ದಾವಣಗೆರೆ ಜಿಲ್ಲೆಯಲ್ಲಿ ಮುಷ್ಕರಕ್ಕೆ ಮಿಶ್ರ ಪ್ರತಿಕ್ರಿಯೆ

ದಾವಣಗೆರೆ: ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಮಂಗಳವಾರ ದಾವಣಗೆರೆಯಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು.

ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಿಸಿತ್ತು. ಪ್ರಮುಖ ರಸ್ತೆ, ವಾಣಿಜ್ಯ ಪ್ರದೇಶಗಳಲ್ಲಿ ಅಂಗಡಿ, ಮುಂಗಟ್ಟುಗಳು ಬಹುತೇಕ ಮುಚ್ಚಿದ್ದವು. ಕೆಲ ವ್ಯಾಪಾರಸ್ಥರು ಅಂಗಡಿಗಳ ಬಾಗಿಲು ತೆರೆದಿದ್ದರು. ಕೆಎಸ್‌ಆರ್‌ಟಿಸಿ ಬಸ್‌ಗಳು ರಸ್ತೆಗೆ ಇಳಿಯಲಿಲ್ಲ. ಬಸ್ ನಿಲ್ದಾಣದ ಪ್ಲಾಟ್‌ಫಾರ್ಮ್‌ಗಳಲ್ಲಿ ಬಸ್‌ಗಳನ್ನು ಸಾಲು ಸಾಲಾಗಿ ನಿಲ್ಲಿಸಲಾಗಿತ್ತು. ನಿಗಮದ ನಗರ ಸಾರಿಗೆಯ ಒಂದೆರಡು ಬಸ್‌ಗಳು ಸಂಚರಿಸಿದ್ದು ಕಂಡುಬಂತು.

ಖಾಸಗಿ ಬಸ್‌ಗಳ ಸಂಚಾರ ಎಂದಿನಂತಿತ್ತು. ಆದರೆ, ಪ್ರಯಾಣಿಕರ ಸಂಖ್ಯೆ ಕಡಿಮೆಯಿತ್ತು. ಆಟೋಗಳು ವಿರಳವಾಗಿದ್ದವು. ಬ್ಯಾಂಕುಗಳಲ್ಲಿ ವಹಿವಾಟು ನಡೆಯಿತಾದರೂ ಗ್ರಾಹಕರು ಕಡಿಮೆ ಸಂಖ್ಯೆಯಲ್ಲಿದ್ದರು. ಪೆಟ್ರೋಲ್ ಬಂಕ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಚಿತ್ರಮಂದಿರಗಳು ತೆರೆದಿದ್ದವಾದರೂ ಪ್ರೇಕ್ಷಕರ ಕೊರತೆಯಿತ್ತು.

ಬಂದ್‌ಗೆ ಕರೆ ಕೊಟ್ಟಿದ್ದ ಕಾರ್ಮಿಕ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬೆಳಗ್ಗೆ ಜಯದೇವ ವೃತ್ತದಲ್ಲಿ ಜಮಾಯಿಸಿದರು. ಬ್ಯಾಂಕ್, ಎಲ್‌ಐಸಿ, ಆಟೋ, ಬಿಸಿಯೂಟ, ರೈತ ಸಂಘ, ಔಷಧ ಮಾರಾಟ ಪ್ರತಿನಿಧಿಗಳು, ಮುದ್ರಣ ಕಾರ್ಮಿಕರು, ಹೊರಗುತ್ತಿಗೆ ಕಾರ್ಮಿಕರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಸೇರಿದಂತೆ ದುಡಿಯುವ ವರ್ಗದ ಜನರು ಪಾಲ್ಗೊಂಡಿದ್ದರು.

ಮುಷ್ಕರ ನಿರತರು ಕೆಂಬಾವುಟ ಮತ್ತು ಪ್ಲೆಕಾರ್ಡ್ ಹಿಡಿದು ಬಂದಿದ್ದರು. ಕ್ರಾಂತಿ ಗೀತೆಗಳನ್ನು ಹಾಡಿದರು. ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ನಿರ್ಮಿಸಿದರು. ಮಹಿಳಾ ಹೋರಾಟಗಾರ್ತಿಯರು ಗಣನೀಯ ಸಂಖ್ಯೆಯಲ್ಲಿದ್ದರು.

ಮುಷ್ಕರ ನಿರತರು ಕೆಂಬಾವುಟ ಮತ್ತು ಪ್ಲೆಕಾರ್ಡ್ ಹಿಡಿದು ಬಂದಿದ್ದರು. ಕ್ರಾಂತಿ ಗೀತೆಗಳನ್ನು ಹಾಡಿದರು. ಸರ್ಕಾರದ ಕಾರ್ಮಿಕ ವಿರೋಧಿ ನೀತಿಗಳ ವಿರುದ್ಧ ಘೋಷಣೆ ಕೂಗಿದರು. ಮಾನವ ಸರಪಳಿ ನಿರ್ಮಿಸಿದರು. ಮಹಿಳಾ ಹೋರಾಟಗಾರ್ತಿಯರು ಗಣನೀಯ ಸಂಖ್ಯೆಯಲ್ಲಿದ್ದರು.