ದಾವಣಗೆರೆ ವಿವಿ ಕಟ್ಟಡದ ಭದ್ರತಾ ಕೊಠಡಿಗಳಲ್ಲಿ ಭದ್ರವಾದ ಲೋಕಸಭಾ ಕ್ಷೇತ್ರದ ಮತಯಂತ್ರಗಳು

ದಾವಣಗೆರೆ: ಏ. 23ರಂದು ನಡೆದ ದಾವಣಗೆರೆ ಲೋಕಸಭಾ ಕ್ಷೇತ್ರದ ಚುನಾವಣೆಯ ಮತಯಂತ್ರಗಳು ಭದ್ರತಾ ಕೊಠಡಿಗಳನ್ನು ಸೇರಿಕೊಂಡಿವೆ. ದಾವಣಗೆರೆ ವಿಶ್ವವಿದ್ಯಾಲಯ ಕಟ್ಟಡದಲ್ಲಿ ಮತಯಂತ್ರಗಳನ್ನು ಇರಿಸಲಾಗಿದ್ದು ಬಿಗಿ ಭದ್ರತೆಯನ್ನು ಒದಗಿಸಲಾಗಿದೆ.

ಮಂಗಳವಾರ ಬೆಳಗ್ಗೆ 7ರಿಂದ ಸಂಜೆ 6ರ ವರೆಗೆ ಮತದಾನ ನಡೆದಿದ್ದು ನಂತರ ಚುನಾವಣಾ ಸಿಬ್ಬಂದಿ ಮತಯಂತ್ರಗಳನ್ನು ಡಿಮಸ್ಟರಿಂಗ್ ಕೇಂದ್ರಗಳಿಗೆ ತಂದು ಒಪ್ಪಿಸಿದರು. ಅಲ್ಲಿಂದ ಅವುಗಳನ್ನು ದಾವಣಗೆರೆ ವಿವಿಗೆ ತರಲಾಯಿತು.
ಜಿಲ್ಲೆಯಲ್ಲಿ ಒಟ್ಟು 8 ವಿಧಾನಸಭಾ ಕ್ಷೇತ್ರಗಳಿವೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದರಂತೆ ಕೊಠಡಿಗಳನ್ನು ನೀಡಲಾಗಿದ್ದು ಆಯಾ ಕ್ಷೇತ್ರದ ಮತಯಂತ್ರಗಳನ್ನು ಅಲ್ಲಿ ಇಡಲಾಗಿದೆ. ಬುಧವಾರ ಬೆಳಗ್ಗೆ ಮತಯಂತ್ರಗಳಿರುವ ಕೊಠಡಿಗಳಿಗೆ ಬೀಗ ಹಾಕಿ, ಸೀಲ್ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಎನ್. ಶಿವಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಚೇತನ್, ಹೆಚ್ಚುವರಿ ಎಸ್ಪಿ ಟಿ.ಜೆ. ಉದೇಶ್, ಡಿವೈಸ್ಪಿ, ಸಿಪಿಐ, ಪಿಎಸ್‌ಐಗಳು ಸೇರಿದಂತೆ ಪೊಲೀಸ್ ಅಧಿಕಾರಿಗಳು ಹಾಜರಿದ್ದರು.
ಅಲ್ಲದೇ ಚುನಾವಣೆಗೆ ಸ್ಪರ್ಧಿಸಿದ ಅಭ್ಯರ್ಥಿಗಳಲ್ಲಿ ಕೆಲವರು ಹಾಗೂ ಅವರ ಏಜೆಂಟರು ಹಾಜರಿದ್ದು ಭದ್ರತಾ ವ್ಯವಸ್ಥೆಯನ್ನು ಪರಿಶೀಲಿಸಿದರು. ಭದ್ರತಾ ಕೊಠಡಿಗಳನ್ನು ಇಟ್ಟಿರುವ ಕಟ್ಟಡಕ್ಕೆ ಸರ್ಪಗಾವಲು ಹಾಕಲಾಗಿದ್ದು ವಿವಿಧ ರಾಜ್ಯಗಳಿಂದ ಬಂದಿರುವ ಭದ್ರತಾ ಸಿಬ್ಬಂದಿ ಇಲ್ಲಿ  ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

Leave a Reply

Your email address will not be published. Required fields are marked *