ಆರೆಸ್ಸೆಸ್ ಗಣವೇಷಧಾರಿಗಳ ಪಥ ಸಂಚಲನ

ದಾವಣಗೆರೆ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ 93ನೇ ವರ್ಷದ ಸಂಸ್ಥಾಪನಾ ದಿನದ ಅಂಗವಾಗಿ ಭಾನುವಾರ ಬೆಳಗ್ಗೆ ನಗರದಲ್ಲಿ ಆರ್‌ಎಸ್‌ಎಸ್‌ನ ಗಣವೇಷಧಾರಿಗಳ ಆಕರ್ಷಕ ಪಥ ಸಂಚಲನ ನಡೆಯಿತು.

ನಗರದ ಹೈಸ್ಕೂಲ್ ಮೈದಾನದಲ್ಲಿ ಭಗವಾಧ್ವಜಕ್ಕೆ ನಮಿಸಿ, ಆರೆಸ್ಸೆಸ್ ಗೀತೆ ಹಾಡುವ ಮೂಲಕ ಗೌರವ ಸಲ್ಲಿಸಲಾಯಿತು. ಆನಂತರ ಅಲ್ಲಿಂದ ಆರಂಭವಾದ ಪಥ ಸಂಚಲನದಲ್ಲಿ ಕೈಯಲ್ಲಿ ಲಾಠಿ ಹಿಡಿದ ಸ್ವಯಂ ಸೇವಕರು ಶಿಸ್ತುಬದ್ಧ ಹೆಜ್ಜೆ ಹಾಕಿದರು.

ಪ್ರವಾಸಿ ಮಂದಿರ ರಸ್ತೆ, ಜಾಧವ್ ಕ್ಲಿನಿಕ್ ರಸ್ತೆ, ಜನತಾ ಹೋಟೆಲ್ ರಸ್ತೆಯ ಮೂಲಕ ಪಿಬಿ ರಸ್ತೆ, ಕಿತ್ತೂರು ಚನ್ನಮ್ಮ ವೃತ್ತ, ರೈತರ ಬೀದಿ, ಎವಿಕೆ ಕಾಲೇಜು ರಸ್ತೆ ಮೂಲಕ ಹೈಸ್ಕೂಲ್ ಮೈದಾನಕ್ಕೆ ಮರಳಿತು. ವೈದ್ಯರು, ವಕೀಲರು, ಇಂಜಿನಿಯರ್, ವಿದ್ಯಾರ್ಥಿಗಳು, ವ್ಯಾಪಾರಿಗಳು ಸೇರಿ ಎಲ್ಲ ವೃತ್ತಿಪರರು ಭಾಗವಹಿಸಿದ್ದರು.

ಪಥ ಸಂಚಲನದಲ್ಲಿ ಘೋಷ್ ವಾದನ ಗಮನ ಸೆಳೆಯಿತು. ಮೆರವಣಿಗೆ ಮಾರ್ಗದ ಆಯಕಟ್ಟಿನ ಪ್ರದೇಶಗಳಲ್ಲಿ ರಾಷ್ಟ್ರನಾಯಕರು, ಸ್ವಾತಂತ್ರೃ ಯೋಧರ ಚಿತ್ರಪಟಗಳನ್ನು ಇರಿಸಲಾಗಿತ್ತು. ಮಾರ್ಗದುದ್ದಕ್ಕೂ ಮನೆಗಳ ಆವರಣದಲ್ಲಿ ರಂಗೋಲಿ ಹಾಕಿ ಸ್ವಾಗತಿಸಲಾಯಿತು. ಮನೆಗಳ ಮೇಲಿಂದ ಸ್ವಯಂ ಸೇವಕರ ಮೇಲೆ ಪುಷ್ಪಾರ್ಚನೆ ಮಾಡಲಾಯಿತು.

ಆರೆಸ್ಸೆಸ್‌ನ ವಿಭಾಗ ಸಂಪರ್ಕ ಪ್ರಮುಖ್ ಕೆ.ಎಸ್.ರಮೇಶ್, ಜಿಲ್ಲಾ ಸಂಘ ಚಾಲಕ ಉಮಾಪತಿ, ಜಿಲ್ಲಾ ಸಂಪರ್ಕ ಪ್ರಮುಖ್ ಅಜಿತ್ ಓಸ್ವಾಲ್, ಜಿಲ್ಲಾ ಕಾರ್ಯವಾಹ ಅರುಣ್ ಗುಡ್ಡದಕೇರಿ, ನಗರ ಕಾರ್ಯವಾಹ ನಂದೀಶ್, ನಗರ ಶಾರೀರಿಕ ಪ್ರಮುಖ ಕಿರಣ್, ಸಂಘ ಪರಿವಾರದ ಮುಖಂಡರಾದ ಕೆ.ಬಿ.ಶಂಕರನಾರಾಯಣ, ವೈ.ಮಲ್ಲೇಶ್ ಮತ್ತಿತರರು ಇದ್ದರು.