ದಾವಣಗೆರೆ: ಕೃಷಿ ಪಂಪ್‌ಸೆಟ್‌ಗಳ ಆರ್.ಆರ್. ನಂಬರ್‌ಗಳಿಗೆ ಆಧಾರ್ ಜೋಡಣೆ ಮಾಡುವ ನಿರ್ಧಾರ ಕೈಬಿಡಬೇಕೆಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ (ಹುಚ್ಚವ್ವನಹಳ್ಳಿ ಮಂಜುನಾಥ ಬಣ) ಕಾರ್ಯಕರ್ತರು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ತಹಸೀಲ್ದಾರ್ ಕಚೇರಿ ಆವರಣದಿಂದ ಪಿಬಿ ರಸ್ತೆ ಮೂಲಕ ಮಹಾತ್ಮ ಗಾಂಧಿ ವೃತ್ತ ತಲುಪಿ ಮಾನವ ಸರಪಳಿ ರಚಿಸಿದ ಕಾರ್ಯಕರ್ತರು ನಂತರ ಜಯದೇವ ವೃತ್ತ ಮೂಲಕ ಬೆಸ್ಕಾಂ ಆಧೀಕ್ಷಕ ಇಂಜಿನಿಯರ್ ಕಚೇರಿಗೆ ತೆರಳಿ, ಸುರಿಯುವ ಮಳೆಯಲ್ಲೂ ಪ್ರತಿಭಟನೆ ನಡೆಸಿದರು.
ಕೃಷಿ ಪಂಪ್‌ಸೆಟ್‌ಗಳಿಗೆ ಸಂಪೂರ್ಣ ಉಚಿತ ವಿದ್ಯುತ್ ಪೂರೈಸಬೇಕು. ವಿದ್ಯುಶ್ಚಕ್ತಿ ಖಾಸಗೀಕರಣ ಮಾಡಬಾರದು. ವಿದ್ಯುತ್ ಪರಿವರ್ತಕ ಸುಟ್ಟ 24 ಗಂಟೆಯೊಳಗಾಗಿ ಬೇರೆ ಪರಿವರ್ತಕಗಳನ್ನು ಒದಗಿಸಬೇಕು. ಅಕ್ರಮ-ಸಕ್ರಮ ಯೋಜನೆ ಮರು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಹಿಂದಿನ ರಾಜ್ಯ ಸರ್ಕಾರದ ಅವಧಿಯಲ್ಲಿ ಪ್ರತಿ ರೈತನಿಗೆ 10 ಎಚ್‌ಪಿವರೆಗೂ ಉಚಿತ ವಿದ್ಯುತ್ ನೀಡಿ, ಉಳಿದ ವಿದ್ಯುತ್ ಬಳಕೆಗೆ ಶುಲ್ಕ ಭರಿಸುವಂತೆ ಕಾಯ್ದೆ ಜಾರಿಗೊಳಿಸಲಾಗಿತ್ತು. ಅದರ ಭಾಗವಾಗಿ ಅಂದಿನ ಸರ್ಕಾರ ಕೃಷಿ ಪಂಪ್‌ಸೆಟ್‌ಗಳಿಗೆ ಆಧಾರ್ ಜೋಡಣೆ ಮಾಡುವ ಸಂಚು ರೂಪಿಸಿದೆ ಎಂದು ಸಂಘಟನೆ ಅಧ್ಯಕ್ಷ ಹುಚ್ಚವ್ವನಹಳ್ಳಿ ಮಂಜುನಾಥ್ ಅಸಮಾಧಾನ ವ್ಯಕ್ತಪಡಿಸಿದರು.
ಹಿಂದಿನ ಹಲವಾರು ಸರ್ಕಾರಗಳು ಕೃಷಿ ಪಂಪ್‌ಸೆಟ್‌ಗಳಿಗೆ ವಿವಿಧ ರೀತಿಯಲ್ಲಿ ಮೀಟ್ ಅಳವಡಿಸಲು ಪ್ರಯತ್ನಿಸಿದ್ದರೂ ರೈತರು ಪ್ರತಿರೋಧ ಒಡ್ಡಿದ್ದರಿಂದ ಇದು ಸ್ಥಗಿತವಾಗಿತ್ತು. ಕೇಂದ್ರ ಸರ್ಕಾರ ವಿದ್ಯುಶ್ಚಕ್ತಿಯನ್ನು ಖಾಸಗೀಕರಣಗೊಳಿಸುವ ಪ್ರಯತ್ನದಲ್ಲಿದೆ.
ಇದರ ಭಾಗವಾಗಿ ಪಂಪ್‌ಸೆಟ್‌ದಾರರಿಗೆ ಮೀಟರ್ ಅಳವಡಿಸಿ ಶುಲ್ಕ ನಿಗದಿ ಮಾಡಲು ಹೊರಟಿದೆ. ಯಾವ ಕಾರಣಕ್ಕೂ ಪಂಪ್‌ಸೆಟ್‌ಗಳಿಗೆ ಮೀಟರ್ ಅಳವಡಿಸಲು ಅವಕಾಶ ನೀಡುವುದಿಲ್ಲ ಎಂದು ಹೇಳಿದರು.
ರಾಜ್ಯ ಸರ್ಕಾರ ಅಕ್ರಮ ಸಕ್ರಮ ಕಾಯ್ದೆಯನ್ನು ರದ್ದು ಮಾಡಿದ್ದು ಇದರಿಂದ ಕೆಲವು ರೈತರಿಗೆ ತೀವ್ರ ತೊಂದರೆಯಾಗಿದೆ. ಕೂಡಲೆ ಅಕ್ರಮ ಸಕ್ರಮ ಯೋಜನೆಯನ್ನು ಮರು ಜಾರಿಗೊಳಿಸಿ ಅನುಕೂಲ ಕಲ್ಪಿಸಬೇಕು. ಈ ಹಿಂದಿನಂತೆಯೇ ವಿದ್ಯುತ್‌ಕಂಬ, ತಂತಿ, ವಿದ್ಯುತ್ ಪರಿವರ್ತಕಗಳನ್ನು ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಾವಣಗೆರೆ ತಾಲೂಕು ಅಧ್ಯಕ್ಷ ಹೂವಿನಮಡು ನಾಗರಾಜ್, ಚನ್ನಗಿರಿ ಅಧ್ಯಕ್ಷ ಯಲೋದಹಳ್ಳಿ ರವಿಕುಮಾರ್, ಹರಿಹರ ಅಧ್ಯಕ್ಷ ಕಡರನಾಯಕನಹಳ್ಳಿ ಪ್ರಭುಗೌಡ, ಚಿಕ್ಕಮಲ್ಲನಹೊಳೆ ಚಿರಂಜೀವಿ, ಅರಕೆರೆ ನಾಗರಾಜ್, ರಾಜನಹಟ್ಟಿ ರಾಜು, ಅಸ್ತಾಪನಹಳ್ಳಿ ಗಂಡುಗಲಿ, ಬಸಪ್ಪ ಗರಡಿಮನಿ, ಆಲೂರು ಪರಶುರಾಂ, ಚಿಕ್ಕಕೋಗಲೂರು ಕುಮಾರ್, ಹುಚ್ಚವ್ವನಹಳ್ಳಿ ಪ್ರಕಾಶ್, ಬಸಾಪುರ ಸಿದ್ದೇಶ್, ಯರವನಾಗ್ತಿಹಳ್ಳಿ ರುದ್ರಣ್ಣ ಹಾಗೂ ರೈತ ಮಹಿಳೆಯರಿದ್ದರು.