದ ಶಿಕ್ಷೆಯಾಗಬೇಕು ಹಾಗೂ ಮೃತನ ಕುಟುಂಬಕ್ಕೆ ಸರ್ಕಾರ 1 ಕೋಟಿ ರೂ.ಗಳ ಪರಿಹಾರ ನೀಡಬೇಕು ಎಂದು ಪ್ರತಿಕ್ರಿಯಿಸಿದರು.

  See also  ಕರೊನಾ ನೆಪದಲ್ಲಿ ಧಾರ್ವಿುಕ ಆಚರಣೆಗೆ ತಡೆ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts