ದಾವಣಗೆರೆ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಮುಖಾಂತರ 56 ಕೋಟಿ ರೂ. ವೆಚ್ಚದಲ್ಲಿ ರಾಜ್ಯಾದ್ಯಂತ 873 ಕೆರೆಗಳನ್ನು ಅಭಿವೃದ್ಧಿ ಪಡಿಸಲಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಎಂ. ಲಕ್ಷ್ಮಣ್ ತಿಳಿಸಿದರು.
ಹೊರವಲಯದ ಯರಗುಂಟೆ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಹಮ್ಮಿಕೊಂಡಿದ್ದ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ ಕೆರೆಯ ಹೂಳೆತ್ತುವ ಕಾರ್ಯಕ್ರಮದ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ನೀರನ್ನು ಸಂಗ್ರಹಿಸುವಲ್ಲಿ ಕೆರೆಗಳ ಪಾತ್ರ ಬಹು ಮುಖ್ಯ. ವೀರೇಂದ್ರ ಹೆಗ್ಗಡೆ ಅವರ ಭವಿಷ್ಯದ ಚಿಂತನೆಯಿಂದಾಗಿ ಕೆರೆಗಳ ಪುನರುಜ್ಜೀವನಕ್ಕೆ ಧರ್ಮಸ್ಥಳ ಸಂಸ್ಥೆ ಕಾರ್ಯ ನಿರ್ವಹಿಸುತ್ತಿದೆ. ಸಂಸ್ಥೆಯ ವತಿಯಿಂದ ಹೂಳು ತುಂಬಿಕೊಂಡ ಕೆರೆಗಳನ್ನು ಆಯ್ಕೆ ಮಾಡಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದರು.
ಅಲ್ಲದೆ ಸಮುದಾಯ ಅಭಿವೃದ್ಧಿ ಕಾರ್ಯಕ್ರಮ, ಹಾಲಿನ ಡೇರಿ ರಚನೆಗೆ ಅನುದಾನ, ವಾತ್ಸಲ್ಯ ಮನೆ ರಚನೆ, ನಿರ್ಗತಿಕರ ಮಾಸಾಶನ ಜನಮಂಗಳ ಕಾರ್ಯಕ್ರಮದಡಿ ವಿಕಲಾಂಗರಿಗೆ ಸಾಧನಗಳ ವಿತರಣೆ, ಜ್ಞಾನ ದೀಪ ಶಿಕ್ಷಕರ ಒದಗಿಸುವಿಕೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಬೆಂಚು ಡೆಸ್ಕ್‌ಗಳ ವಿತರಣೆ, ಮದ್ಯವರ್ಜನಾ ಶಿಬಿರ, ಕೃಷಿ ಯಂತ್ರಧಾರೆ, ಆರೋಗ್ಯ ಅರಿವು, ಮಹಿಳೆಯರ ಸ್ವಾವಲಂಬಿ ಬದುಕಿಗೆ ಧರ್ಮಸ್ಥಳ ಸಂಸ್ಥೆ ನೆರವಾಗಿದೆ ಎಂದು ಹೇಳಿದರು.
ಪಾಲಿಕೆ ಆಯುಕ್ತೆ ರೇಣುಕಾ ಮಾತನಾಡಿ ಪುರಾತನ ಕೆರೆಗಳನ್ನು ಉಳಿಸಿ ಬೆಳೆಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ನೀರಿನ ಸಂಗ್ರಹಣೆಯ ಹಿನ್ನೆಡೆಯಿಂದಾಗಿ ಬೇಸಿಗೆಯಲ್ಲಿ ಕುಡಿವ ನೀರಿನ ಸಮಸ್ಯೆಯಾಗುತ್ತಿದ್ದು ನೀರಿನ ಮೂಲಗಳನ್ನು ಅಭಿವೃದ್ಧಿ ಪಡಿಸಿ ಅಂತರ್ಜಲ ಮಟ್ಟ ಹೆಚ್ಚಿಸಬೇಕಿದೆ. ಈ ನಿಟ್ಟಿನಲ್ಲಿ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯು ಜನಪರ ಯೋಜನೆಗಳನ್ನು ನಡೆಸುತ್ತಿದೆ ಎಂದು ಹೇಳಿದರು.
ಮೇಯರ್ ಕೆ;ಚಮನ್‌ಸಾಬ್ ಮಾತನಾಡಿ, ಗೋಕಟ್ಟೆ ಕೆರೆಯ ಅಭಿವೃದ್ಧಿಯ ನಂತರ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ನಗರಪಾಲಿಕೆ ಕೈ ಜೋಡಿಸಲಿದೆ. ಯರಗುಂಟೆ ಕೆರೆಯನ್ನು ಮಾದರಿ ಕೆರೆಯಾಗಿ ನಿರ್ಮಿಸುವಲ್ಲಿ ಪ್ರಯತ್ನಿಸೋಣ ಎಂದು ತಿಳಿಸಿದರು.
ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ ಊರಿಗೊಂದು ಕೆರೆಯ ಅವಶ್ಯಕತೆ ಇದ್ದು ಕೆರೆಗಳ ರಕ್ಷಣೆ ಹಾಗೂ ಕೆರೆಗಳನ್ನು ಸ್ಥಳೀಯ ಗ್ರಾಮಸ್ಥರು ರಕ್ಷಿಸಬೇಕು. ಮನೆಯ ನೀರಿನ ಶೇಖರಣೆಗಾಗಿ ಇಂಗು ಗುಂಡಿ ರಚನೆ, ಮಳೆ ನೀರು ಕೊಯ್ಲು ಮಾಡಿಕೊಳ್ಳಬೇಕು ಹೆಚ್ಚುವರಿಯಾಗಿ ಬರುವ ನೀರನ್ನು ಕೆರೆಗಳಿಗೆ ತಲುಪುವಂತೆ ವ್ಯವಸ್ಥೆ ಮಾಡಿ ನೀರಿನ ಶೇಖರಣೆಗೆ ಸರ್ವರೂ ಕೈ ಜೋಡಿಸಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಉಪಮೇಯರ್ ಸೋಗಿ ಶಾಂತಕುಮಾರ್, ಸಮಿತಿ ಅಧ್ಯಕ್ಷ ಬಸವರಾಜ್, ಚೇತನಾ ಶಿವಕುಮಾರ್, ಯೋಜನಾಧಿಕಾರಿ ಬಿ. ಶ್ರೀನಿವಾಸ್, ಇಂಜಿನಿಯರ್ ಹರೀಶ್, ಕೃಷಿ ಅಧಿಕಾರಿ ಪ್ರವೀಣ್, ನರೇಂದ್ರ, ಮೇಲ್ವಿಚಾರಕ ಚಂದ್ರಶೇಖರ, ವಿಶಾಲ ಇದ್ದರು.
