ಮಕರ ಸಂಕ್ರಮಣಕ್ಕೆ ಎಲ್ಲೆಡೆ ಸಂಭ್ರಮದ ಕಿರಣ..

blank

ದಾವಣಗೆರೆ: ಕ್ಯಾಲೆಂಡರ್ ವರ್ಷದ ಮೊದಲ ಹಬ್ಬ ಮಕರ ಸಂಕ್ರಮಣಕ್ಕೆ ದಾವಣಗೆರೆ ನಗರಾದ್ಯಂತ ಭವ್ಯ ಸ್ವಾಗತ ದೊರಕಿತು. ಪ್ರಮುಖ ಉದ್ಯಾನಗಳು, ಪ್ರವಾಸಿ ತಾಣಗಳು ಜನರ ಸಡಗರವನ್ನು ಇಮ್ಮಡಿಗೊಳಿಸಿದವು.
ಬಿಸಿಲಿನ ಕಾವು ಏರಿದ್ದರೂ ಸರ್ ಎಂ.ವಿಶ್ವೇಶ್ವರಯ್ಯ ಪಾರ್ಕ್, ಕಾಸಲ್ ಶ್ರೀನಿವಾಸ ಶೆಟ್ಟಿ ಪಾರ್ಕ್, ಚಿಣ್ಣರ ಉದ್ಯಾನ, ಗಂಗೂಬಾಯಿ ಹಾನಗಲ್ ಇನ್ನಿತರೆ ಪಾರ್ಕ್‌ಗಳ ಮರಗಳ ನೆರಳಿನ ಆಶ್ರಯದಲ್ಲಿ ಕುಟುಂಬ ಸದಸ್ಯರು ಸಂಭ್ರಮಿಸಿದರು.
ಮನೆಯಿಂದ ತಂದ ಚಾಪೆ, ಪ್ಲಾಸ್ಟಿಕ್ ಹಾಸು, ಹೊದಿಕೆ ಹಾಸಿ ಕೂತರು. ಎಲ್ಲೆಡೆ ಊಟದ ಬ್ಯಾಗ್ ಜತೆ ನೀರಿನ ಕ್ಯಾನ್‌ಗಳು ಕಂಡುಬಂದವು. ಪಾರ್ಕ್‌ಗಳಲ್ಲಿ ಸೆಲ್ಫೀ ತೆಗೆದುಕೊಂಡ ಮಕ್ಕಳು, ಯುವತಿಯರು ಅಲ್ಲಲ್ಲಿ ಕುಣಿದರು.
ಪ್ರಕೃತಿ ಮಡಿಲಲ್ಲೇ ಜೋಳದ ರೊಟ್ಟಿ, ಚಪಾತಿ, ಮೊಸರುಬುತ್ತಿ, ಮುಳುಗಾಯಿ-ಮೆಣಸಿನಕಾಯಿ ಎಣಗಾಯಿ, ಗಡಸೆಪ್ಪು, ಶೇಂಗಾ ಇತರೆ ಚಟ್ನಿಪುಡಿಗಳು, ಪುಂಡಿ ಸೊಪ್ಪು, ಪೊಂಗಲ್, ಚಿತ್ರಾನ್ನ ಮೊದಲಾದ ಭಕ್ಷೃಗಳನ್ನು ಸವಿದರು.
ಪಾರ್ಕ್‌ಗಳಲ್ಲಿ ಮಕ್ಕಳ ಕಲರವ ಹೆಚ್ಚಿತ್ತು. ಜೋಕಾಲಿ ಜೀಕಿದ ಚಿಣ್ಣರು, ಜಾರುಬಂಡಿಯಲ್ಲಿ ಜಾರಿದರು. ಕೆಲವರು ಸಿಮೆಂಟ್ ಆನೆ ಕಲಾಕೃತಿಯನ್ನೇರಿದರು. ವಿವಿಧ ಆಟಿಕೆಗಳು, ಜಿಮ್‌ನ ಸಲಕರಣೆಗಳನ್ನು ಆಡಿದರು.
ಅಲ್ಲಲ್ಲಿ ಕ್ರಿಕೆಟ್, ಷಟಲ್ ಕಾಕ್ ಆಟ ಗಮನ ಸೆಳೆದರೆ  ಗೋಲಿಯಾಟ ಕೂಡ ಸದ್ದು ಮಾಡಿತು. ಮಧ್ಯಾಹ್ನದ ಬಿರುಬಿಸಿಲಲ್ಲಿ ಗಾಂಜಿವೀರಪ್ಪ ಸಾರ್ವಜನಿಕ ಈಜುಕೊಳದಲ್ಲಿ ಮಕ್ಕಳು, ಯುವಕರು ನೀರಿಗಿಳಿದು ಈಜಾಟದಲ್ಲಿ ಮುಳುಗೆದ್ದರು. ಕೊಳಗಳಲ್ಲಿ ಎಂದಿಗಿಂತಯ ಶೇ.20ರಷ್ಟು ಸಂದಣಿ ಹೆಚ್ಚಿದೆ ಎಂದು ಅಲ್ಲಿನ ವ್ಯವಸ್ಥಾಪಕರು ತಿಳಿಸಿದರು.
ದೊಡ್ಡಬಾತಿಯ ಪವಿತ್ರವನ, ಆನಗೋಡು ಪ್ರಾಣಿ ಸಂಗ್ರಹಾಲಯಗಳು ಕೂಡ ಹಬ್ಬದ ಸಡಗರಕ್ಕೆ ಸಾಕ್ಷಿಯಾದವು. ಪಾರ್ಕ್ ಹಾಗೂ ಕೆಲ ಪ್ರಮುಖ ತಾಣಗಳ ಬಳಿ ಐಸ್‌ಕ್ರೀಂ, ಕಬ್ಬಿನ ಹಾಲು, ಗೋಲಗುಪ್ಪ, ಕಡ್ಲೆಗಿಡ, ಎಳನೀರು, ಹಣ್ಣಿನ ಜ್ಯೂಸ್, ಕುರುಕುರೆ, ಶೇಂಗಾ, ಬೇಯಿಸಿದ ಮೆಕ್ಕೆಜೋಳ ವ್ಯಾಪಾರಿಗಳು ಬೀಡು ಬಿಟ್ಟಿದ್ದರು, ನೀರಿನ ಬಾಟಲುಗಳಿಗೆ ಬೇಡಿಕೆ ಹೆಚ್ಚಿತ್ತು.  
ಮನೆಗಳಲ್ಲೂ ಹಬ್ಬದ ಸಂಭ್ರಮ ಜೋರಾಗಿತ್ತು. ವಿಶೇಷ ಸಿಹಿ ಖಾದ್ಯದ ಸವಿ ಇತ್ತು. ಕುಟುಂಬಸ್ಥರು, ಸ್ನೇಹಿತರಿಗೆ ಎಳ್ಳು-ಬೆಲ್ಲ ಹಂಚಿ ಶುಭಾಶಯ ಹೇಳಿದರು. ಕೆಲವು ದೇವಸ್ಥಾನಗಳಲ್ಲಿ ದೇವರ ವಿಶೇಷ ಅಲಂಕಾರ ಗಮನ ಸೆಳೆಯಿತು. ತಮಿಳು ಸಮುದಾಯದವರು ಮನೆಗಳಲ್ಲಿ ಪೊಂಗಲ್ ಅಡುಗೆ ಮಾಡಿ ಸ್ನೇಹಿತರೊಂದಿಗೆ ಸವಿದರು.
ದೇಗುಲಗಳಿಗೆ ತೆರಳಿದ ಜನರು ದರ್ಶನ ಪಡೆದರು. ಬೆಳಗಿನ ವಿಶೇಷ ಪೂಜೆ, ಅಭಿಷೇಕ ಕಣ್ತುಂಬಿಕೊಂಡರು. ಹಬ್ಬದ ದಿನ ಮಾರುಕಟ್ಟೆಗಳಲ್ಲಿ ಜನರ ಪ್ರಮಾಣ ತಗ್ಗಿತ್ತು. ತರಕಾರಿ ವ್ಯಾಪಾರದ ಜತೆಯಲ್ಲೇ ಎಳ್ಳು-ಬೆಲ್ಲ, ಸಕ್ಕರೆ ಅಚ್ಚು, ಕಬ್ಬಿನ ಜಲ್ಲೆಗಳನ್ನು ಮಾರಾಟಕ್ಕೆ ಇರಿಸಲಾಗಿತ್ತು.

ಗಾಜಿನ ಮನೆ, ಥೀಮ್ ಪಾರ್ಕ್‌ನಲ್ಲೂ ಜನ
 ದಾವಣಗೆರೆಯ ಥೀಮ್ ಪಾರ್ಕ್, ಗಾಜಿನ ಮನೆಗಳಲ್ಲಿಯೂ ಜನರ ಎಣೆ ಇರಲಿಲ್ಲ. ಟಿಕೆಟ್ ಪಡೆದು ಮಕ್ಕಳೊಂದಿಗೆ ಹಾಜರಾದ ಪಾಲಕರು ಫೋಟೋ-ಸೆಲ್ಫಿ  ಕ್ರೇಜ್‌ಗೆ ಜಾರಿದ್ದರು. ಅಲಂಕಾರಿಕ ಗಿಡಗಳು, ಸಿಮೆಂಟ್ ಕಲಾಕೃತಿಗಳ ಮುಟ್ಟುತ್ತಿದ್ದವರಿಗೆ ಗಾರ್ಡ್‌ಗಳು ಬುದ್ದಿವಾದ ಹೇಳುವುದು ಸಾಮಾನ್ಯವಾಗಿತ್ತು.
ಗಾಜಿನ ಮನೆ ಒಳಾಂಗಣದಲ್ಲಿ ಪಾಲಕರು ಹಣ ತೆತ್ತು ವಿಶೇಷ ತೆರೆದ ವಾಹನದಲ್ಲಿ ರೌಂಡ್ಸ್ ಮಾಡಿದರು. ವಾಟರ್ ಸ್ಪೋರ್ಟ್ಸ್ ಕೂಡ ಮಕ್ಕಳಿಗೆ ರಂಜಿಸಿತು. ಸಂಜೆ ಸಂಗೀತ ಕಾರಂಜಿ ಜತೆಗೆ ಲೇಸರ್ ಷೋ ಕಣ್ಣುಗಳಿಗೆ ಮುದ ನೀಡಿತು. ಥೀಮ್ ಪಾರ್ಕ್‌ನಲ್ಲಿ ಊಟಕ್ಕೆ ನಿರ್ಬಂಧವಿತ್ತು. ಕುಡಿವ ನೀರಿನ ವ್ಯವಸ್ಥೆಯೂ ಇರದಿದ್ದಕ್ಕೆ ಕೆಲವರು ಅಸಮಾಧಾನ ಹೊರಹಾಕಿದರು.

Share This Article

ತಾಳಲಾರದ ಬೇಗೆ, ತಡೆಯುವುದು ಹೇಗೆ? ಎಸಿ, ಕೂಲರ್ ಈ ಎರಡರಲ್ಲಿ ಯಾವುದು ಬೆಸ್ಟ್​? ಇಲ್ಲಿದೆ ನೋಡಿ ಉತ್ತರ | Summer

Summer: ಇದು ಬೇಸಿಗೆ ಕಾಲ. ಕೇವಲ ಬೇಸಿಗೆ ಅಲ್ಲ ಮುಂದಿನ ಎರಡು ತಿಂಗಳಲ್ಲಿ ಬಿರು ಬೇಸಿಗೆ…

ಒಂದು ಪ್ರೀತಿಯ ಅಪ್ಪುಗೆ ಸಾಕು! ವಾಸಿ ಮಾಡುತ್ತೆ ನಾನಾ ಕಾಯಿಲೆ… hugging

hugging : ಫೆಬ್ರವರಿ 12 ರಂದು ಅಪ್ಪುಗೆಯ ದಿನ, ಅಂದರೆ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳುವ ಮೂಲಕ ಅವರ…

ಎಷ್ಟು ಪ್ರಮಾಣದಲ್ಲಿ ಮದ್ಯ ಸೇವಿಸಿದ್ರೆ ಲಿವರ್​ ಡ್ಯಾಮೇಜ್​ ಆಗುತ್ತದೆ! ಇಲ್ಲಿದೆ ನೋಡಿ ಅಚ್ಚರಿ ವರದಿ | Liver Health

Liver Health: ದೇಶದಲ್ಲಿ ಮದ್ಯ ಸೇವಿಸುವವರ ಸಂಖ್ಯೆ ಅಧಿಕವಾಗಿಯೇ ಇದೆ. ಲಿಕ್ಕರ್​ ಕುಡಿಯುವುದು ಸಹ ಒಂದು…