ದಾವಣಗೆರೆ: ಹಿಂದು ಮಹಾ ಗಣಪತಿ ಬೃಹತ್ ಶೋಭಾಯಾತ್ರೆ ಸಹಸ್ರಾರು ಭಕ್ತರ ಹರ್ಷೋದ್ಗಾರದ ನಡುವೆ ಶನಿವಾರ ಸಂಭ್ರಮದಿಂದ ನೆರವೇರಿತು.
ಕಲಾ ತಂಡಗಳು, ಸ್ತಬ್ಧಚಿತ್ರಗಳು, ಮಹನೀಯರ ಮೂರ್ತಿಗಳು ಮೆರವಣಿಗೆ ಕಳೆಗಟ್ಟುವಂತೆ ಮಾಡಿದ್ದವು. ಜತೆಗೆ ಹಾಡು, ಕುಣಿತ, ಶಿಳ್ಳೆ, ಕೇಕೆ, ಪಟಾಕಿಗಳ ಸದ್ದಿನ ನಡುವೆ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು. ಡಿಜೆಗಳಿಂದ ಹೊಮ್ಮುತ್ತಿದ್ದ ಅಬ್ಬರದ ಸಂಗೀತಕ್ಕೆ ಯುವಕ-ಯುವತಿಯರು ಹುಚ್ಚೆದ್ದು ಕುಣಿದರೆ ರಸ್ತೆಗಳೇ ನರ್ತಿಸುತ್ತಿರುವಂತೆ ಭಾಸವಾಯಿತು.
ಇಡೀ ನಗರ ಕೇಸರಿ ಬಣ್ಣದಲ್ಲಿ ಮಿಂದೆದ್ದಿತು. ಭಕ್ತರು ಬಳಸಿದ ಧ್ವಜಗಳು, ಶಾಲು, ಟೋಪಿ, ರುಮಾಲುಗಳು, ಯುವಕರು ಧರಿಸಿದ್ದ ಟಿ-ಶರ್ಟ್ ಎಲ್ಲವೂ ಕೇಸರಿಮಯವಾಗಿದ್ದವು. ಕೆಲವರು ಹಣೆಗೆ ತಿಲಕವಿಟ್ಟು ಮುಖಕ್ಕೆ ಬಣ್ಣ ಬಳಿದುಕೊಂಡಿದ್ದರು. ಶ್ರೀಶೈಲ ಮಠದ ಆನೆ ಗಜ ಗಾಂಭೀರ್ಯ ನಡೆ ಮೆರವಣಿಗೆಯ ಆಕರ್ಷಣೆಗಳಲ್ಲಿ ಒಂದಾಗಿತ್ತು.
ಛತ್ರಪತಿ ಶಿವಾಜಿ, ಬುದ್ಧ, ಬಸವ, ಕನಕದಾಸರು, ಶಿವನ ಮೂರ್ತಿಗಳು ಮೆರವಣಿಗೆಯಲ್ಲಿ ಗಮನ ಸೆಳೆದವು. ಚಂಡೆ ವಾದ್ಯ ತಂಡದಲ್ಲಿ ಪುರುಷ ಹಾಗೂ ಮಹಿಳಾ ಕಲಾವಿದರು ಲಯಬದ್ಧವಾಗಿ ಹೆಜ್ಜೆ ಹಾಕಿದರು. ಡೋಲಕ್ ಮುಂತಾದ ವಾದ್ಯಗಳ ಸದ್ದು ಆವರಿಸಿತ್ತು.
ಹೈಸ್ಕೂಲ್ ಮೈದಾನದಿಂದ ಆರಂಭವಾದ ಶೋಭಾಯಾತ್ರೆ ಎವಿಕೆ ಕಾಲೇಜು ರಸ್ತೆ ಪ್ರವೇಶಿಸುತ್ತಿದ್ದಂತೇ ಇಡೀ ಬೀದಿ ತುಂಬಿ ತುಳುಕಿತು. ರಸ್ತೆಯ ಇಕ್ಕೆಲಗಳಲ್ಲಿ ಕಟ್ಟಡಗಳ ಮೇಲೆ ನಿಂತು ವೀಕ್ಷಿಸುತ್ತಿದ್ದ ಜನರು ಮೆರವಣಿಗೆ ಬರುತ್ತಿದ್ದಂತೆ ಪುಷ್ಪವೃಷ್ಟಿ ಮಾಡಿದರು. ಹದಡಿ ರಸ್ತೆಯಲ್ಲಿ ಓಂ ಆಕೃತಿಯ ರಂಗೋಲಿ ಗಮನ ಸೆಳೆಯಿತು.
ಚಾಲನೆ ನೀಡಿದ ಶಾಸಕ ಎಸ್ಎಆರ್: ಹೈಸ್ಕೂಲ್ ಮೈದಾನದಲ್ಲಿ ಧರ್ಮಸ್ಥಳ ದೇಗುಲದ ಮಾದರಿಯ ಮಂಟಪದಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ಮೂರ್ತಿಗೆ ಪೂಜೆ ಸಲ್ಲಿಸುವ ಮೂಲಕ ಶಾಸಕ ಎಸ್.ಎ. ರವೀಂದ್ರನಾಥ್ ಶೋಭಾಯಾತ್ರೆಗೆ ಚಾಲನೆ ನೀಡಿದರು. ಗಣಪತಿ ಮೂರ್ತಿಗೆ ಬೃಹತ್ ಹೂವಿನ ಹಾರದಿಂದ ಅಲಂಕಾರ ಮಾಡಲಾಗಿತ್ತು.
ಮಾಜಿ ಎಂಎಲ್ಸಿ ಡಾ.ಎ.ಎಚ್.ಶಿವಯೋಗಿಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಯಶವಂತರಾವ್ ಜಾದವ್, ಎಸ್ಪಿ ಹನುಮಂತರಾಯ, ಮುಖಂಡರಾದ ಜೊಳ್ಳಿ ಗುರು, ಡಿ.ಕೆ.ಕುಮಾರ್, ಶಿವರಾಜ ಪಾಟೀಲ್ ಇದ್ದರು.
ಮುಖಂಡರಾದ ಕೆ.ಬಿ.ಶಂಕರ ನಾರಾಯಣ, ಎಸ್.ಟಿ.ವೀರೇಶ್, ಶಿವಗಂಗಾ ಬಸವರಾಜ್, ಶ್ರೀನಿವಾಸ್, ಮಾಜಿ ಶಾಸಕ ಬಿ.ಪಿ.ಹರೀಶ್ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.
ಡಿಜೆ ಹಾಡಿಗೆ ಹೆಜ್ಜೆ ಹಾಕಿದ ರೇಣುಕಾಚಾರ್ಯ: ದಾವಣಗೆರೆಯಲ್ಲಿ ಶನಿವಾರ ನಡೆದ ಹಿಂದು ಮಹಾ ಗಣಪತಿ ಬೃಹತ್ ಶೋಭಾಯಾತ್ರೆಯಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದರು.