ದಾವಣಗೆರೆ: ಮಹಿಳೆಯರು ಭಯಪಡದೇ ಧೈರ್ಯವಾಗಿ ಸಾಧನೆಯ ಹಾದಿಯಲ್ಲಿ ಸಾಗಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ್ ಹೇಳಿದರು.
ಜಿಲ್ಲಾ ಮಹಿಳಾ ಉದ್ಯಮಿಗಳ ಸಂಘ ‘ಪ್ರೇರಣಾ’ ವತಿಯಿಂದ ಸಿ.ಕೆ.ವೃತ್ತಿ ತರಬೇತಿ ಕೇಂದ್ರದಲ್ಲಿ ಶುಕ್ರವಾರ ಆಯೋಜಿಸಿದ್ದ, ಸರ್ ನಎಂ.ವಿಶ್ವೇಶ್ವರಯ್ಯ ಜನ್ಮ ದಿನಾಚರಣೆ ಹಾಗೂ ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು.
ಇತಿಹಾಸವನ್ನು ಅವಲೋಕಿಸಿದಾಗ ಮಹಿಳೆಯರು ಬಹಳಷ್ಟು ಸಾಧನೆ ಮಾಡಿದ್ದಾರೆ. ಸ್ವಾತಂತ್ರೃ ಹೋರಾಟದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಅವರನ್ನು ಮರೆಯುವಂತಿಲ್ಲ. ಇಂದಿರಾ ಗಾಂಧಿ ಸುದೀರ್ಘ ಅವಧಿಗೆ ಪ್ರಧಾನಿಯಾಗಿ ಆಡಳಿತ ನಡೆಸಿದರು ಎಂದು ತಿಳಿಸಿದರು.
ಮಾಜಿ ಸಚಿವೆ ನಾಗಮ್ಮ ಕೇಶವಮೂರ್ತಿ ಅವರು ಮಹಿಳೆಯರಲ್ಲಿದ್ದ ಭಯವನ್ನು ಕಿತ್ತು ಹಾಕಿ ಅವರನ್ನು ದುಡಿಮೆಗೆ ಹಚ್ಚಿದರು ಎಂದು ಶ್ಲಾಘಿಸಿದರು.
ಉತ್ತಮ ಮಹಿಳಾ ಉದ್ಯಮಿ ಪ್ರಶಸ್ತಿ ಸ್ವೀಕರಿಸಿದ ಶಾಮಲಾ ಪ್ರಸಾದ್ ಮಾತನಾಡಿ, ಮಹಿಳೆಯರಿಗೆ ಕುಟುಂಬದಿಂದ ನಿರ್ಬಂಧ ಹೇರದೇ ಪ್ರೋತ್ಸಾಹ ನೀಡಿದರೆ ಸಾಧನೆ ಮಾಡಲು ಸಾಧ್ಯ. ಸರ್ಕಾರಿ ಉದ್ಯೋಗಕ್ಕಿಂತ ಸ್ವಂತ ಉದ್ಯಮ ಆರಂಭಿಸಿ ನಾವೇ ಇತರರಿಗೆ ಕೆಲಸ ಕೊಡುವಂತೆ ಆಗಬೇಕು ಎಂದರು.
ಇದೇ ವೇಳೆ ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಪೌಷ್ಟಿಕ ಕೈತೋಟ ಮತ್ತು ಶ್ರೀ ಸತ್ಯಸಾಯಿ ಸೇವಾ ಸಮಿತಿಯಿಂದ ಹೊಲಿಗೆ ತರಬೇತಿ ಮತ್ತು ಬ್ಯೂಟೀಷಿಯನ್ ತರಬೇತಿ ಮುಕ್ತಾಯ ಸಮಾರಂಭವೂ ನೆರವೇರಿತು.
ಸ್ವಚ್ಛ ಭಾರತ್ ಅಭಿಯಾನದ ಡಾ.ಶಾಂತಾ ಭಟ್, ಐಸಿಎಆರ್-ತರಳಬಾಳು ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ.ಟಿ.ಎನ್.ದೇವರಾಜ್, ತೋಟಗಾರಿಕೆ ವಿಜ್ಞಾನಿ ಎಂ.ಜಿ.ಬಸವನಗೌಡ, ಪ್ರೇರಣಾ ಸಂಘದ ಅಧ್ಯಕ್ಷೆ ನಾಗರತ್ನಾ ಜಗದೀಶ್ ಇದ್ದರು.