ಹೊನ್ನಾಳಿ: ಸರ್ಕಾರಿ ನೌಕರಿ ಅಧಿಕಾರಿಗಳು ಸರ್ವಾಧಿಕಾರಿಗಳೆಂದು ಭಾವಿಸದೇ ಸಾರ್ವಜನಿಕರ ಸೇವೆ ಮಾಡುವ ಮನೋಭಾವನೆ ಬೆಳೆಸಿಕೊಳ್ಳಿ ಎಂದು ದಾವಣಗೆರೆ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಹೇಳಿದರು.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಬುಧವಾರ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದರು.
ದೂರುಗಳನ್ನು ನೋಡಿದರೆ ಎಷ್ಟರಮಟ್ಟಿಗೆ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದಿರಿ ಎಂದು ತಿಳಿಯುತ್ತದೆ. ಸರ್ಕಾರ ನಮಗೆ ಸಂಬಳ ಕೊಟ್ಟು ನೇಮಕ ಮಾಡಿರುವುದು ಸಾರ್ವಜನಿಕರ ಸೇವೆ ಮಾಡಲಿ ಎಂದು, ಆದರೆ ಅವರ ಸಮಸ್ಯೆಗಳಿಗೆ ಸ್ಪಂದಿಸದೇ ಕಚೇರಿಗಳಿಗೆ ಅಲೆದಾಡಿಸುತ್ತಿರುವ ಧೋರಣೆ ಸಲ್ಲದು. ಇದು ಮುಂದುವರಿದರೆ ನಿಮ್ಮ ವಿರುದ್ಧ ಕ್ರಮ ತೆಗೆದುಕೊಳ್ಳುವುದಕ್ಕೆ ಮೇಲಧಿಕಾರಿಗಳಿಗೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪಟ್ಟಣದ ಪುರಸಭೆ ವ್ಯಾಪ್ತಿಯ ಖಾಸಗಿ ಲೇಔಟ್ನಲ್ಲಿ ಖರಾಬು ಜಮೀನನ್ನು ಒತ್ತುವರಿ ಮಾಡಿಕೊಂಡು ಲೇಔಟ್ ಮಾಡಿರುವ ಬಗ್ಗೆ ಸ್ಥಳೀಯರಿಂದ ದೂರು ಸ್ವೀಕರಿಸಿ ಮಾತನಾಡಿ, ಪುರಸಭೆ ಮುಖ್ಯಾಧಿಕಾರಿ ಲೀಲಾವತಿ, ಕಂದಾಯ ಇಲಾಖೆಯ ಕಸಬಾ ಆರ್ಐ ಮತ್ತು ವಿಎ ಅವರಿಗೆ ಒಂದು ವಾರದೊಳಗೆ ಖರಾಬು ಜಮೀನನ್ನು ತೆರವುಗೊಳಿಸಿ ಲೋಕಾಯುಕ್ತರಿಗೆ ಸಮಗ್ರ ವರದಿ ಸಲ್ಲಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕಿನ ಕುಂದೂರು ಗುಡ್ಡದ ವ್ಯಾಪ್ತಿಯಲ್ಲಿ ಅಹೋರಾತ್ರಿ ಮಣ್ಣು ಗಣಿಗಾರಿಕೆ ನಡೆಸುತ್ತಿರುವ ಕುರಿತು ಬಂದ ದೂರಿನ ಬಗ್ಗೆ ವಿಚಾರಿಸಿ, ಸರ್ಕಾರದ ನಿಯಮದಂತೆ ಹಾಗೂ ಇಲಾಖೆ ನೀಡಿರುವ ಪರವಾನಗಿ, ಅವಧಿಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಂಡ ಬಗ್ಗೆ ವರದಿ ನೀಡುವಂತೆ ಸೂಚಿಸಿದರು.
ವಸತಿ ಶಾಲೆಗಳಲ್ಲಿ ತಂದೆ ಅಥವಾ ತಾಯಿ ಕಳೆದುಕೊಂಡ (ಸಿಂಗಲ್ ಪೇರೆಂಟ್) ಮಕ್ಕಳಿಗೆ ಪ್ರವೇಶಾತಿಯಲ್ಲಿ ಆದ್ಯತೆ ನೀಡಬೇಕು. ಆದರೆ ತಾಲೂಕಿನ ಕೆಲವು ವಸತಿ ಶಾಲೆಗಳಲ್ಲಿ ಜನಪ್ರತಿನಿಧಿಗಳು ಹೇಳಿದ ಮಕ್ಕಳಿಗೆ ಮಾತ್ರ ಪ್ರವೇಶ ನೀಡುತ್ತಿದ್ದಾರೆ ಎಂದು ಹಲವಾರು ಪಾಲಕರು ದೂರಿದ್ದರಿಂದ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳನ್ನು ಕರೆಯಿಸಿ, ಯಾವ ಮಾನದಂಡದ ಮೇಲೆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡುತ್ತಿದ್ದೀರಿ ಎಂದು ಪ್ರಶ್ನಿಸಿದರು. ವಿದ್ಯಾರ್ಥಿಗಳ ಮೆರಿಟ್ ಮತ್ತು ಇಲಾಖೆ ನಿಯಮಗಳ ಅನುಸಾರ ಪ್ರವೇಶ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ಸಮಜಾಯಿಷಿ ನೀಡಿದರು. ಯಾವುದೇ ಶಿಫಾರಸಿಗೆ ಮಣಿಯದೇ ನಿಯಮನುಸಾರವಾಗಿ ಮಕ್ಕಳಿಗೆ ಪ್ರವೇಶ ನೀಡಿ ಎಂದು ಹೇಳಿದರು.
ಗ್ರಾಪಂಗಳಲ್ಲಿ ಇ-ಸ್ವತ್ತು ಮಾಡಿಕೊಡದೇ ಇರುವ ಬಗ್ಗೆ ಸಾಕಷ್ಟು ದೂರುಗಳು ಬಂದಿರುವ ಬಗ್ಗೆ ಮಾತನಾಡಿದ ಎಸ್ಪಿ ಅವರು, ಸಂಬಂಧಿಸಿದ ತಾಪಂ ಇಒ ಪ್ರಕಾಶ್ ಅವರಿಗೆ ಈ ರೀತಿ ಅನಗತ್ಯ ದೂರುಗಳು ಬಾರದಿರುವಂತೆ ಪಿಡಿಒಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಎಂದರು.
ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿ ಪಾಳಿಯಲ್ಲಿ ಕೇವಲ ಒಬ್ಬ ವೈದ್ಯರಿರುತ್ತಾರೆ. ಜತೆಗೆ ಹೊರಗೆ ಔಷಧಗಳನ್ನು ತರಲು ಚೀಟಿ ಬರೆದು ಕೊಡುತ್ತಾರೆ ಎಂದು ಆಸ್ಪತ್ರೆಯ ಅವ್ಯವಸ್ಥೆಗಳ ಬಗ್ಗೆ ಲೋಕಾಯುಕ್ತ ಎಸ್ಪಿಯವರ ಗಮನಕ್ಕೆ ತಂದಾಗ, ಈ ಬಗ್ಗೆ ಮೇಲಧಿಕಾರಿಗಳಿಗೆ ತಿಳಿಸಲಾಗುವುದು ಎಂದು ದೂರುದಾರರಿಗೆ ತಿಳಿಸಿದರು.
ಲೋಕಾಯುಕ್ತ ಡಿವೈಎಸ್ಪಿ ಗುರುಬಸವರಾಜ್, ಕಲಾವತಿ, ಇನ್ಸ್ಪೆಕ್ಟರ್ ಸರಳಾ ಹಾಗೂ ಲೋಕಾಯುಕ್ತ ಸಿಬ್ಬಂದಿ, ತಾಲೂಕಿನ ವಿವಿಧ ಇಲಾಖೆಗಳ ಅಧಿಕಾರಿಗಳು, ಸಾರ್ವಜನಿಕರು ಇದ್ದರು.