ನೆರೆಹಾನಿ ತ್ವರಿತ ಪರಿಹಾರ ಅಗತ್ಯ

ದಾವಣಗೆರೆ: ಜಿಲ್ಲೆಯ ನೆರೆಹಾನಿ ಸಂಬಂಧ ಪ್ರಕೃತಿ ವಿಕೋಪ ನಿರ್ವಹಣೆ ಅನುದಾನದಲ್ಲಿ ತ್ವರಿತ ಪರಿಹಾರ ಕ್ರಮ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ.ಸಂದೀಪ್ ಎಸ್.ದವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ ಅತಿವೃಷ್ಟಿ ಸಮಸ್ಯೆಗಳ ಪರಿಹಾರ ಕುರಿತು ಜಿಲ್ಲಾಡಳಿತ ಕಚೇರಿಯಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿದರು.

ನೆರೆಹಾವಳಿಯಿಂದ ಮನೆ ಕಳೆದುಕೊಂಡವರಿಗೆ ಪೂರಕ ವಸತಿ ಸೌಲಭ್ಯ ಕಲ್ಪಿಸಿ. ಹೊನ್ನಾಳಿ-ಹರಿಹರ ತಾಲೂಕಿನಲ್ಲಿ ವಾಸಿಸಲು ಯೋಗ್ಯವಿಲ್ಲದ ಮನೆಗಳಿದ್ದಲ್ಲಿ ಬೇರೆಡೆ ಜಾಗ ಗುರುತಿಸಿ ಗುಂಪು ವಸತಿಗಳನ್ನು ನಿರ್ಮಿಸಿ ಸಂತ್ರಸ್ತರಿಗೆ ಅಲ್ಲಿ ಶಾಶ್ವತ ನೆಲೆ ನೀಡಬೇಕೆಂದು ಹೇಳಿದರು.

ಜಗಳೂರು ತಾಲೂಕು ಮತ್ತು ನೀರಿನ ಕೊರತೆಯಿರುವ ಕಡೆಗಳಲ್ಲಿ ಕೊಳವೆಬಾವಿ ಸುತ್ತ ತಕ್ಷಣದಿಂದಲೇ ರೀಚಾರ್ಜ್ ಪಿಟ್‌ಗಳನ್ನು ನಿರ್ಮಿಸಬೇಕು. ಬಹುಗ್ರಾಮ ಕುಡಿವ ನೀರಿನ ಯೋಜನೆ ಜಾರಿಗೊಳಿಸಬೇಕೆಂದು ಜಿಪಂ ಸಿಇಒಗೆ ಸೂಚಿಸಿದರು.

ಹರಿಹರ ಗಂಜಿ ಕೇಂದ್ರದ ನಿವಾಸಿಗಳ ಮನೆಗಳು ಸುಸ್ಥಿತಿಯಲ್ಲಿದ್ದರೆ ನಗರಸಭೆಯಿಂದ ಸ್ವಚ್ಛಗೊಳಿಸಿ, ಸಂತ್ರಸ್ತರ ಖಾತೆಗೆ 10 ಸಾವಿರ ರೂ. ಜಮೆ ಮಾಡಿ ಕಳುಹಿಸಿಕೊಡಬೇಕು. ನೆರೆಹಾವಳಿಯ ದುರ್ಬಲ ಪ್ರದೇಶಗಳಲ್ಲಿ ಸಮರ್ಪಕ ವೈದ್ಯಕೀಯ ನೆರವು ಮತ್ತು ಸಾಂಕ್ರಾಮಿಕ ರೋಗ ಬಾರದಂತೆ ಕ್ರಮ ಕೈಗೊಳ್ಳುವಂತೆಯೂ ತಿಳಿಸಿದರು.

ಭತ್ತದ ಬೆಳೆ ಹಾನಿ ವಿವರವನ್ನು ಸಂಪೂರ್ಣಗೊಳಿಸಿದ ನಂತರ ಪರಿಹಾರ ಕ್ರಮ ಕೈಗೊಳ್ಳಬೇಕು. ಜಗಳೂರಿನಂತಹ ಬರಪೀಡಿತ ಪ್ರದೇಶಗಳಲ್ಲಿ ಕಡಿಮೆ ನೀರಿನಿಂದ ಬೆಳೆವ ಪೂರಕ ಬೆಳೆಗಳನ್ನು ಉತ್ತೇಜಿಸಬೇಕು. ಮಳೆಯೇ ಆಗದ ಕಡೆಗಳಲ್ಲಿ ಹಾನಿ ತೋರಿಸಲಾಗಿದೆ. ಕೂಡಲೆ ಹಾನಿ ಪ್ರಮಾಣವನ್ನು ಮರು ಪರಿಶೀಲಿಸಬೇಕು ಎಂದು ಸೂಚಿಸಿದರು.

ಜಿಲ್ಲಾಧಿಕಾರಿ ಜಿ.ಎನ್.ಶಿವಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ 339 ಮನೆ ಜಖಂ ಗೊಂಡು 38.55 ಲಕ್ಷ ರೂ. ಹಾನಿ ಸಂಭವಿಸಿದೆ. ಹೊದಿಗೆರೆ ಗ್ರಾಮದಲ್ಲಿ ಮನೆಗೋಡೆ ಕುಸಿದು ತಾಯಿ-ಮಗು ಮೃತಪಟ್ಟಿದ್ದು, ಮೃತರ ಕುಟುಂಬಕ್ಕೆ 10 ಲಕ್ಷ ರೂ. ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.

ಜಿಪಂ ಸಿಇಒ ಎಚ್.ಬಸವರಾಜೇಂದ್ರ, ಎಡಿಸಿ ಪದ್ಮಾ ಬಸವಂತಪ್ಪ, ಉಪ ವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಡಿಯುಡಿಸಿ ಯೋಜನಾ ನಿರ್ದೇಶಕಿ ನಜ್ಮಾ, ಪಾಲಿಕೆ ಆಯುಕ್ತ ಮಂಜುನಾಥ ಬಳ್ಳಾರಿ, ಎಚ್‌ಒ ಡಾ.ರಾಘವೇಂದ್ರಸ್ವಾಮಿ ಮತ್ತಿತರೆ ಇಲಾಖೆ ಅಧಿಕಾರಿಗಳಿದ್ದರು.

Leave a Reply

Your email address will not be published. Required fields are marked *