ದಾವಣಗೆರೆ: ಪ್ರಜಾಪ್ರಭುತ್ವದ ಆತ್ಮವೇ ಜನಭಾಷೆಯಾಗಿದೆ. ಪ್ರಜಾಪ್ರಭುತ್ವದ ಆಶಯಗಳು ಜನಮಾನಸ ತಲುಪಲು ಜನಸಾಮಾನ್ಯರ ಭಾಷೆ ಆಡಳಿತದಲ್ಲಿ ಬಳಕೆಯಾಗಬೇಕು. ಹಾಗಾದಲ್ಲಿ ಆಡಳಿತ ಸುಗಮವಾಗಲಿದೆ.
ಜಗಳೂರಿನಲ್ಲಿ ಹಮ್ಮಿಕೊಂಡಿದ್ದ, ದಾವಣಗೆರೆ ಜಿಲ್ಲಾ ಹದಿನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಡಾ.ಎ.ಬಿ. ರಾಮಚಂದ್ರಪ್ಪ ಅವರ ಆಶಯವಿದು.
ಕನ್ನಡ ರಾಷ್ಟ್ರಭಾಷೆಯಾಗಿ ಅಂಗೀಕರಿಸಿದ್ದರೂ ಆಡಳಿತಗಾರರಿಗೆ ಇದರ ವಿವೇಕವಿಲ್ಲ. ಕಚೇರಿಗಳ ಕಡತಗಳಲ್ಲಿ ಕನ್ನಡವೇ ಇರಬೇಕು. ಇಲ್ಲದಿದ್ದರೆ ಜನರು ಪ್ರಶ್ನಿಸಿ, ಎಚ್ಚರಿಸಬೇಕು. ಇದು ಆಂದೋಲನವಾಗಿಸಬೇಕು ಎಂದು ಹೇಳಿದರು.
ಕನ್ನಡ ಅನ್ನದ ಭಾಷೆಯಾಗಬೇಕು. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮ ಕಡ್ಡಾಯವಾಗಿಸಬೇಕು. ಇದನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಓದುವಂತಾಗಬೇಕು. ಭಾಷಿಕ ಗುಲಾಮಗಿರಿಯಿಂದ ಬಿಡುಗಡೆಯ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಿದೆ. ಭಾಷಾಭಿವೃದ್ಧಿಗೆ ರಾಜಕೀಯ ಇಚ್ಛಾಶಕ್ತಿಯೂ ಅಗತ್ಯವಿದೆ ಎಂದು ಹೇಳಿದರು.
ಬಹುಜನರ ಭಾಷೆಯ ವೈಭವೀಕರಣ, ಕನಿಷ್ಟೀಕರಣ ಎರಡೂ ಕೂಡ ಭಾಷಾ ಬೆಳವಣಿಗೆಗೆ ಪೂರಕವಲ್ಲ. ಕರ್ನಾಟಕದಲ್ಲಿ ನಾನಾ ಪ್ರದೇಶ, ಜನಾಂಗಗಳಿರುವಂತೆ ಹಲವು ಕನ್ನಡಗಳಿವೆ. ಇವಕ್ಕೆ ಮಾನ್ಯತೆ ಸಿಗಬೇಕು ಎಂದು ಹೇಳಿದರು.
ಭಾಷಿಕ ಜೋಡಿ ರಾಕ್ಷಸರು!
ಇಂದು ಹಿಂದಿ, ಇಂಗ್ಲಿಷ್ ಎಂಬ ಭಾಷಿಕ ಜೋಡಿ ರಾಕ್ಷಸರಿಂದ ಕನ್ನಡಕ್ಕೆ ಹಲವು ಆತಂಕಗಳಿವೆ. ಕನ್ನಡಕ್ಕೆ ಪ್ರತ್ಯೇಕ ಧ್ವಜ ಬೇಡವೆನ್ನುವ ಹೊಣೆಗೇಡಿ ರಾಜಕಾರಣಿಗಳಿದ್ದಾರೆ. ಒಕ್ಕೂಟ ಸರ್ಕಾರ ರಾಜ್ಯಗಳ ಸ್ವಾಯತ್ತತೆಗೆ ಧಕ್ಕೆ ತರುತ್ತಿದ್ದು, ಆಯಾ ರಾಜ್ಯದ ಭಾಷಿಕ, ಸಾಮಾಜಿಕ, ಸಾಂಸ್ಕೃತಿಕ ಪ್ರಗತಿಗೂ ಇದು ಅಡ್ಡಿಯಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
160ಕ್ಕೂ ಹೆಚ್ಚು ಸುತ್ತೋಲೆ ಹೊರಡಿಸಿದ್ದರೂ ಆಡಳಿತದಲ್ಲಿ ಕನ್ನಡವನ್ನು ಕಡೆಗಣಿಸಲಾಗಿದೆ. ಕನ್ನಡಿಗರಿಗೆ ಉದ್ಯೋಗಾವಕಾಶಗಳೂ ಕ್ಷೀಣಿಸಿವೆ. ವಿವಿಗಳ ಸ್ವಾಯತ್ತತೆಗೆ ಧಕ್ಕೆಯಾಗುವ ನಿಲುವುಗಳನ್ನು ಸರ್ಕಾರಗಳು ತಾಳುತ್ತಿದ್ದು, ಸ್ಥಳೀಯ ಸಾಂಸ್ಕೃತಿಕ ಅನನ್ಯತೆಗಳು ಪಠ್ಯಗಳಿಂದ ದೂರವಾಗುತ್ತಿವೆ ಎಂದು ವಿಷಾದಿಸಿದರು.
ಕನ್ನಡಕ್ಕೆ ವರ್ಗ, ವರ್ಣಗಳ ನಂಜು ತಗಲಿದೆ. ಇನ್ನೊಂದೆಡೆ ಮತ-ಧರ್ಮದಿಂದ ಕಟ್ಟಿಹಾಕುವ ಭಾಷಿಕ ಮೂಲಭೂತವಾದ ಕನ್ನಡ ಸಂಸ್ಕೃತಿಗೆ ಅಪಾಯ ತರಲಿದೆ. ಮೂಲಭೂತವಾದವು ಭಾಷೆಯ ಮೂಲಕ ಒಳ ಪ್ರವೇಶಕ್ಕೆ ಹವಣಿಸುತ್ತದೆ. ಕನ್ನಡದ ಅಸ್ಮಿತೆ ಕಾಪಾಡುವತ್ತ ಕ್ರಿಯಾಶೀಲರಾಗಬೇಕಿದೆ ಎಂದು ತಿಳಿಸಿದರು.
ಏಕತ್ವದ ವ್ಯಸನ
ಬಹುತ್ವವೇ ಭಾರತದ ನಿಜವಾದ ಸೌಂದರ್ಯ. ಆದರೂ ಇಂದು ಏಕತ್ವದ ಪ್ರತಿಪಾದನೆಯ ವ್ಯಸನವೊಂದು ಆವರಿಸಿಕೊಳ್ಳುತ್ತಿದೆ. ಒಂದು ದೇಶ, ಒಂದು ಧರ್ಮ, ಒಂದು ಚುನಾವಣೆ, ಒಂದು ಭಾಷೆ, ಒಂದು ಸಂಸ್ಕೃತಿ ಎಂಬ ಪ್ರತಿಪಾದನೆಗಳು ಒಕ್ಕೂಟ ವ್ಯವಸ್ಥೆ, ಸಂವಿಧಾನದ ಆಶಯಕ್ಕೆ ಧಕ್ಕೆ ತರಲಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಹಿತ್ಯದ ದಾಖಲೀಕರಣ
ದಾವಣಗೆರೆ ಜಿಲ್ಲೆ ಸಾಹಿತ್ಯ, ಸಂಸ್ಕೃತಿ, ವೃತ್ತಿ ರಂಗಭೂಮಿಗೆ ಅಪಾರ ಕೊಡುಗೆ ನೀಡಿದೆ. ಈ ನೆಲದಲ್ಲಿ ಸಾಹಿತ್ಯ, ದಲಿತ, ರೈತ, ಕಾರ್ಮಿಕ ಚಳವಳಿಗಳು ಗಮನ ಸೆಳೆದಿದ್ದು, ಇದರ ಭಾಗವಾಗಿ ಅನೇಕ ಕೃತಿಗಳು ಪ್ರಕಟವಾಗಿವೆ. ಜಿಲ್ಲೆಯ ಸಾಹಿತ್ಯ ಚರಿತ್ರೆ ದಾಖಲೀಕರಣ ಆಗಬೇಕಿದೆ ಎಂದು ಆಶಿಸಿದರು.
12 ಹಕ್ಕೊತ್ತಾಯಗಳ ಮಂಡನೆ
ಜಿಲ್ಲೆಯಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು. ಅಪರೂಪವಾದ ಕೊಂಡುಕುರಿ ವನ್ಯಜೀವಿ ಸಂರಕ್ಷಣೆಗೆ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕು. ತಾಲೂಕಿನ ಕೆರೆಗಳ ಸಂರಕ್ಷಣೆ, ನಿರ್ವಹಣೆಗಾಗಿ ಸಮಿತಿ ರಚಿಸಬೇಕು. ಕನ್ನಡಿಗರಿಗೆ ಉದ್ಯೋಗಗಳನ್ನು ನೀಡದ ಖಾಸಗಿ ಉದ್ಯಮಗಳ ಪರವಾನಗಿ ರದ್ದುಪಡಿಸುವ ಶಾಸನ ರೂಪಿಸಬೇಕು. ದಾವಣಗೆರೆ ಎರಡನೆಯ ರಾಜಧಾನಿಯಾಗಬೇಕು. ದಾವಣಗೆರೆ ರಂಗಾಯಣಕ್ಕೆ ಹೆಚ್ಚಿನ ಅನುದಾನ ನೀಡಬೇಕು. ಬುಡಕಟ್ಟು ವಿವಿ ಸ್ಥಾಪಿಸಬೇಕು. ಪ್ರೊ. ಬಿ. ಕೃಷ್ಣಪ್ಪ ಅಧ್ಯಯನ ಪೀಠ ತೆರೆಯಬೇಕು. ಮಹಲಿಂಗರಂಗರ ಸಮಾಧಿ ಸ್ಥಳ ಅಭಿವೃದ್ಧಿಪಡಿಸಬೇಕು. ಜಗಳೂರು ಇಮಾಮ್ ಸಾಬ್ ಅವರ ನಿವಾಸವನ್ನು ಸಂರಕ್ಷಿಸಿ ಸ್ಮಾರಕವಾಗಿಸಬೇಕು ಎಂಬುದೂ ಸೇರಿ 20 ಹಕ್ಕೊತ್ತಾಯಗಳನ್ನು ಎಬಿಆರ್ ಮಂಡಿಸಿದರು.
—
ಸುಗಮ ಆಡಳಿತಕ್ಕೆ ಬಳಕೆಯಾಗಲಿ ಜನಭಾಷೆ

ಐಸ್ಕ್ಯೂಬ್ನಿಂದ ಮುಖಕ್ಕೆ ಮಸಾಜ್ ಮಾಡಿದ್ರೆ ನಿಮ್ಮ ಸೌಂದರ್ಯ ಹೆಚ್ಚುತ್ತದೆ! ತಜ್ಞರು ಏನು ಹೇಳುತ್ತಾರೆ? Ice cube Remedy
Ice cube Remedy : ಮುಖ ಸುಂದರವಾಗಿ ಕಾಣಲು ಅನೇಕ ಜನರು ವಿವಿಧ ಸಲಹೆಗಳನ್ನು ಅನುಸರಿಸುತ್ತಾರೆ.…
ಈ ನಕ್ಷತ್ರದಲ್ಲಿ ಹುಟ್ಟಿದ ಗಂಡಸರು ತಮ್ಮ ಪತ್ನಿಯರನ್ನು ರಾಜಕುಮಾರಿಯಂತೆ ನೋಡಿಕೊಳ್ಳುತ್ತಾರೆ! Birth of Stars
Birth of Stars : ಹುಟ್ಟಿದ ತಕ್ಷಣ ಜನ್ಮ ದಿನಾಂಕ ಹಾಗೂ ಹುಟ್ಟಿದ ಗಳಿಗೆಯನ್ನು ಬರೆದಿಡಲಾಗುತ್ತದೆ.…
ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ? ಹಣ್ಣಿನ ಸಿಪ್ಪೆ ತಿಂದ್ರೆ ಪುರುಷರಿಗೆ ಆ ಸಾಮರ್ಥ್ಯ ಹೆಚ್ಚಾಗುವುದು! watermelon
watermelon: ಬೇಸಿಗೆ ಎಂದ ತಕ್ಷಣ ನಮಗೆ ನೆನಪಿಗೆ ಬರುವುದು ಕಲ್ಲಂಗಡಿ ಹಣ್ಣು. ನಾವು ಕಲ್ಲಂಗಡಿ ಹಣ್ಣುಗಳನ್ನು…