ಸುಧಾರಿಸದ ಫಲಿತಾಂಶ; ಕಾಲೇಜುಗಳಿಗೆ ಅಂಕುಶ?

ಡಿ.ಎಂ. ಮಹೇಶ್ ದಾವಣಗೆರೆ
ಶೈಕ್ಷಣಿಕ ಕೇಂದ್ರ ದಾವಣಗೆರೆಗೆ, ನಿನ್ನೆಯಷ್ಟೇ ಪ್ರಕಟವಾದ ದ್ವಿತೀಯ ಪಿಯು ಫಲಿತಾಂಶ ಸಮಾಧಾನ ತಂದಿಲ್ಲ. ಕಳೆದ ವರ್ಷ 23ನೇ ಸ್ಥಾನದಲ್ಲಿದ್ದ ಜಿಲ್ಲೆ, ಈ ಬಾರಿ ಒಂದು ಸ್ಥಾನ ಜಿಗಿತ ಕಂಡರೂ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇಕಡಾವಾರು ಫಲಿತಾಂಶ 0.76ರಷ್ಟು ಕುಸಿದಿದೆ.

18,764 ವಿದ್ಯಾರ್ಥಿಗಳ ಪೈಕಿ 11,734 ಮಂದಿ ತೇರ್ಗಡೆಯಾಗಿದ್ದಾರೆ. ಕಳೆದ ಬಾರಿ 63.29ರಷ್ಟು ಫಲಿತಾಂಶ ಗಳಿಸಿದ್ದ ಜಿಲ್ಲೆ, ಈ ಬಾರಿ 62.53ರಷ್ಟು ರಿಸಲ್ಟ್ ದಕ್ಕಿಸಿಕೊಂಡಿದೆ. ರಾಜ್ಯ ಮಟ್ಟದ ಫಲಿತಾಂಶ (ಶೇ. 68.68)ಕ್ಕಿಂತಲೂ ಪಾತಾಳಕ್ಕಿಳಿದಿದೆ. ಜಿಲ್ಲೆಯ ಕಳಪೆ ಸಾಧನೆ ಪಪೂ ಉಪನ್ಯಾಸಕರಿಗೆ ದಂಡನೀಯವಾಗುತ್ತದಾ ಎಂಬ ಪ್ರಶ್ನೆ ಕಾಡುತ್ತಿದೆ.

ಜಿಲ್ಲೆಯಲ್ಲಿ 51 ಸರ್ಕಾರಿ, 40 ಅನುದಾನಿತ ಹಾಗೂ 71 ಅನುದಾನ ರಹಿತ ಪಪೂ ಕಾಲೇಜಗಳಿವೆ. ಒಂದು ಕಾಲೇಜು ಮಾತ್ರವೇ ನೂರರಷ್ಟು ರಿಸಲ್ಟ್ ಪಡೆದ ಗೌರವ ಸಂಪಾದಿಸಿದೆ. 2 ಕಾಲೇಜು ಶೂನ್ಯ ಸಂಪಾದನೆಯೊಂದಿಗೆ ಮಾನ್ಯತೆ ರದ್ದತಿಯಾಗುವ ತೂಗುಗತ್ತಿಯಲ್ಲಿವೆ. ಕಳೆದ ವರ್ಷವೂ ಶೂನ್ಯ ಬಾರಿಸಿದ ಹರಪನಹಳ್ಳಿ ತಾಲೂಕಿನ ಎರಡು ಕಾಲೇಜುಗಳ ಮಾನ್ಯತೆ ರದ್ದಾಗಿತ್ತು.

ಕಳೆದ ಬಾರಿಯೇ ಪಪೂ ಉಪನ್ಯಾಸಕರಿಗೆ ಇಲಾಖೆ ಉಪನಿರ್ದೇಶಕರು ಎಚ್ಚರಿಕೆ ರವಾನಿಸಿದ್ದರು. ಟಾಪ್ 10 ಫಲಿತಾಂಶ ಬರುವ ನಿರೀಕ್ಷೆ ಇತ್ತು. ಅದೀಗ ಹುಸಿಯಾಗಿದೆ. ವಿಷಯವಾರು ಫಲಿತಾಂಶ ಹಿನ್ನಡೆ, ಶೇ.40 ಕ್ಕಿಂತಲೂ ಕಡಿಮೆ ರಿಸಲ್ಟ್ ಪಡೆದಿರುವ ಬಗ್ಗೆ ಪರಿಶೀಲನೆ ನಡೆಸಿ, ವಿಶ್ಲೇಷಣೆ ಸಹಿತ ನಿರ್ದಾಕ್ಷಿಣ್ಯ ಕ್ರಮಕ್ಕೆ ಇಲಾಖೆಗೆ ಶಿಫಾರಸು ಮಾಡುವ ಬಗ್ಗೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರಿದು ಕಾರ್ಯಗತವಾಗುತ್ತದೆಯೇ ಎಂಬುದೇ ಯಕ್ಷಪ್ರಶ್ನೆ.

ಗಮನಿಸಬೇಕಾದ ಅಂಶ ಎಂದರೆ, ಮೂಲಸೌಕರ್ಯಗಳಿಲ್ಲದ ಕಾರಣಕ್ಕೆ ಮಾನ್ಯತೆ ರದ್ದತಿ ಭೀತಿಯಲ್ಲಿರುವ ಕೆಲವು ಪಪೂ ಕಾಲೇಜುಗಳ ಪ್ರಕರಣ ಕೋರ್ಟ್ ಅಂಗಳದಲ್ಲಿವೆ. ಲ್ಯಾಬೋರೇಟರಿ, ಆಟದ ಮೈದಾನ ಮೊದಲಾದ ಸೌಕರ್ಯ ಕಲ್ಪಿಸದೆ ಗುಣಮಟ್ಟದ ಶಿಕ್ಷಣ ಕೊಡಲು ಸಾಧ್ಯವಾ ಎಂದು ಕೆಲ ಪಪೂ ಕಾಲೇಜು ಉಪನ್ಯಾಸಕರೂ ಕೂಡ ಅಳಲು ಹೇಳಿಕೊಳ್ಳುತ್ತಿದ್ದಾರೆ. ಪರಿಣಾಮಕಾರಿ ಫಲಿತಾಂಶಕ್ಕಾಗಿ ಕೆಲವು ಕಾಲೇಜುಗಳಲ್ಲಿ ಮೂರ್ನಾಲ್ಕು ಬಾರಿ ಪರೀಕ್ಷೆ ನಡೆದಿವೆ. 2-3 ಸಭೆ ನಡೆಸಿದ್ದಾಗ್ಯೂ ಕೆಲವೆಡೆ ಸೂಚಿಸಿದ ಕೆಲ ಮಾನದಂಡಗಳನ್ನು ಪಾಲಿಸದಿರುವ ಬಗ್ಗೆ ಇಲಾಖೆಗೆ ಮನವರಿಕೆ ಆಗಿದೆ. ನ್ಯೂನತೆ ಕಂಡುಬಂದಲ್ಲಿ ಇಲಾಖಾನುಸಾರ ಶೇ.1ರಷ್ಟು ಇಂಕ್ರಿಮೆಂಟ್ ತಡೆಹಿಡಿಯಲು ಅವಕಾಶವಿದೆ.

ಫಲಿತಾಂಶ ಸುಧಾರಿಸಿಲ್ಲ ಎಂಬುದು ಗಮನಕ್ಕಿದೆ. ಕಳೆದ ವರ್ಷದ ಯಥಾಸ್ಥಿತಿ ಮುಂದುವರಿದಿದೆ. ಕಾಲೇಜುಗಳಿಗೆ ಎಚ್ಚರಿಕೆ ಜತೆಗೆ ನೋಟಿಸ್ ನೀಡಿದ್ದೆವು. ಇನ್ನು ಎಚ್ಚರಿಕೆ ನೀಡುವ ಮಾತಿಲ್ಲ. ಶೀಘ್ರವೇ ಉಪನ್ಯಾಸಕರ ಸಭೆ ಕರೆದು ಚರ್ಚಿಸಲಾಗುವುದು. ವ್ಯತ್ಯಯವಾಗಿದ್ದಲ್ಲಿ ಶಿಸ್ತುಕ್ರಮಕ್ಕಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗುವುದು.
ಎಚ್.ಕೆ. ಶೇಖರಪ್ಪ ಪದವಿ ಪೂರ್ವ ಶಿಕ್ಷಣ ಇಲಾಖೆ ಡಿಡಿ