ಕನಸು ದೊಡ್ಡದಿರಲಿ, ಓದು ನಿಲ್ಲದಿರಲಿ: ಎಸ್.ಎ.ರವೀಂದ್ರನಾಥ

ದಾವಣಗೆರೆ: ವಿದ್ಯಾರ್ಥಿಗಳು ಐಎಎಸ್, ಐಪಿಎಸ್, ಕೆಎಎಸ್ ಸೇರಿ ಇತರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಿ ಉನ್ನತ ಹುದ್ದೆಗಳಿಗೇರಬೇಕು ಎಂದು ಶಾಸಕ ಎಸ್.ಎ.ರವೀಂದ್ರನಾಥ ಹೇಳಿದರು.

ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ, ಪಠ್ಯಪೂರಕ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಬಿ.ಎ, ಬಿಎಸ್‌ಸಿ, ಬಿಕಾಂ ಪದವಿ ಪಡೆದ ನಂತರ ವ್ಯಾಸಂಗವನ್ನು ನಿಲ್ಲಿಸಬಾರದು. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವುದು ನಮ್ಮಿಂದ ಆಗುವುದಿಲ್ಲ ಎಂಬ ನಕಾರಾತ್ಮಕ ಭಾವನೆ ಬೇಡ. ಸಾಮಾನ್ಯ ಕುಟುಂಬಗಳಿಂದ ಬಂದವರೇ ಹೆಚ್ಚಿನ ಸಾಧನೆ ಮಾಡಿದ ಉದಾಹರಣೆಗಳಿವೆ. ಓದುವ ವಯಸ್ಸಲ್ಲಿ ಓದಬೇಕು. ಇದರಲ್ಲಿ ಆಲಸ್ಯ ಇರಬಾರದು ಎಂದು ಕಿವಿಮಾತು ಹೇಳಿದರು.

ಸರ್ಕಾರ ವಿದ್ಯಾರ್ಥಿಗಳಿಗೆ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಅವುಗಳ ಸದ್ಬಳಕೆ ಮಾಡಿಕೊಂಡು ಚೆನ್ನಾಗಿ ಓದಿ, ಉತ್ತಮ ಫಲಿತಾಂಶ ತಂದು ಕಾಲೇಜಿಗೆ ಕೀರ್ತಿ ತರಬೇಕು ಎಂದು ತಿಳಿಸಿದರು.

ಎಚ್.ಸುಹಾನಾ ಕಾರ್ಯಕ್ರಮ ನಿರೂಪಿಸಿದರು. ದಾವಣಗೆರೆ ವಿವಿಗೆ ಬಿ.ಕಾಂ. ಪದವಿಯಲ್ಲಿ ಪ್ರಥಮ ರ‌್ಯಾಂಕ್ ಗಳಿಸಿದ ಕಾಲೇಜಿನ ವಿದ್ಯಾರ್ಥಿನಿ ಜ್ಯೋತಿ ಅವರನ್ನು ಸನ್ಮಾನಿಸಲಾಯಿತು.

ಜಾನಪದ ಕಲಾವಿದ ಬಾರಿಕೇರ ಕರಿಯಪ್ಪ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಡಿ.ಎಸ್.ಶಿವಶಂಕರ್, ಜ್ಯೋತಿ ಸಿದ್ದೇಶ್, ವಿಠಲಾಪುರ ರುದ್ರಪ್ಪ, ಎಸ್.ಜಿ. ಶಿವಪ್ಪ, ದಿಳ್ಳೆಪ್ಪ, ಸತೀಶ್, ಟಿ.ಶೇಷಪ್ಪ, ಕಾಲೇಜು ಪ್ರಾಂಶುಪಾಲ ಡಾ.ದಾದಾಪೀರ್ ನವಿಲೇಹಾಳ್, ಪತ್ರಾಂಕಿತ ವ್ಯವಸ್ಥಾಪಕ ಬಿ.ಎಲ್.ಶಿವಮೂರ್ತಿ, ದೈಹಿಕ ಶಿಕ್ಷಕ ಡಿ. ನಾಗೇಂದ್ರ ನಾಯ್ಕ, ಜಿ.ಎಸ್.ಅನುರಾಧಾ, ಜಿ.ಎಸ್.ಸತೀಶ್ ಇದ್ದರು.

ಸಾಂಸ್ಕೃತಿಕ ಸಮಿತಿ ಸಂಚಾಲಕ ತೊಪ್ಪಲ ಕೆ. ಮಲ್ಲಿಕಾರ್ಜುನ ಗೌಡ ಪ್ರಾಸ್ತಾವಿಕ ಮಾತನಾಡಿದರು. ರಂಜಿನಿ ಮತ್ತು ರಂಜಿತಾ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕಿ ಡಾ.ಜಿ.ಕಾವ್ಯಶ್ರೀ ಸ್ವಾಗತಿಸಿದರು. ಡಾ.ಎಂ.ಪಿ.ಭೀಮಪ್ಪ ವಂದಿಸಿದರು.

ಜೀವನದಲ್ಲಿ ಯಶಸ್ವಿಗೆ ಸೂತ್ರಗಳು:
ಜೀವನದಲ್ಲಿ ಯಶಸ್ವಿಯಾಗಬೇಕಾದರೆ ನಾಲ್ಕು ಸೂತ್ರಗಳನ್ನು ಪಾಲಿಸಬೇಕು ಎಂದು ದಾವಣಗೆರೆ ವಿವಿಯ ಪರೀಕ್ಷಾಂಗ ಕುಲಸಚಿವ ಡಾ.ಬಸವರಾಜ್ ಬಣಕಾರ್ ಸಲಹೆ ನೀಡಿದರು. ನಿತ್ಯವೂ ವ್ಯಾಯಾಮ ಮಾಡಬೇಕು. ಅದರಿಂದ ಸದೃಢ ದೇಹ ಹೊಂದಬಹುದು. ಮನಸ್ಸನ್ನು ನಿಯಂತ್ರಣದಲ್ಲಿ ಇಡಬೇಕು. ಮೊಬೈಲ್ ಗೀಳಿನಿಂದ ಹೊರಬರಬೇಕು. ಧ್ಯಾನ, ಪ್ರಾಣಾಯಾಮಗಳ ಮೊರೆ ಹೋಗಬೇಕು. ನಾವು ಆಡುವ ಮಾತು ನಿಯಂತ್ರಣದಲ್ಲಿರಬೇಕು. ಪಠ್ಯಪುಸ್ತಕಗಳನ್ನು ಓದುವ ಜತೆಗೆ ಬರೆಯುವ ಅಭ್ಯಾಸ ಮಾಡಬೇಕು. ನಮ್ಮ ಆಲೋಚನಾ ಕ್ರಮ ಸಕಾರಾತ್ಮಕವಾಗಿರಬೇಕು ಎಂದು ತಿಳಿಸಿದರು.

Leave a Reply

Your email address will not be published. Required fields are marked *