ಶೋಭಾಯಾತ್ರೆಗೆ ದೇವನಗರಿ ಸಜ್ಜು

ದಾವಣಗೆರೆ: ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆಯ ಶೋಭಾಯಾತ್ರೆಗೆ ನಗರ ಸಜ್ಜಾಗಿದ್ದು ರಸ್ತೆ, ವೃತ್ತಗಳು ಕೇಸರಿಮಯವಾಗಿವೆ.

ಹಿಂದು ಮಹಾಗಣಪತಿ ಟ್ರಸ್ಟ್‌ನಿಂದ ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 2ನೇ ವರ್ಷ ಶ್ರೀ ಕ್ಷೇತ್ರ ಧರ್ಮಸ್ಥಳ ಮಾದರಿಯ ಮಂಟದಲ್ಲಿ 16 ಅಡಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿದ್ದು, ಸೆ.21ರ ಬೆಳಗ್ಗೆ 9.30ಕ್ಕೆ ಗಣನಾಥನಿಗೆ ಪೂಜೆ ಸಲ್ಲಿಸಿದ ಬಳಿಕ ಮೆರವಣಿಗೆ ಆರಂಭವಾಗಲಿದೆ.

ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿನ ವೃತ್ತ, ರಸ್ತೆಗಳಲ್ಲಿ ಕೇಸರಿ ಬಟ್ಟೆ ಬಳಸಲಾಗಿದೆ. ಬಸವೇಶ್ವರ, ಶಿವಾಜಿ ಮಹಾರಾಜ್, ಅಂಬೇಡ್ಕರ್, ಭೋವಿ ಸಮಾಜದ ಸಿದ್ದರಾಮೇಶ್ವರ ಸೇರಿ ವಿವಿಧ ಸಮುದಾಯಗಳ ಮಹಾತ್ಮರ ಭಾವಚಿತ್ರಗಳನ್ನು ರಸ್ತೆ ವಿಭಜಕದಲ್ಲಿ ಅಳವಡಿಸಿದ್ದು, ಸಾಮರಸ್ಯದ ಭಾವನೆ ಮೂಡಿಸುವಂತಿದೆ.

ಮೆರವಣಿಗೆಯು ಅಂದಾಜು 8 ಕಿ.ಮೀ. ಸಾಗಲಿದ್ದು, ಶುಭ ಕೋರುವ ಫ್ಲೆಕ್ಸ್, ಬ್ಯಾನರ್, ಬಂಟಿಂಗ್, ಕಟೌಟ್‌ಗಳು ರಾರಾಜಿಸುತ್ತಿವೆ. ಟ್ರಸ್ಟ್‌ನ 15 ಸದಸ್ಯರು ಸೇರಿ 40ಕ್ಕೂ ಅಧಿಕ ಸ್ವಯಂ ಸೇವಕರು ಮೂರು ದಿನಗಳಿಂದ ಸಿದ್ಧತೆ ಮಾಡಿಕೊಂಡಿದ್ದಾರೆ.

ಹಿಂದು ಮಹಾಗಣಪತಿ ಮೂರ್ತಿ ವಿಸರ್ಜನೆ ಶೋಭಾಯಾತ್ರೆಗೆ ಗಣ್ಯರು ಚಾಲನೆ ನೀಡಲಿದ್ದಾರೆ. ಶೋಭಾಯಾತ್ರೆ ಹಿನ್ನೆಲೆಯಲ್ಲಿ ಶುಕ್ರವಾರ ಪೊಲೀಸರು ನಗರದ ಪ್ರಮುಖ ರಸ್ತೆಗಳಲ್ಲಿ ಪಥಸಂಚಲನ ನಡೆಸಿದರು.

ಐದು ಡಿಜೆ, ಮಹಿಳೆಯರಿಗೆ ಪ್ರತ್ಯೇಕ: ಶಿವಮೊಗ್ಗ, ಹಾವೇರಿ, ಬಳ್ಳಾರಿ ಭಾಗದಿಂದ ಜನರು ಬರುವ ನಿರೀಕ್ಷೆ ಇದೆ. 5 ಡಿಜೆಗಳ ವ್ಯವಸ್ಥೆ ಮಾಡಲಾಗಿದೆ. ಮಹಿಳೆಯರಿಗೆ ಪ್ರತ್ಯೇಕ ಡಿಜೆ ನೀಡಿದ್ದು, ಇದರ ಭದ್ರತೆಗೆ ಮಹಿಳಾ ಪೊಲೀಸ್ ವ್ಯವಸ್ಥೆ ಮಾಡಿಕೊಡುವಂತೆ ಇಲಾಖೆಗೆ ಮನವಿ ಮಾಡಲಾಗಿದೆ.

ಬೆಳಗ್ಗೆ ತಿಂಡಿ, ಮಧ್ಯಾಹ್ನ ಊಟ: ಮೆರವಣಿಗೆ ಮಾರ್ಗದಲ್ಲಿ ಊಟ, ಉಪಹಾರ ವ್ಯವಸ್ಥೆಯಾಗಿದೆ. ಹೈಸ್ಕೂಲ್ ಮೈದಾನ, ಚೇತನ ಹೋಟೆಲ್, ಕೆಇಬಿ, ಜಯದೇವ ವೃತ್ತ, ಪಾಲಿಕೆ ಮುಂಭಾಗ ಸೇರಿ ವಿವಿಧೆಡೆ ಅನ್ನಸಂತರ್ಪಣೆ ನಡೆಯಲಿದೆ.

ಪಾರ್ಕಿಂಗ್ ವ್ಯವಸ್ಥೆ: ಹೈಸ್ಕೂಲ್ ಮೈದಾನದ ಒಳಗೆ ಇರುವ ತಾತ್ಕಾಲಿಕ ಬಸ್ ನಿಲ್ದಾಣದ ಒಳಭಾಗದಲ್ಲಿ ಕಾರುಗಳು ಮತ್ತು ದ್ವಿಚಕ್ರ ವಾಹನಗಳನ್ನು ನಿಲ್ಲಿಸಲು ವ್ಯವಸ್ಥೆ ಮಾಡಲಾಗಿದೆ. ಹಳೇ ವಾಣಿ ಹೊಂಡಾ ಶೋರೂಂ ಬಳಿ ಮತ್ತು ವಿನೋಬನಗರ 1ನೇ ಮೇನ್ ರಸ್ತೆಯ ನರಹರಿಶೇಟ್ ಕಲ್ಯಾಣ ಮಂಟಪದ ಬಳಿಯ ಖಾಲಿ ಜಾಗದಲ್ಲಿ ಭಾರಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯಾಗಿದೆ.

Leave a Reply

Your email address will not be published. Required fields are marked *