ಸುಂದರ ಮಹಾನಗರಕ್ಕೆ ಪಣ

ದಾವಣಗೆರೆ: ಪ್ಲಾಸ್ಟಿಕ್ ಮುಕ್ತ, ಸ್ವಚ್ಛ, ಸುಂದರ ಮಹಾನಗರಕ್ಕೆ ಪಾಲಿಕೆ ನಿರ್ಧಾರ ತೆಗೆದುಕೊಳ್ಳಲಾಯಿತು.

ಪಾಲಿಕೆ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಪ್ಲಾಸ್ಟಿಕ್ ನಿಷೇಧ ಕುರಿತ ಹೋಟೆಲ್ ಉದ್ದಿಮೆದಾರರು, ಪರಿಸರ ಪ್ರೇಮಿಗಳು, ಮಾರಾಟಗಾರರು, ಸಾರ್ವಜನಿಕರ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸುಪ್ರೀಂ ಕೋರ್ಟ್‌ನ ರಾಷ್ಟ್ರೀಯ ಹಸಿರು ನ್ಯಾಯಪೀಠವು ಸೆ.1ರಿಂದ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಿಸಲು ಸೂಚಿಸಿದ್ದು, ಇದು ಪಾಲಿಕೆ ವ್ಯಾಪ್ತಿಯಲ್ಲಿ ಸಂಪೂರ್ಣ ಜಾರಿಯಾಗಲಿದೆ. ನಿಯಮ ಉಲ್ಲಂಘಿಸಿದರೆ ಸಂಬಂಧಿತರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ ಎಚ್ಚರಿಕೆ ನೀಡಿದರು.

ಬೆಂಗಳೂರು, ದಾವಣಗೆರೆಯಂತಹ ಮಹಾನಗರ ಪಾಲಿಕೆಗಳಲ್ಲಿ ಪ್ರತಿ ತಿಂಗಳು 1 ಲಕ್ಷ ಹಾಲಿನ ಪ್ಲಾಸ್ಟಿಕ್ ಪ್ಯಾಕೆಟ್ ತ್ಯಾಜ್ಯ ಬರುತ್ತಿದೆ. ಇದು ಮಣ್ಣು, ಜಲಮೂಲಗಳಿಗೆ ಸೇರುತ್ತಿದೆ. ಸೆಪ್ಟೆಂಬರ್‌ನ್ನು ಪರಿಸರ ತಿಂಗಳೆಂದು ಭಾವಿಸಿ ಇವುಗಳನ್ನು ರಕ್ಷಿಸುವ ಅಗತ್ಯವಿದೆ ಎಂದರು.

ಪಾಲಿಕೆ ಆರೋಗ್ಯ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ್ ಸುಂಕದ್ ಮಾತನಾಡಿ, ಪ್ಲಾಸ್ಟಿಕ್ ಬಳಕೆಗೆ ಆ.31ರಂದು ಕೊನೇ ದಿನವಾಗಿದ್ದು, ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ಸಾರ್ವಜನಿಕ ಅಭಿವೃದ್ಧಿ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ.ಜಿ.ಶ್ರೀಕಾಂತ್ ಮಾತನಾಡಿ, ಸ್ವಸಹಾಯ ಮಹಿಳಾ ಸಂಘಗಳು, ದಾವಣಗೆರೆಯಲ್ಲಿ 120ಕ್ಕೂ ಅಧಿಕ ಪವರ್‌ಲೂಮ್‌ಗಳಿದ್ದು, ಇವುಗಳಿಂದ ಬಟ್ಟೆ ಕೈಚೀಲ ಉತ್ಪಾದನೆಗೆ ಮುಂದಾಗಬೇಕು ಎಂದರು.

ನಿವೃತ್ತ ಪರಿಸರ ಇಂಜಿನಿಯರ್ ಸಿದ್ದಬಸಪ್ಪ ಮಾತನಾಡಿ, ಪ್ಲಾಸ್ಟಿಕ್ ನಿಷೇಧಿಸಲು ವಾರ್ಡ್‌ವಾರು ತಂಡ ರಚಿಸಬೇಕು ಎಂದು ತಿಳಿಸಿದರು.

ಉಪಾಧ್ಯಕ್ಷ ಪ್ರಭಾಕರ್ ಶೆಟ್ಟಿ, ಆರೋಗ್ಯ ನಿರೀಕ್ಷಕ ಅಲ್ತಾಮಷ್, ವ್ಯಾಪಾರಸ್ಥ ಚಂದನ್, ಶಿವಕುಮಾರ್, ವಿಕಾಸ್, ಮಧು, ಪರಿಸರ ಪ್ರೇಮಿ ಗಿರೀಶ್ ದೇವರಮನೆ, ಕರುನಾಡ ಸಮರ ಸೇನೆ ಅಧ್ಯಕ್ಷ ಗೋಪಾಲಗೌಡ್ ಇತರರಿದ್ದರು.

2016ರಿಂದ ದಾವಣಗೆರೆಯ 150 ಹೋಟೆಲ್‌ಗಳಲ್ಲಿ ಪ್ಲಾಸ್ಟಿಕ್ ಬಳಕೆ ಕಡಿಮೆಗೊಳಿಸಲಾಗುತ್ತಿದೆ. ಆದರೆ, ಗ್ರಾಹಕರೆದುರು ನಮ್ಮನ್ನು ಕಳ್ಳರೆಂದು ಪ್ರತಿಬಿಂಬಿಸಬೇಡಿ. ಅಗತ್ಯವಿದ್ದರೆ ದಂಡ ವಿಧಿಸಿದರೆ ಅಭ್ಯಂತರವಿಲ್ಲ ಎಂದು ಹೋಟೆಲ್ ಮಾಲೀಕರ ಸಂಘ ಕಾರ್ಯದರ್ಶಿ ಬಿ.ಕೆ.ಸುಬ್ರಹ್ಮಣ್ಯ ತಿಳಿಸಿದರು.