ಡಿಜೆ ಬಳಸಿದ್ರೆ ಕ್ರಮ ಖಚಿತ

ದಾವಣಗೆರೆ: ಡಿಜೆ, ಧ್ವನಿವರ್ಧಕ ಬಳಕೆ ಕುರಿತು ಬುಧವಾರವಷ್ಟೆ ಆದೇಶಕ್ಕೆ ಸಹಿ ಮಾಡಿದ್ದೇನೆ. ಇದನ್ನು ಉಲ್ಲಂಘಿಸಿದಲ್ಲಿ ಕ್ರಮ ಅನಿವಾರ್ಯ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಸಾರ್ವಜನಿಕ ಗಣೇಶ ಪ್ರತಿಷ್ಠಾಪನಾ ಸಂಘ ಸಂಸ್ಥೆಗಳಿಗೆ ಖಡಕ್ ಸಂದೇಶ ರವಾನಿಸಿದ್ದಾರೆ.

ಗಣೇಶೋತ್ಸವ ಹಾಗೂ ಮೊಹರಂ ಆಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಗರಿಕ ಸೌಹಾರ್ದ ಸಭೆಯಲ್ಲಿ ಮಾತನಾಡಿದರು.

ವಸತಿ, ಕೈಗಾರಿಕಾ, ವಾಣಿಜ್ಯ ಪ್ರದೇಶ, ಶಾಲೆ ಮೊದಲಾದ ಶಾಂತ ವಲಯಗಳಲ್ಲಿ ಧ್ವನಿವರ್ಧಕಗಳನ್ನು ನಿರ್ದಿಷ್ಟ ಡೆಸಿಬಲ್ ಮೀರಿ ಬಳಸುವಂತಿಲ್ಲ. ಜಿಲ್ಲೆಯಲ್ಲಿ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿ ಮಾಡೋಣ ಎಂದು ಹೇಳಿದರು.

ಗಣೇಶ-ಮೊಹರಂ ಹಬ್ಬವನ್ನು ಪಾರಂಪರಿಕವಾಗಿ, ವಿಜೃಂಭಣೆಯಿಂದ ಆಚರಿಸುವ ವಾತಾವರಣ ಕಲ್ಪಿಸಲು ಜಿಲ್ಲಾಡಳಿತ ಬದ್ಧವಿದೆ. ಪಿಒಪಿ ಗಣಪತಿ ಪ್ರತಿಷ್ಠಾಪನೆಯನ್ನು ತಡೆಯಲೇಬೇಕಿದೆ. ಮುಜುಗರವಾಗುವ ಮುನ್ನ ಸಂಘದವರೇ ಎಚ್ಚೆತ್ತುಕೊಳ್ಳಬೇಕು ಎಂದರು.

ಬೀದರ್‌ನಲ್ಲಿ ಗಣೇಶ ವಿಸರ್ಜನೆಗೆ ನೀರೂ ಇಲ್ಲ. ನಿಮ್ಮಲ್ಲಿ ನೀರಿನ ವ್ಯವಸ್ಥೆ ಇದ್ದರೂ ಅದರ ಮಹತ್ವ ತಿಳಿದಿಲ್ಲ. ಭಕ್ತಿ, ದೈವತ್ವ, ನಂಬಿಕೆಗಳಿಗೆ ಧಕ್ಕೆ ಬಾರದಂತೆ ಪೂಜೆ ಮಾಡಿ ಪರಿಸರದ ಶುದ್ಧತೆ ಕಾಪಾಡಬೇಕು. ಎಸ್ಪಿ, ಜಿಪಂ ಸಿಇಒ ಹಾಗೂ ತಾವು ಮೂವರೂ ಸೇರಿ ಇರುವಷ್ಟೂ ದಿನ ಜನಪರ, ಜನಸ್ನೇಹಿ ಹಾಗೂ ಜನಾನುರಾಗಿ ಆಡಳಿತ ನೀಡುತ್ತೇವೆ ಎಂದು ಭರವಸೆ ನೀಡಿದರು.

ಪಾಲಿಕೆ ಆರೋಗ್ಯ ಇಲಾಖೆ ಅಧಿಕಾರಿ ಡಾ.ಚಂದ್ರಶೇಖರ್ ಸುಂಕದ್ ಮಾತನಾಡಿ, ಬಡಾವಣೆ ಮತ್ತು ಬಸವನಗರ ಠಾಣೆಗಳಲ್ಲಿ ಏಕಗವಾಕ್ಷಿ ವ್ಯವಸ್ಥೆಗೆ ಕ್ರಮ ವಹಿಸಲಾಗಿದೆ. ಬಾತಿ ಬಳಿ 2 ತಾತ್ಕಾಲಿಕ ತೊಟ್ಟಿಗಳಿದ್ದು ಮಾಗಾನಹಳ್ಳಿ, ಬೂದಿಹಾಳ್‌ನಲ್ಲೂ ಹೆಚ್ಚುವರಿ ತೊಟ್ಟಿ ನಿರ್ಮಿಸಲಾಗುವುದು. 26 ಟ್ರಾೃಕ್ಟರ್‌ಗಳಲ್ಲಿಯೂ ವಿಸರ್ಜನೆಗೆ ವ್ಯವಸ್ಥೆ ಇದೆ ಎಂದರು.

ಬೆಸ್ಕಾಂ ಅಧಿಕಾರಿ ಮಾಲತೇಶ್ ಮಾತನಾಡಿ, ದೀಪಾಲಂಕಾರಕ್ಕಾಗಿ ವಿದ್ಯುತ್ ಮಾರ್ಗಕ್ಕೆ ಹುಕ್ ಹಾಕಿ ಅನಾಹುತಕ್ಕೆ ಅವಕಾಶ ಮಾಡದಿರಿ. ವಿದ್ಯುತ್ ಬಳಕೆ ವಿಚಾರದಲ್ಲಿ ಸಂಸ್ಥೆಗಳು ಎಚ್ಚರವಹಿಸಬೇಕು. ನಗರದಲ್ಲಿ ಯುಜಿ ಕೇಬಲ್ ಅಳವಡಿಕೆಯಿಂದಾಗಿ ಕೆಲ ಸಾಧಕ ಬಾಧಕಗಳಿವೆ. ರಸ್ತೆ ಬದಿ ಗುಂಡಿ ಅಗೆಯುವಾಗ ಬೆಸ್ಕಾಂ ಸಿಬ್ಬಂದಿ ಸಲಹೆ ಪಡೆಯಬೇಕು ಎಂದು ತಿಳಿಸಿದರು.

ಅಗ್ನಿಶಾಮಕ ದಳ ಅಧಿಕಾರಿ ಸಂದೀಪ್, ಉಪ ಪರಿಸರ ಅಧಿಕಾರಿ ಸುರೇಶ್‌ಕುಮಾರ್ ಮಾತನಾಡಿದರು. ಮುಖಂಡರಾದ ಯಾಸೀನ್ ಪೀರ್ ರಜ್ವಿ, ಎಚ್.ಜಿ.ಉಮೇಶ್, ಚನ್ನಬಸವಗೌಡ್ರು, ಎ.ನಾಗರಾಜ್, ಎಸ್.ಟಿ.ಉಮೇಶ್, ಆವರಗೆರೆ ಚಂದ್ರು, ಸತೀಶ್ ಪೂಜಾರಿ, ಹೇಮಣ್ಣ ಅಣ್ಣಾಪುರ, ಫಣಿಯಾಪುರ ಲಿಂಗರಾಜು, ಲಕ್ಷ್ಮಣ್, ರಾಜು ಕೆಲ ಸಲಹೆಗಳನ್ನು ನೀಡಿದರು. ಎಎಸ್ಪಿ ರಾಜೀವ್ ಪ್ರಾಸ್ತಾವಿಕ ಮಾತನಾಡಿದರು. ಸಿಪಿಐ ಉಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಸಿಪಿಐ ನಾಗೇಶ್ ಐತಾಳ್ ವಂದಿಸಿದರು.

ಮನುಷ್ಯರನ್ನು ಬಲಿ ಪಡೆಯುವ ಡಿಜೆ ಬೇಕಾ: ಬಸವ ಕಲ್ಯಾಣದ ಮಣ್ಣಿನ ಮನೆಯೊಂದರಲ್ಲಿ ಪತಿ-ಪತ್ನಿ, ನಾಲ್ವರು ಮಕ್ಕಳು ವಾಸವಿದ್ದರು. ಮಳೆ ಬಂದು ಮನೆ ಗೋಡೆಗಳು ಹಸಿಯಾಗಿದ್ದವು. ಉರುಸು ಮೆರವಣಿಗೆಯ ಡಿಜೆಯ ಬಿರುಸು ಧ್ವನಿಗೆ ಮನೆ ಚಾವಣಿ ಕುಸಿದು ಮನೆಯಲ್ಲಿದ್ದವರೆಲ್ಲರೂ ಮೃತಪಟ್ಟರು. ಬಿರುಸಾದ ಧ್ವನಿವಧರ್ಕದಿಂದಾಗಿ ಅದು ಗೊತ್ತಾಗಲಿಲ್ಲ. ಇಂತಹ ಡಿಜೆ ನಮಗೆ ಬೇಕಾ. ಇದರ ಬದಲು ಪಾರಂಪರಿಕ ಜಾನಪದ ಕಲಾ ತಂಡಗಳನ್ನು ಬಳಸಿ. ಇಲ್ಲಿನ ಡೊಳ್ಳು, ಜಗ್ಗಲಿಗೆ, ಕರಡಿ ಮಜಲು ತಂಡದವರು ವಿದೇಶಕ್ಕೆ ಹೋಗಿ ಬರುತ್ತಾರೆ. ನಮ್ಮ ಕಲಾವಿದರಿಗೆ ಪ್ರೋತ್ಸಾಹ ನೀಡುವುದಕ್ಕೆ ನಿಮ್ಮಿಂದ ಏಕೆ ಆಗ್ತಾ ಇಲ್ಲ ಎಂದು ಡಿಸಿ ಮಹಾಂತೇಶ್ ಬೀಳಗಿ ಪ್ರಶ್ನೀಸಿದರು.

ಮಣ್ಣಿನ ಗಣೇಶನನ್ನು ಕೂರಿಸುವ ಮೂಲಕ ನಮ್ಮ ನೈಸರ್ಗಿಕ ಸಂಪನ್ಮೂಲವನ್ನು ನಾವು ಕಾಪಾಡಬೇಕು. ಗಣೇಶ ವಿಸರ್ಜನಾ ತೊಟ್ಟಿ, ವಿಸರ್ಜನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಅಗತ್ಯ ಬಂದೋಬಸ್ತ್ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟವಾಗುವ ಸುಳ್ಳು ಸುದ್ದಿಗಳ ಬಗ್ಗೆ ಮಾಧ್ಯಮಗಳೂ ಕೂಡ ಎಚ್ಚರವಹಿಸಬೇಕು ಎಂದು ಎಸ್ಪಿ ಹನುಮಂತರಾಯ ತಿಳಿಸಿದರು.

Leave a Reply

Your email address will not be published. Required fields are marked *