ದಾವಣಗೆರೆ: ಕರ್ನಾಟಕದ (ಬೆಳಗಾವಿ) ಪಿ.ಎಂ. ಶ್ರೀ ಕೇಂದ್ರೀಯ ವಿದ್ಯಾಲಯ ಬಾಲಕಿಯರು ಹಾಗೂ ಆಂಧ್ರಪ್ರದೇಶದ ಪಶ್ಚಿಮ ಗೋದಾವರಿಯ ತಡೆಪಲ್ಲಿಗುಡಂನ ಎಪಿಎಸ್‌ಡಬ್ಲು ಆರ್ ಶಾಲೆಯ ಬಾಲಕರು ದಕ್ಷಿಣ ವಲಯ ಮಟ್ಟದ ಪೈಪ್ ಬ್ಯಾಂಡ್ ವಾದನ ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.
ಇಲ್ಲಿನ ಹೊರವಲಯದ ತೋಳಹುಣಸೆಯ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಆಂಗ್ಲ ಮಾಧ್ಯಮ ವಸತಿ ಶಾಲೆ ಮೈದಾನದಲ್ಲಿ ಸಮಗ್ರ ಶಿಕ್ಷಣ ಕರ್ನಾಟಕ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.
ಉಭಯ ತಂಡಗಳ ಸದಸ್ಯರು ಧರಿಸಿದ್ದ ಆಕರ್ಷಿತ ಸಮವಸ್ತ್ರ, ವೇಗ ಹಾಗೂ ನಿಧಾನಗತಿಯ ಪಥ ಸಂಚಲನ ಹಾಗೂ ಪ್ರಸ್ತುತಿಪಡಿಸಿದ ರಾಗಗಳ ಲಯಗತಿ ಆಧರಿಸಿ ಪ್ರಥಮ ಬಹುಮಾನ ಗಿಟ್ಟಿಸುವ ಜತೆಗೆ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಲಗ್ಗೆಯಿಟ್ಟವು.
ಉಳಿದಂತೆ ಪೈಪ್ ಬ್ಯಾಂಡ್ ವಾದನದ ಬಾಲಕಿಯರ ವಿಭಾಗದಲ್ಲಿ ಆಂಧ್ರಪ್ರದೇಶದ ಮೋಂಟೆ ಸಿಬಿಎಸ್‌ಸಿ ಶಾಲೆ ಹಾಗೂ ತಮಿಳುನಾಡಿನ (ಥಕ್ಕೋಳಂ) ಪಿ.ಎಂ.ಶ್ರೀ ಕೇಂದ್ರೀಯ ವಿದ್ಯಾಲಯ ಕ್ರಮವಾಗಿ ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ತೃಪ್ತಿಪಟ್ಟವು.
ಬಾಲಕರ ವಿಭಾಗದಲ್ಲಿ ಕರ್ನಾಟಕದ (ಬೆಳಗಾವಿ) ಪಿಎಂ ಶ್ರೀ ಕೇಂದ್ರೀಯ ವಿದ್ಯಾಲಯ ದ್ವಿತೀಯ ಹಾಗೂ ತಮಿಳುನಾಡಿನ (ತಂಬರಂ) ಪಿ.ಎಂ.ಶ್ರೀ ಕೇಂದ್ರೀಯ ಶಾಲೆ ಮೂರನೇ ಸ್ಥಾನ ಗಳಿಸಿದವು.
ಬ್ರಾಸ್ ಬ್ಯಾಂಡ್ ವಾದನ ಸ್ಪರ್ಧೆಗಳಲ್ಲಿ ಕೇರಳದ ಸೇಂಟ್ ಜೋಸೆಫ್ಸ್ ಆಂಗ್ಲೋ ಇಂಡಿಯನ್ ಬಾಲಕಿಯರ ಪ್ರೌಢಶಾಲೆ ಹಾಗೂ ಛತ್ತೀಸಗಡದ (ಪಥಾಲ್‌ಗೌನ್) ಸೇಂಟ್ ಕ್ಸೇವಿಯರ್ಸ್ ಆಂಗ್ಲ ಮಾಧ್ಯಮ ಶಾಲೆಗಳು ಕ್ರಮವಾಗಿ ಬಾಲಕಿಯರು ಹಾಗೂ ಬಾಲಕರ ವಿಭಾಗಗಳಲ್ಲಿ ಪ್ರಥಮ ಬಹುಮಾನದೊಂದಿಗೆ ರಾಷ್ಟ್ರ ಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದವು.
ಛತ್ತೀಸಗಢದ (ಪಥಾಲ್‌ಗೌನ್) ಸೇಂಟ್ ಕ್ಸೇವಿಯರ್ಸ್ ಶಾಲೆ, ತಮಿಳುನಾಡಿನ ಅವಿಳಾ ಕಾನ್ವೆಂಟ್ ಮೆಟ್ರಿಕ್ಯುಲೇಷನ್ ಶಾಲೆಯ ಬಾಲಕಿಯರ ತಂಡಗಳು ಅನುಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಪಡೆದವು.
ಬಾಲಕರ ವಿಭಾಗದಲ್ಲಿ ಪುದುಚೆರಿಯ ಅಮಲೋರ್ಪವಂ ಲೂರ್ಡ್ಸ್ ಅಕಾಡೆಮಿ ಮತ್ತು ತೆಲಂಗಾಣದ ಹೈದರಾಬಾದ್‌ನ ಸೇಂಟ್ ಆ್ಯಂಡ್ರೂೃ ಪ್ರೌಢಶಾಲೆಗಳು ಕ್ರಮವಾಗಿ ದ್ವಿತೀಯ, ತೃತೀಯ ಬಹುಮಾನ ಗಳಿಸಿದವು.
ಸಂಜೆ ಆಯೋಜಿಸಿದ್ದ ಸಮಾರೋಪದಲ್ಲಿ ವಿಜೇತ ತಂಡಗಳಿಗೆ ಅನುಕ್ರಮವಾಗಿ 10 ಸಾವಿರ ರೂ, 7 ಸಾವಿರ ರೂ., ಹಾಗೂ 5 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕಗಳನ್ನು ನೀಡಲಾಯಿತು. ಅಂಡಮಾನ್ ನಿಕೋಬಾರ್, ಲಕ್ಷದ್ವೀಪ ಒಳಗೊಂಡಂತೆ ಒಟ್ಟು 9 ರಾಜ್ಯದ 19 ತಂಡಗಳಿಂದ ಒಟ್ಟು 750 ಬಾಲಕ-ಬಾಲಕಿಯರು ಭಾಗವಹಿಸಿದ್ದರು.
ಆಟೋಟಗಳಿಗೆ ಹೆಸರಾಗಿದ್ದ ಕ್ರೀಡಾಂಗಣದಲ್ಲಿ ಮೊದಲ ಬಾರಿಗೆ ಬ್ಯಾಂಡ್ ವಾದನದ ಮೂಲಕ ದೇಶಭಕ್ತಿಗೀತೆಗಳ ಸುನಾದ ಅಲ್ಲಿ ಸೇರಿದ್ದವರ ಕಿವಿಗೆ ತಂಪು ನೀಡಿದ್ದರೆ, ಬ್ಯಾಂಡ್ ಮಾಸ್ಟರ್‌ನ ಹ್ಯಾಂಡ್‌ಸ್ಟಿಕ್‌ನ ಕಸರತ್ತು, ತಂಡಗಳ ಚಲನವಲನ ನೋಡುವ ಕಣ್ಣುಗಳನ್ನು ಅರಳಿಸಿದ್ದವು.
ಬದುಕಿನ ಅವಿಭಾಜ್ಯ ಸಂಗೀತ
ಸಂಗೀತ ಸ್ಪರ್ಧೆಗೆ ಮಾತ್ರ ಸೀಮಿತವಲ್ಲ. ಇದು ಬದುಕಿಗೂ ಅಗತ್ಯ. ಗಡಿಗಳನ್ನು ಮೀರಿ ಹೃದಯ ಬೆಸೆಯುವ ಸಾಮರ್ಥ್ಯ ಇರುವುದು ಸಂಗೀತಕ್ಕೆ ಮಾತ್ರ ಎಂದು ಸಮಗ್ರ ಶಿಕ್ಷಣ ಕರ್ನಾಟಕದ ಕಾರ್ಯಕ್ರಮಾಧಿಕಾರಿ ಸೂರ್ಯಕಲಾ ಅಭಿಪ್ರಾಯಪಟ್ಟರು.
ಬ್ರಾಸ್ ಬ್ಯಾಂಡ್ ಸ್ಪರ್ಧೆಯ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ಭಾರತೀಯ ಸಂಸ್ಕೃತಿ ರಕ್ಷಣೆಗೆ ಸಂಗೀತ ನೆರವಾಗುತ್ತದೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಚಟುವಟಿಕೆಯಲ್ಲಿ ತೊಡಗಿಸಿಕೊಂಡರೆ ಸಂಗೀತದ ಬಗ್ಗೆ ವ್ಯಾಮೋಹ ಬೆಳೆಯುತ್ತದೆ ಎಂದು ಹೇಳಿದರು.
ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ವಲಯ ಮಟ್ಟದ ಬ್ಯಾಂಡ್ ಮತ್ತು ಪೈಪ್ ಬ್ಯಾಂಡ್ ವಾದನ ಸ್ಪರ್ಧೆಯಲ್ಲಿ ವಿಜೇತರು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಲಿದ್ದಾರೆ. ಗಣರಾಜ್ಯೋತ್ಸವಕ್ಕೂ ಮುನ್ನ ರಾಷ್ಟ್ರಮಟ್ಟದ ಸ್ಪರ್ಧೆ ನಡೆಯಲಿದೆ ಎಂದು ವಿವರಿಸಿದರು.
ತೋಳಹುಣಸೆ ಗ್ರಾಪಂ ಅಧ್ಯಕ್ಷೆ ತಾವರೀ ಬಾಯಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಪನಿರ್ದೇಶಕ ಜಿ.ಕೊಟ್ರೇಶ್, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಜಿ.ಕರಿಸಿದ್ದಪ್ಪ, ಡಯಟ್ ಪ್ರಾಚಾರ್ಯೆ ಗೀತಾ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಯಪ್ಪ, ಹಾಲಮೂರ್ತಿ, ನಿಂಗಪ್ಪ, ಮಂಜುಳಾ, ಡಿವೈಎಸ್‌ಪಿ ಪ್ರಕಾಶ್, ಮಾಜಿ ಯೋಧ ಸುರೇಂದ್ರ ಸಿಂಗ್, ಆರೋಗ್ಯಸ್ವಾಮಿ ಇದ್ದರು.
—-
ಕರ್ನಾಟಕ- ಆಂಧ್ರಪ್ರದೇಶ ಚಾಂಪಿಯನ್ಸ್ ದಕ್ಷಿಣ ವಲಯ ಪೈಪ್‌ಬ್ಯಾಂಡ್ ಸ್ಪರ್ಧೆ
ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತೆಂಗಿನೆಣ್ಣೆ ಕುಡಿದರೆ ಏನಾಗುತ್ತೆ ಗೊತ್ತಾ? Coconut Oil Benefits
Coconut Oil Benefits: ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತಿನ್ನುವ ಆಹಾರವೇ ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ.…
ಕಣ್ಣಿಗೊಂದು ಸವಾಲ್…ಈ ಫೋಟೋದಲ್ಲಿರುವ ಹಾವನ್ನು ಗುರುತಿಸಬಲ್ಲಿರಾ? Optical Illusion..
Optical Illusion: ನಮ್ಮ ಕಣ್ಣುಗಳಿಗೆ ಸವಾಲು ಎಸೆಯುವಂತಹ ಚಿತ್ರಗಳು ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಾಗ…
Tea….ಒಂದು ತಿಂಗಳು ಟೀ ಕುಡಿಯುವುದನ್ನು ಬಿಟ್ಟರೆ ಏನಾಗುತ್ತೆ ಗೊತ್ತಾ?
Tea: ಬೆಳಗ್ಗೆ ಎದ್ದ ತಕ್ಷಣ ಬಿಸಿ ಬಿಸಿ ಟೀ ಕುಡಿದರೆ ಸಿಗುವ ಸಂತೋಷ ಅಷ್ಟಿಷ್ಟಲ್ಲ. ಹಾಗಿದ್ದರೂ,…