ದಾವಣಗೆರೆ: ಬರಗಾಲ ಬಂದಾಗ ಸಾವಿರಾರು ಕೋಟಿ ರೂ. ನೀಡುವ ಬದಲು ಅನಾವೃಷ್ಟಿಯೇ ಆಗದಂತೆ ಕೆರೆಗಳನ್ನು ತುಂಬಿಸಿ ಶಾಶ್ವತ ಪರಿಹಾರ ಒದಗಿಸುವ ಯೋಜನೆಗಳನ್ನು ಸರ್ಕಾರಗಳು ರೂಪಿಸಬೇಕು ಎಂದು ಸಿರಿಗೆರೆ ತರಳಬಾಳು ಮಠದ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ನಗರದ ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮುದಾಯ ಭವನದಲ್ಲಿ ಬುಧವಾರ, ಲಿಂ. ಶ್ರೀ ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ 27ನೇ ಶ್ರದ್ಧಾಂಜಲಿ ಸಮಾರಂಭದ ದಾಸೋಹಕ್ಕೆ, ದಾವಣಗೆರೆ ನಗರ, ತಾಲೂಕಿನ ಗ್ರಾಮಾಂತರ ಶಿಷ್ಯ ಮಂಡಳಿಯಿಂದ ಭಕ್ತಿ ಸಮರ್ಪಣೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಒಂದು ಕಡೆ ಭೀಕರ ಪ್ರವಾಹ, ಮತ್ತೊಂದೆಡೆ ಬರಗಾಲ. ಇದನ್ನು ಸರಿದೂಗಿಸಿ, ವ್ಯರ್ಥವಾಗಿ ಹರಿದು ಹೋಗುವ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಎಲ್ಲ ಸರ್ಕಾರಗಳು ಕ್ರಮ ಕೈಗೊಳ್ಳಬೇಕು. ನೆರವು ನೀಡುವಂತೆ ಕೇಂದ್ರ ಸರ್ಕಾರದ ಕಡೆಗೆ ಕೈಚಾಚುವ ಬದಲು ಕೆರೆಗಳನ್ನು ತುಂಬಿಸಿದರೆ ಅಂಥ ಸಂದರ್ಭವೇ ಬರುವುದಿಲ್ಲ ಎಂದು ನುಡಿದರು.
ಜಗಳೂರು ತಾಲೂಕಿನ ಕೆರೆಗಳು ಮತ್ತು ಭರಮಸಾಗರ ಸುತ್ತಲಿನ ಕೆರೆಗಳನ್ನು ತುಂಬಿಸುವ 2 ಪ್ರತ್ಯೇಕ ಯೋಜನೆಗಳಿಗೆ ಸರ್ಕಾರದಿಂದ ಮಂಜೂರಾತಿ ದೊರಕಿ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ. ಇನ್ನೊಂದು ವರ್ಷದಲ್ಲಿ ಈ ಯೋಜನೆಗಳು ಕಾರ್ಯರೂಪಕ್ಕೆ ಬರಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಹಾಸನ ತಾಲೂಕು ಹಳೇಬೀಡಲ್ಲಿ ಮುಂದಿನ ವರ್ಷ ತರಳಬಾಳು ಹುಣ್ಣಿಮೆ ಮಹೋತ್ಸವ ನಡೆಸಲಾಗುವುದು. ಆ ಭಾಗದ ಎಸ್.ಬಿದರೆ, ನಿಡಘಟ್ಟ ಮತ್ತಿತರ ಕೆರೆ ತುಂಬಿಸುವ 90 ಕೋಟಿ ರೂ. ಗಳ ರಣಘಟ್ಟ ಯೋಜನೆಗೆ ಮಂಜೂರಾತಿ ಸಿಕ್ಕಿದೆ. ಅದರ ಜಾರಿಗೆ ಸರ್ಕಾರದ ಮಟ್ಟದಲ್ಲಿ ಪ್ರಯತ್ನಿಸುವುದಾಗಿ ಶ್ರೀಗಳು ತಿಳಿಸಿದರು.
ಸಿರಿಗೆರೆ ಮಠದ ನ್ಯಾಯ ಪೀಠದಲ್ಲಿ ಇತ್ತೀಚೆಗೆ ನೀರಾವರಿಗೆ ಸಂಬಂಧಿಸಿದ ಪ್ರಕರಣಗಳೇ ಹೆಚ್ಚಾಗಿ ಬರುತ್ತಿವೆ. ಭಾಷಣ ಮಾಡುವುದಕ್ಕಿಂತಲೂ ನ್ಯಾಯಪೀಠದಲ್ಲಿ ಕುಳಿತು ಕೆಲಸ ಮಾಡುವುದರಲ್ಲಿ ತಮಗೆ ಹೆಚ್ಚಿನ ತೃಪ್ತಿಯಿದೆ. ಇದರಿಂದ ಜನ ಕಣ್ಣೀರು ಒರೆಸಲು ಸಾಧ್ಯ ಎಂದರು.
ತಮ್ಮ ಮಠಕ್ಕೆ ದೊಡ್ಡ ಪರಂಪರೆಯಿದ್ದು ಹಿಂದಿನ ಗುರುಗಳು ಸಮಾಜದ ಒಳಿತಿಗಾಗಿ ಅನೇಕ ಹೋರಾಟಗಳನ್ನು ಮಾಡಿದ್ದಾರೆ. ಅವುಗಳನ್ನು ಕುರಿತಾಗಿಯೇ ಒಂದು ಗ್ರಂಥ ಹೊರ ತರುವ ಉದ್ದೇಶ ತಮಗಿದೆ. ನೆರೆ ಹಾವಳಿ ಹಿನ್ನೆಲೆ ಸಿರಿಗೆರೆಯಲ್ಲಿ ಶ್ರದ್ಧಾಂಜಲಿ ಸಮಾರಂಭವನ್ನು ವಾರದ ಬದಲು ಒಂದೇ ದಿನಕ್ಕೆ ಸೀಮಿತಗೊಳಿಸಿದ್ದೇವೆ ಎಂದು ಹೇಳಿದರು.
ಹೋಟೆಲ್ ಉದ್ಯಮಿ ಅಣಬೇರು ರಾಜಣ್ಣ ಮಾತನಾಡಿ, ಹಿರಿಯ ಜಗದ್ಗುರುಗಳು ಸಮಾಜಕ್ಕಾಗಿ ಅನೇಕ ಉಪಯುಕ್ತ ಕಾರ್ಯಗಳನ್ನು ಮಾಡಿದರು. ಕ್ರಾಂತಿಕಾರಕ ಬದಲಾವಣೆ ತಂದರು ಎಂದು ತಿಳಿಸಿದರು.
ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಎಚ್.ಡಿ.ಮಹೇಶ್ವರಪ್ಪ, ದಲ್ಲಾಲರ ಸಂಘದ ಅಧ್ಯಕ್ಷ ಜಿ.ಎಸ್.ಪರಮೇಶ್ವರ ಗೌಡರು ಮಾತನಾಡಿದರು. ಸಮಾಜದ ಉಪಾಧ್ಯಕ್ಷ ಶಿವಳ್ಳಿ, ಶಶಿಧರ ಹೆಮ್ಮನಬೇತೂರು, ರವಿಕುಮಾರ್ ನುಗ್ಗೇಹಳ್ಳಿ, ಮೆಳ್ಳೆಕಟ್ಟೆ ಶ್ರೀನಿವಾಸ್, ಪ್ರಭು ಕಾವಲಹಳ್ಳಿ ಪಾಲ್ಗೊಂಡಿದ್ದರು. ಲಿಂಗರಾಜ ಆನೆಕೊಂಡ ಕಾರ್ಯಕ್ರಮ ನಿರೂಪಿಸಿದರು.
ಒತ್ತಡದಿಂದ ಆದೇಶವೇ ಬದಲಾಯ್ತು: ಜಗಳೂರು ತಾಲೂಕಿನ ಏತ ನೀರಾವರಿ ಯೋಜನೆಗೆ 660 ಕೋಟಿ ರೂ.ಗಳ ಬದಲು 250 ಕೋಟಿ ರೂ.ಗೆ ಮಾತ್ರ ಸೀಮಿತಗೊಳಿಸಿ ಅನುಮೋದನೆ ನೀಡಿ ಈಗಿನ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಅದಕ್ಕೆ ತಾವು ಅಸಮಾಧಾನ ವ್ಯಕ್ತಪಡಿಸಿದ ನಂತರ ಬಿ.ಎಸ್.ಯಡಿಯೂರಪ್ಪ ಅವರು ಆ ಆದೇಶ ವಾಪಸ್ ಪಡೆದು ಈ ಮೊದಲು ಘೋಷಿಸಿದ್ದಂತೆ 660 ಕೋಟಿ ರೂ. ಗಳಿಗೆ ಮಂಜೂರು ಮಾಡಿ, ಜತೆಗೆ ಭರಮಸಾಗರದ ಯೋಜನೆಗೆ 522 ಕೊಟಿ ರೂ. ಮಂಜೂರು ಮಾಡಿ ಮತ್ತೊಂದು ಆದೇಶ ಹೊರಡಿಸಿದ್ದಾರೆ ಎಂದು ಶ್ರೀಗಳು ತಿಳಿಸಿದರು.