ದಾವಣಗೆರೆ: ಸೂಕ್ತ ದಾಖಲೆ ಹೊಂದಿರದ ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ರಾಜೀವ್ ಎಚ್ಚರಿಕೆ ನೀಡಿದರು.
ನಗರದ ಬಡಾವಣೆ ಠಾಣೆಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ದಂಡ ಕಟ್ಟುವ ಬದಲು ದಾಖಲೆ ಹೊಂದುವಂತೆ ಸಲಹೆ ನೀಡಿದರು.
ವಿಮೆ, ಡಿಸ್ಪ್ಲೆ ಕಾರ್ಡ್, ಚಾಲನ ಪರವಾನಗಿ ಮುಂತಾದ ದಾಖಲೆಗಳು ಇಲ್ಲದೆ ಕೆಲ ಆಟೋಗಳು ಸಂಚರಿಸುತ್ತಿವೆ. ಚಾಲಕರು ಆಟೋಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಕ್ಕಳನ್ನು ಶಾಲೆಗೆ ಕರೆದೊಯ್ಯುತ್ತಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿದರು.
ದಕ್ಷಿಣ ಸಂಚಾರಿ ಠಾಣೆ ಪಿಎಸ್ಐ ಮಂಜುನಾಥ್ ಲಿಂಗಾರೆಡ್ಡಿ ಮಾತನಾಡಿ, ನಗರದಲ್ಲಿ ಮಹಾರಾಷ್ಟ್ರ, ಜಗಳೂರು ಸೇರಿ ಬೇರೆ ಕಡೆಯ ಆಟೋಗಳಿದ್ದು, ಡಿಸ್ಪ್ಲೇ ಕಾರ್ಡ್ ಹಾಕಿಕೊಂಡರೆ ಅಧಿಕೃತ ಯಾವುದೆಂದು ತಿಳಿಯುತ್ತದೆ. ಇವುಗಳನ್ನು ಪೊಲೀಸರು ತಡೆಯುವುದಿಲ್ಲ ಎಂದರು.
ಸ್ಮಾರ್ಟ್ಸಿಟಿಯಲ್ಲಿ ಕೇವಲ ಪೆಟ್ರೊಲ್, ಎಲ್ಪಿಜಿ ಆಟೋ ಮಾತ್ರ ಓಡಿಸಬೇಕು. ಡೀಸೆಲ್ ಆಟೋಗಳಿಗೆ ಅವಕಾಶ ಇಲ್ಲ. ಸೆ.28ರ ನಂತರ ಸರ್ಕಾರಿ ನಿಗದಿ ಪಡಿಸಿದ ದರದಲ್ಲಿ ಚಾಲನಾ ಪರವಾನಗಿ ವಿತರಣೆಗಾಗಿ ಮೇಳ ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಡಿವೈಎಸ್ಪಿ ಮಂಜುನಾಥ್ ಗಂಗಲ್, ಸಿಪಿಐ ತಿಮ್ಮಪ್ಪ ಹಾಗೂ 200ಕ್ಕೂ ಅಧಿಕ ಆಟೋ ಚಾಲಕರು ಪಾಲ್ಗೊಂಡಿದ್ದರು.
ಆಟೋ ಚಾಲಕರ ಬೇಡಿಕೆಗಳು: ವಿಮೆ, ಚಾಲನಾ ಪರಮವಾನಗಿ ಮುಂತಾದ ದಾಖಲಾತಿ ಪಡೆದುಕೊಳ್ಳಲು ಕಾಲಾವಕಾಶ ಕೊಡಬೇಕು. ಕೆಲವರು ಸಣ್ಣ ತಪ್ಪು ಮಾಡುತ್ತಿದ್ದು, ದಂಡ ವಿಧಿಸುವಲ್ಲಿ ವಿನಾಯಿತಿ ನೀಡಬೇಕು. ಆರ್ಟಿಒ ಕಿರುಕುಳಕ್ಕೆ ಕಡಿವಾಣ ಹಾಕಬೇಕು ಮುಂತಾದವುಗಳ ಈಡೇರಿಸುವಂತೆ ಆಟೋ ಚಾಲಕರು ಪೊಲೀಸರಿಗೆ ಮನವಿ ಮಾಡಿದರು.