ದಾವಣಗೆರೆ: ಪ್ರಗತಿಯಲ್ಲಿ ಹಿಂದುಳಿದ ಜಗಳೂರು, ಹರಪನಹಳ್ಳಿ ತಾಲೂಕುಗಳಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಆದ್ಯತೆ ನೀಡಿ, ಹಂತ ಹಂತವಾಗಿ ಅಭಿವೃದ್ಧಿ ಪಡಿಸಲಾಗುವುದು ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಭರವಸೆ ನೀಡಿದರು.
ಜಗಳೂರು ತಾಲೂಕಿನ ಕಲ್ಲೇದೇವರಪುರ ಗ್ರಾಮದಲ್ಲಿ ಶುಕ್ರವಾರ ಸಂಜೆ ಐತಿಹಾಸಿಕ ಕಲ್ಲೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ವಿವಿಧ ದೇವಸ್ಥಾನಗಳ ಜೀರ್ಣೋದ್ಧ್ದಾರಕ್ಕೆ ಭೂಮಿ ಪೂಜೆ ಹಾಗೂ ಕೋಡಿ ಬಿದ್ದ ಸಂಗೇನಹಳ್ಳಿ ಕೆರೆಗೆ ಬಾಗಿನ ಅರ್ಪಿಸಿ ಮಾತನಾಡಿದರು.
ಶಾಸಕ ಬಿ. ದೇವೇಂದ್ರಪ್ಪ ಮಾತನಾಡಿ, ಕೆರೆಗಳು ತುಂಬಿವೆ. ಕೆಲವು ಕಡೆ ರಸ್ತೆಗಳಲ್ಲಿ ನೀರು ಹರಿಯುವುದರಿಂದ ಓಡಾಡಲು ಸಮಸ್ಯೆಯಾಗುತ್ತಿದೆ. ಹಾಗಾಗಿ, ಮೇಲ್ಸೇತುವೆ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆೆ ಎಂದರು.
ಗ್ರಾಪಂ ಅಧ್ಯಕ್ಷ ಕೊಟ್ಟಿಗೆ ತಿಪ್ಪೇಸ್ವಾಮಿ, ವಸಂತಕುಮಾರಿ, ಉಪಾಧ್ಯಕ್ಷೆ ಅನ್ನಪೂರ್ಣಮ್ಮ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹ್ಮದ್, ಮುಖಂಡರಾದ ಕೆ.ಪಿ.ಪಾಲಯ್ಯ, ಕಲ್ಲೇಶ್‌ರಾಜ್ ಪಟೇಲ್, ಸಣ್ಣಸೂರಯ್ಯ, ಕೆ.ಟಿ. ಬಡಯ್ಯ, ಶಿವನಗೌಡ, ಡಿ.ಎಸ್. ಕಲ್ಲಪ್ಪ, ಬಿ. ಮಹೇಶ್ವರಪ್ಪ ಇದ್ದರು.
ಮೇಲ್ಸೇತುವೆ ನಿರ್ಮಾಣಕ್ಕೆ ಮನವಿ
ಇದೇ ವೇಳೆ ಸಾಹಿತಿ ಡಾ. ಅಶೋಕಕುಮಾರ್ ಸಂಗೇನಹಳ್ಳಿ ಗ್ರಾಮಸ್ಥರ ಪರ ಮನವಿ ಸಲ್ಲಿಸಿ, ಐತಿಹಾಸಿಕ ಸಂಗೇನಹಳ್ಳಿ ಕೆರೆ ಕಳೆದ 15 ವಷರ್ಗಳಿಂದ ಸತತ ಮೂರು ಬಾರಿ ಕೆರೆಕೋಡಿ ಬಿದ್ದರೂ ಕೆಲ ಅವೈಜ್ಞಾನಿಕ ಕಾಮಗಾರಿಗಳಿಂದ ರೈತರಿಗೆ ಪ್ರಯೋಜನವಾಗುತ್ತಿಲ್ಲ. ಗ್ರಾಮಕ್ಕೆ ಸೂಕ್ತ ರಸ್ತೆ ಸಂಚಾರ ಸಂಪರ್ಕಕ್ಕಾಗಿ ಮೇಲ್ಸೇತುವೆ ನಿರ್ಮಾಣ ಮಾಡಿ ಎಂದರು.
ಕೆರೆ ಏರಿ ಸುತ್ತ ಇರುವ ಜಾಲಿಗಿಡ ತೆರವುಗೊಳಿಸಬೇಕು. ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಸಿರಿಧಾನ್ಯಗಳ ಬೆಳೆಯುವ ಹಬ್ ಮತ್ತು ಪ್ರವಾಸಿ ತಾಣವಾಗಬೇಕಿದೆ. ಸಂಗೇನಹಳ್ಳಿ ಕೆರೆ ಸಮೀಪ ಮತ್ಸೊೃೀದ್ಯಮಕ್ಕೆ ಉತ್ತೇಜನ ನೀಡಬೇಕು, ಗುಡಿ ಕೈಗಾರಿಕೆಗೆ ಉತ್ತೇಜನ, ಗ್ರಾಮಕ್ಕೆ ವಾಲ್ಮೀಕಿ ಭವನ ನಿರ್ಮಾಣಕ್ಕೆ ಸಂಸದರು, ಶಾಸಕರು ತುರ್ತು ಕ್ರಮ ಕೈಗೊಳ್ಳಬೇಕು ಎಂದರು.
ಹೆದ್ದಾರಿ ಪಕ್ಕ ಗಾರ್ಮೆಂಟ್ ಸ್ಥಾಪನೆ
ಈಗಾಗಲೇ 57 ಕೆರೆಗಳಿಗೆ ನೀರು ಹರಿದು ಬರುತ್ತಿದೆ. ಸಮೃದ್ಧ ಮಳೆಯಾಗಿದೆ. ಇನ್ನು ಮುಂದೆ ನಿರುದ್ಯೋಗಿಗಳಿಗೆ ಉದ್ಯೋಗವಕಾಶ ಕಲ್ಪಿಸಲು ಶ್ರಮಿಸಲಾಗುವುದು. ಸ್ಥಳೀಯ ನಿರುದ್ಯೋಗ ಸಮಸ್ಯೆ ನಿವಾರಣೆಗಾಗಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಗಾರ್ಮೆಂಟ್ ಸ್ಥಾಪಿಸಲಾಗುವುದು ಎಂದು ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ಗ್ರಾಮಸ್ಥರು ಹಾಗೂ ಕೆರೆ ಸಮಿತಿ, ಶಾಸಕರೊಡನೆ ಚರ್ಚಿಸಿ ಪ್ರವಾಸಿ ತಾಣ, ಸಿರಿಧಾನ್ಯ ಕೇಂದ್ರ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಭಿವೃದ್ಧಿ ಕಾಮಗಾರಿ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಬಳಿ ನಿಯೋಗ ತೆರಳೋಣ ಎಂದರು.