ದಾವಣಗೆರೆ: ಜಿಲ್ಲೆಯ ಪ್ರತಿಭಾನ್ವಿತ ವಿದ್ಯಾರ್ಥಿಗಳು ಶೈಕ್ಷಣಿಕ ಸಾಲಕ್ಕಾಗಿ ಭಿಕ್ಷಾಪಾತ್ರೆ ಹಿಡಿದು ನಿಲ್ಲುವ ಪರಿಸ್ಥಿತಿ ಇದೆ. ಇದು ಸರಿಯಾಗದಿದ್ದಲ್ಲಿ ಸಹಿಸುವುದಿಲ್ಲ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಬ್ಯಾಂಕ್ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
2023-24ನೇ ಸಾಲಿನಲ್ಲಿ ಇತರೆ ಆದ್ಯತಾ ಪಟ್ಟಿಯಡಿ ಗುರಿ ನೀಡಲಾಗಿದ್ದ 526 ಕೋಟಿ ರೂ. ಮೊತ್ತದಲ್ಲಿ 291 ಕೋಟಿ ರೂ. ಸಾಲ ನೀಡಲಾಗಿದೆ. ಇದರಲ್ಲಿ ವಸತಿ ಹಾಗೂ ಶೈಕ್ಷಣಿಕ ಸಾಲವೂ ಸೇರಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಶೇ.55ರಷ್ಟು ಪ್ರಗತಿ ಸಾಲದು. ಐಐಟಿ ಇತರೆ ವ್ಯಾಸಂಗ ಮಾಡಿದವರೂ ಸಹ ಸಾಲಕ್ಕಾಗಿ ಬ್ಯಾಂಕ್‌ಗಳಿಗೆ ಅಲೆದಾಡುವ ಸ್ಥಿತಿ ಇದೆ. ಇದು ತಪ್ಪಬೇಕು. ವಿಶ್ವವಿದ್ಯಾನಿಲಯ ಹಾಗೂ ಕಾಲೇಜು ಮಟ್ಟದಲ್ಲಿ ಪಾಕ್ಷಿಕ ಶಿಬಿರ ನಡೆಸಬೇಕು. ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಬೇಕು. ಆನ್‌ಲೈನ್ ಪೋರ್ಟಲ್ ರಚಿಸಬೇಕೆಂದು ಸೂಚನೆ ನೀಡಿದರು.
ಜಿಲ್ಲಾ ಸಹಕಾರ ಬ್ಯಾಂಕ್‌ನಿಂದ 2023-24ನೇ ಸಾಲಿನಲ್ಲಿ ರೈತರಿಗೆ 830 ಕೋಟಿ ರೂ. ಸಾಲ ನೀಡಲಾಗಿದೆ. ಈ ಬಾರಿ ಹೊಸ ಸಾಲ ವಿತರಣೆ ತಡವಾಗುತ್ತಿದೆ. ಜಿಲ್ಲೆಗೆ ಬರಬೇಕಿರುವ ಅನುದಾನದಲ್ಲಿ ಅಪೆಕ್ಸ್ ಬ್ಯಾಂಕ್‌ನಿಂದ 25 ಕೋಟಿ ರೂ. ಹಾಗೂ ನಬಾರ್ಡ್ ಹಣದಲ್ಲಿ 10 ಕೋಟಿ ರೂ. ಕಡಿಮೆಯಾಗಿದೆ ಎಂದು ಡಿಸಿಸಿ ಬ್ಯಾಂಕ್ ಸಿಇಒ ನಂಜುಂಡೇಗೌಡ ಸಂಸದರ ಪ್ರಶ್ನೆಗೆ ಉತ್ತರಿಸಿದರು.
ಉದ್ಯೋಗಿನಿ, ಎಸ್‌ಸಿಪಿ, ಟಿಎಸ್‌ಪಿ ಯೋಜನೆಯಡಿ ಅರ್ಜಿಗಳು ಬಾಕಿ ಇರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜಿಪಂ ಸಿಇಒ ಸುರೇಶ್ ಬಿ. ಇಟ್ನಾಳ್, ಈ ಮಾಸಾಂತ್ಯದೊಳಗೆ ಅರ್ಜಿ ವಿಲೇ ಮಾಡಬೇಕು. ಇಲ್ಲವಾದಲ್ಲಿ ಬ್ಯಾಂಕ್ ಅಧಿಕಾರಿಗಳೇ ಹೊಣೆಯಾಗಲಿದ್ದೀರಿ ಎಂದು ಎಚ್ಚರಿಸಿದರು.
ಸಣ್ಣವರಿಗೆ ನೀವು ಬೇಗನೇ ಸಾಲ ನೀಡುವುದಿಲ್ಲ. ಸಿಬಿಲ್ ಸ್ಕೋರ್ ಇತರೆ ನೆಪ ಹೇಳುತ್ತೀರಿ, ಆದರೆ ಕೆಲವರಿಗೆ ಸಲೀಸಾಗಿ ಸಾಲ ನೀಡುತ್ತೀರಿ ಎಂದು ಸಂಸದೆ ಅಸಮಾಧಾನ ವ್ಯಕ್ತಪಡಿಸಿದರು.
ಕೃಷಿಕರ ಸಾಲ ವಿತರಣೆಗೆ ಆರಂಭದಲ್ಲೇ ಬ್ಯಾಂಕ್ ಅಧಿಕಾರಿಗಳು ವಿಘ್ನ ಮಾಡುತ್ತಿದ್ದಾರೆ ಎಂದು ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಕೂಡ ಹೇಳಿದರು.
ಜಿಲ್ಲಾಧಿಕಾರಿ, ನಾನೂ ಒಳಗೊಂಡಂತೆ ಮಟ್ಟದ ಸಮಿತಿ ನಿರ್ಣಯಿಸಿ ಪಟ್ಟಿ ಕಳುಹಿಸಿದ್ದರೂ ಅರ್ಹರಿಲ್ಲ ಎಂದು ನಿರ್ಧರಿಸುವುದಾದರೂ ಏಕೆ? ಎಲ್ಲದಕ್ಕೂ ಸಿಬಿಲ್ ಸ್ಕೋರ್ ನೋಡಬೇಕಿಲ್ಲ. ‘ಸಾಲ ಅನುಮೋದಿಸುವುದರ ಬಗ್ಗೆ ಯೋಚಿಸಿ, ಬದಲಾಗಿ ಹೇಗೆ ತಿರಸ್ಕರಿಸಬೇಕೆಂಬ ನಿಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳಿ, ಸಣ್ಣ ಮೊತ್ತದ ಸಾಲ ನಿರೀಕ್ಷಿಸುವ ಬೀದಿಬದಿ ವ್ಯಾಪಾರಿಗಳ ಬಗ್ಗೆಯೂ ಉದಾರತೆ ಇರಲಿ’ ಎಂದೂ ಸಿಇಒ ಕಿವಿಮಾತು ಹೇಳಿದರು.
ಪ್ರಧಾನಮಂತ್ರಿ ಸುರಕ್ಷಾ ಭಿಮಾ ಯೋಜನೆ, ಪ್ರಧಾನಮಂತ್ರಿ ಜೀವನಜ್ಯೋತಿ ಭಿಮಾ ಯೋಜನೆಯಡಿ 5,99,829 ನೋಂದಣಿಯಾಗಿದ್ದು, 2,26,794 ಮಂದಿ ನವೀಕರಣಗೊಂಡಿದ್ದಾರೆ. ಎಲ್ಲ ಇಲಾಖೆ ಅಧಿಕಾರಿ-ಸಿಬ್ಬಂದಿ ಕೂಡ ಇದರಡಿ ನೋಂದಣಿ ಆಗಬೇಕು. ಸಾರ್ವಜನಿಕರಲ್ಲೂ ಜಾಗೃತಿ ಮೂಡಿಸಬೇಕು ಎಂದೂ ಸಿಇಒ ಹೇಳಿದರು.
ಮಾಸಾಶನ, ಬೆಳೆ ಪರಿಹಾರ, ಗೃಹಲಕ್ಷ್ಮಿ ಸೇರಿ ಸರ್ಕಾರದ ಯೋಜನೆಗಳಡಿ ಫಲಾನುಭವಿಗಳಿಗೆ ಸಿಗುವ ಸಹಾಯಧನವನ್ನು ಬ್ಯಾಂಕ್‌ನ ಸಾಲಕ್ಕೆ ಮುರಿತ ಮಾಡಿಕೊಳ್ಳದಂತೆ ಹಲವು ನಿರ್ದೇಶನ ನೀಡಿದ್ದರೂ ಕೆಲವರು ಸುಧಾರಿಸಿಲ್ಲ. ಮಾಯಕೊಂಡ ಜನಸ್ಪಂದನಾ ಸಭೆಯಲ್ಲಿ ಈ ಬಗ್ಗೆ ದೂರುಗಳು ಬಂದಿವೆ. ಇಂಥ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದರು.
ರೈತ ಮಹಿಳೆಯರಲ್ಲಿ ಹೈನುಗಾರಿಕೆಗೆ ಪ್ರೋತ್ಸಾಹಿಸಲು ಹಸು/ ಎಮ್ಮೆ ಖರೀದಿಗೆ ಪಡೆಯುವ ಸಾಲವನ್ನು ಸಕಾಲಕ್ಕೆ ಪಾವತಿಸುವ ಮಹಿಳೆಯರಿಗೆ ಈ ಬಾರಿ ರಾಜ್ಯ ಸರ್ಕಾರದಿಂದ ಶೇ.6 ಬಡ್ಡಿ ಸಹಾಯಧನವನ್ನು ನೀಡಲಾಗುವುದು ಎಂದು ಪಶುಪಾಲನಾ ಇಲಾಖೆ ಸಹಾಯಕ ನಿರ್ದೇಶಕ ಡಾ.ಚಂದ್ರಶೇಖರ ಸುಂಕದ್ ಮಾಹಿತಿ ನೀಡಿದರು.
ಸಂಸದರ ಸೂಚನೆಯಂತೆ ಜಿಲ್ಲೆಯ ಲಂಬಾಣಿ ಮಹಿಳೆಯರ ಉತ್ಪನ್ನಗಳಿಗೆ ಮಾರುಕಟ್ಟೆ ಒದಗಿಸುವ ಅಧ್ಯಯನ ಸಂಬಂಧ ಅಧಿಕಾರಿಯೊಬ್ಬರನ್ನು ಬೇರೆಡೆ ಕಳುಹಿಸಲಾಗಿತ್ತು. ಗುಣಮಟ್ಟದ ಅಗತ್ಯವಿದೆ ಎಂದು ಸಿಇಒ ಹೇಳಿದರು. ಇತರೆ ಜಿಲ್ಲೆಯವರ ಬೇಡಿಕೆ ಬರುವಂತೆ ಕ್ರಮವಾಗಬೇಕು. ಆಹಾರಮೇಳದಲ್ಲೂ ಪ್ರದರ್ಶನ ಆಗಬೇಕು ಎಂದು ಸಂಸದರು ಹೇಳಿದರು.
ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಮೂಲಕ ಈಗಿನ ಮಾರುಕಟ್ಟೆಗೆ ತಕ್ಕಂತೆ ಕೌಶಲಗಳನ್ನು ಕಲಿಸಬೇಕು. ಅಗತ್ಯ ತಜ್ಞರನ್ನು ಕರೆಸಿ ಕಾರ್ಯಾಗಾರ ಮಾಡಿ ಎಂದೂ ಸೂಚಿಸಿದರು. ಜಗಳೂರು ತಾಲೂಕಿನಲ್ಲಿ ಟೈಲರಿಂಗ್ ಮಹಿಳೆಯರಿಗೆ ಉದ್ಯಮಶೀಲತೆಗೆ ನಿವೇಶನ ಕಲ್ಪಿಸಬೇಕು ಎಂದರು.
ಸಭೆಯಲ್ಲಿ ನಬಾರ್ಡ್ ಉಪ ವ್ಯವಸ್ಥಾಪಕಿ ರಶ್ಮಿರೇಖಾ, ಆರ್‌ಬಿಐ ಎಲ್‌ಡಿಒ ಟಿ.ಎಂ. ವೆಂಕಟರಮಣಯ್ಯ, ಕೆನರಾ ಬ್ಯಾಂಕ್ ಉಪಪ್ರಬಂಧಕ ಕಮಲೇಶ್ ವಾಸ್ನಿಕ್, ಜಿಪಂ ಉಪಕಾರ್ಯದರ್ಶಿ ಕೃಷ್ಣಾನಾಯ್ಕ ಇದ್ದರು.
ಶೈಕ್ಷಣಿಕ ಸಾಲಕ್ಕಾಗಿ ಭಿಕ್ಷಾಪಾತ್ರೆ ಹಿಡಿಯಬೇಕೆ? ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ತರಾಟೆ ಲೀಡ್ ಬ್ಯಾಂಕ್ ಪ್ರಗತಿ ಪರಿಶೀಲನಾ ಸಭೆ
ಪುರುಷರೇ ಎಡಗೈ, ಮಹಿಳೆಯರ ಬಲ ಅಂಗೈ ತುರಿಕೆಯಾದ್ರೆ ಕಾದಿದೆ ಈ ಗಂಡಾಂತರ!
ಬೆಂಗಳೂರು: ಅಂಗೈ ತುರಿಕೆಯಾಗಿದೆ ಎಂದರೆ ಹಣ ಬರುತ್ತದೆ ಎಂದು ಹಲವರು ಹೇಳುತ್ತಾರೆ. ಕೆಲವರು ಹಣ ಕಳೆದುಕೊಳ್ಳುತ್ತಿದ್ದಾರೆ…
ಈ ದಿನಾಂಕದಂದು ಜನಿಸಿದವರು ಜೀವನದಲ್ಲಿ ರಾಜರಂತೆ ಬದುಕುತ್ತಾರೆ… ನೀವೂ ಇದೇ ದಿನ ಹುಟ್ಟಿದ್ದೀರಾ ನೋಡಿ!
ಜ್ಯೋತಿಷ್ಯಶಾಸ್ತ್ರದಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಇದರ ಪ್ರಕಾರ ವ್ಯಕ್ತಿಯ ಜನ್ಮ ದಿನಾಂಕವು ಅವನ ವ್ಯಕ್ತಿತ್ವದ ಬಗ್ಗೆ ಮತ್ತು…
ಈ ಮೂರು ಕೆಲಸಗಳನ್ನು ಮಾಡಿದ ನಂತರ ಹಲ್ಲುಜ್ಜಬೇಡಿ! ಅನಾರೋಗ್ಯಕ್ಕೊಳಗಾಗುವುದು ಖಂಡಿತ..
ಬೆಂಗಳೂರು: ಬಾಯಿಯನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು ಆರೋಗ್ಯಕ್ಕೆ ಬಹಳ ಮುಖ್ಯ. ಸೂಕ್ಷ್ಮಜೀವಿಗಳು ಬಾಯಿಯ ಮೂಲಕ ಹೊಟ್ಟೆಯನ್ನು ಪ್ರವೇಶಿಸುತ್ತವೆ. ಇದು…