ಗಾಜಿನ ಮನೆಯಲ್ಲಿ ಇಂದಿನಿಂದ ಹೂಗಳ ಹಬ್ಬ

ದಾವಣಗೆರೆ: ಗಾಜಿನ ಮನೆಯಲ್ಲಿ ಇಂದಿನಿಂದ ಹೂವುಗಳ ಹಬ್ಬ! ಐದು ದಿನ ನಡೆಯಲಿರುವ ಫಲಪುಷ್ಪ ಪ್ರದರ್ಶನ ಹೂವಿನ ಲೋಕವನ್ನು ಅನಾವರಣ ಮಾಡಲಿದೆ.

ಪುಷ್ಪದಲ್ಲರಳಿದ ನಾನಾ ಮಾದರಿಗಳು, ಸಿರಿಧಾನ್ಯದಲ್ಲಿ ಮೂಡಿದ ಕಲಾಕೃತಿಗಳು, ಅಲಂಕಾರಿಕ ಹಾಗೂ ಅಪರೂಪದ ಸಸ್ಯರಾಶಿ ಮನಸ್ಸಿಗೆ ಮುದ ನೀಡಲಿವೆ.

ಇದು ತೋಟಗಾರಿಕೆ ಇಲಾಖೆ ಆಯೋಜಿಸಿದ ಫಲ-ಪುಷ್ಪ ಪ್ರದರ್ಶನದ ವಿವರಣೆ.ಶುಕ್ರವಾರ ಆರಂಭವಾಗಲಿರುವ ಈ ಫ್ಲವರ್ ಶೋವನ್ನು ಜಿಲ್ಲೆ, ಹೊರ ಜಿಲ್ಲೆಗಳ ಜನರು ಆ.27ರ ವರೆಗೆ ಕಣ್ತುಂಬಿಕೊಳ್ಳಬಹುದು.

ಜಿಪಂ ಪ್ರಭಾರ ಉಪ ಕಾರ್ಯದರ್ಶಿ ಜಗದೀಶ್, ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನರ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಪ್ರದರ್ಶನದ ವಿಶೇಷಗಳ ಬಗ್ಗೆ ಮಾಹಿತಿ ನೀಡಿದರು.

ಆರ್ಕಿಡ್ಸ್, ಲಿಲಿಯಂ, ಕಾರ್ನೇಷನ್ ಮತ್ತು ಗುಲಾಬಿ ಹೂಗಳಿಂದ ಅಲಂಕೃತವಾದ ಎರಡು ಬೈಸಿಕಲ್, 6-4 ಅಡಿ ವಿಸ್ತೀರ್ಣದ ಗುಲಾಬಿ-ಸೇವಂತಿಗೆ ಮಿಶ್ರಣದ ಅಣಬೆ ಮಾದರಿ, 12 ಸಾವಿರ ಬಿಳಿ, ಹಳದಿ, ಗುಲಾಬಿ ಬಣ್ಣದ ಸೇವಂತಿಗೆಯಿಂದ ಅಲಂಕೃತವಾದ 10 ಅಡಿ ಎತ್ತರದ ಡಾಲ್ಫಿನ್, ಸೇವಂತಿಗೆಯಲ್ಲಿ ಸಿಂಗಾರಗೊಂಡ ಏಳಡಿ ಎತ್ತರದ ಮಿಕ್ಕಿ ಮೌಸ್ ಕಲಾಕೃತಿಗಳು ಚಿಣ್ಣರ ಹೃದಯಕ್ಕೆ ಲಗ್ಗೆ ಇಡಲಿವೆ. ಅಗರವಾಲ್ ಮಾಲೀಕತ್ವದ ಬೆಂಗಳೂರಿನ ಸೆಲೆನು ಫ್ಲವರ್ ಕಂಪನಿ ಕಲಾಕೃತಿಗಳನ್ನು ಸಿದ್ಧಪಡಿಸಿದೆ.

ಗುಲಾಬಿ-ಸೇವಂತಿಯಲ್ಲಿ ಅರಳಿದ, 8-6 ಅಡಿ ಅಳತೆ ಹೂವಿನ ಫೋಟೋ ಫ್ರೇಮ್ ಸೆಲ್ಫೀ ಕ್ರೇಜಿನ ಯುವಕರನ್ನು ಸೆಳೆಯಲಿದೆ. ಆರ್ಕಿಡ್, ಆಂಥೂರಿಯಂ, ಕಾರ್ನೇಷನ್, ಲಿಲಿಯಂ, ಬರ್ಡ್ ಆಫ್ ಪ್ಯಾರಾಡೈಸ್, ಜಿಂಜಿರ್ ಲಿಲ್ಲಿ, ಹಸಿರು ಎಲೆ ಬಳಸಿ ಇಕೆಬಾಲ ಶೈಲಿಯ 50 ವಿವಿಧ ಹೂ ಜೋಡಣೆಗಳು ಇಲ್ಲಿರಲಿವೆ.

ಸಿರಿಧಾನ್ಯದಲ್ಲಿ ಮೂಡಿರುವ ಬುದ್ಧ, ಸ್ವಾಮಿ ವಿವೇಕಾನಂದ, ಅಂಬೇಡ್ಕರ್ ಹಾಗೂ ೋಟಗಾರಿಕೆ ಪಿತಾಮಹ ಡಾ.ಎಂ. ಎಚ್.ಮರಿಗೌಡ ಅವರ ಭಾವಚಿತ್ರಗಳು ಗಮನ ಸೆಳೆಯಲಿವೆ.

ಕುಬ್ಜ ತಳಿ ಹಾಗೂ ಪಾಪಸುಕಳ್ಳಿ ಗಿಡಗಳು, ಕುಂಡದಲ್ಲಿ ಬೆಳೆಸಿದ ಸಾಲ್ವಿಯಾ, ಮ್ಯಾರಿಗೋಲ್ಡ್, ಕಲರ್ ಪೆಟ್ಯುನಿಯಾ, ಸೆಲ್ಯುಷಿಯಾ, ಡೆಡ್ಯುನಿಯಾ ಮೊದಲಾದ ಹೂ ಗಿಡಗಳು ಇಲ್ಲಿವೆ. ಅಪರೂಪದ ಪೀಚ್, ಪಿಯರ್, ಆಸ್ಟ್ರೇಲಿಯನ್ ಮೊದಲಾದ ಹಣ್ಣು-ತರಕಾರಿ ಬೆಳೆಗಳ ಪ್ರದರ್ಶನವಿರಲಿದೆ.

ತೋಟಗಾರಿಕೆ ಕ್ಷೇತ್ರದಲ್ಲಿ ಕಸಿ ಮಾಡಿದ ಗಿಡಗಳನ್ನು ಕಡಿಮೆ ದರದಲ್ಲಿ ಒದಗಿಸಲು ಸಸ್ಯ ಸಂತೆ ಆಯೋಜಿಸಲಾಗುವುದು. ತಿಂಡಿ ತಿನಿಸುಗಳಿಗಾಗಿ ಒಟ್ಟು 20 ಮಳಿಗೆ ತೆರೆಯಲಾಗಿದೆ. ನಿತ್ಯ ಸಂಜೆ ಕಲಾವಿದರು, ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಪ್ರದರ್ಶನ ಹಿನ್ನೆಲೆಯಲ್ಲಿ ಗಂಟೆಗೊಮ್ಮೆ ಬಸ್ ಸಂಚಾರ ಇರಲಿದೆ. ಮಕ್ಕಳಿಗೆ 10 ರೂ., ಹಿರಿಯರಿಗೆ 20 ರೂ. ಪ್ರವೇಶದರವಿದೆ ಎಂದು ಮಾಹಿತಿ ನೀಡಿದರು. ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶಶಿಕಲಾ ಇದ್ದರು.

ಟವರ್ ನಿರ್ಮಾಣಕ್ಕೆ 80 ಸಾವಿರ ಪುಷ್ಪಗಳ ಬಳಕೆ: ಫ್ರಾನ್ಸ್ ದೇಶದ ಐಫೆಲ್ ಟವರ್ ಪ್ರತಿರೂಪ ಇಲ್ಲಿನ ವಿಶೇಷಾಕರ್ಷಣೆ. 30 ಅಡಿ ಎತ್ತರ, 23 ಅಡಿ ಅಗಲ ವಿಸ್ತೀರ್ಣದಲ್ಲಿ ಕೆಂಪು, ಬಿಳಿ, ಹಳದಿ ರೋಜಾ ಹೂವುಗಳ 80 ಸಾವಿರ ಪುಷ್ಪಗಳಿಂದ ತಲೆ ಎತ್ತಿ ನಿಂತಿದೆ. 12-15 ಅಡಿ ಸುತ್ತಳತೆಯಲ್ಲಿ, 20 ಸಾವಿರ ಸೇವಂತಿಗೆ ಹೂಗಳಿಂದ ನಿರ್ಮಿತವಾಗುತ್ತಿರುವ ಹೃದಯಾಕಾರದ ಹೂವಿನ ಕಲಾಕೃತಿ ಸಹೃದಯರ ಮನ ಸೂರೆಗೊಳ್ಳಲಿದೆ.

ನೆರೆ ಸಂತ್ರಸ್ತರಿಗೆ ಪ್ರದರ್ಶನದ ಹಣ: ಈ ಬಾರಿ 30 ಸಾವಿರ ಜನರು ಪ್ರದರ್ಶನ ವೀಕ್ಷಿಸುವ ನಿರೀಕ್ಷೆ ಇದೆ. ಇದರಿಂದ 6ರಿಂದ 7 ಲಕ್ಷ ರೂ. ಆದಾಯ ಬರುವ ನಿರೀಕ್ಷೆ ಇದೆ. ಹೆಚ್ಚಿನ ಆದಾಯ ಬಂದಲ್ಲಿ ಕರ್ನಾಟಕದ ನೆರೆ ಸಂತ್ರಸ್ತರ ನೆರವಿಗಾಗಿ ಸಿಎಂ ಪರಿಹಾರ ನಿಧಿಗೆ ಅರ್ಪಿಸುವ ಬಯಕೆ ಇದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನರ್ ತಿಳಿಸಿದ್ದಾರೆ.

ಅಂತಿಮವಾಗದ ಹೆಸರು: ಗಾಜಿನಮನೆಗೆ ಹೆಸರಿಡುವ ಬಗ್ಗೆ ಅಂತಿಮ ನಿರ್ಧಾರವಾಗಿಲ್ಲ. ಈಗಾಗಲೆ ಜೆ.ಎಚ್.ಪಟೇಲ್, ಎಸ್ಸೆಸ್ ಹಾಗೂ ಜಿ.ಎಂ. ಮಲ್ಲಿಕಾರ್ಜುನಪ್ಪ ಅವರ ಹೆಸರನ್ನು ಪ್ರಸ್ತಾಪಿಸಿ ಜಿಪಂ ಸರ್ಕಾರಕ್ಕೆ ಮನವಿ ಸಲ್ಲಿಸಿದೆ. ಸಿಬ್ಬಂದಿ ವೇತನ ಹಾಗೂ ನಿರ್ವಹಣೆಗೆ ಹೆಚ್ಚು ವೆಚ್ಚವಾಗುತ್ತಿದೆ. ಹೀಗಾಗಿ ಗಾಜಿನಮನೆ ಪ್ರವೇಶಕ್ಕೆ ಶುಲ್ಕ ಸಂಗ್ರಹ ನಿಗದಿ ಅನಿವಾರ್ಯವಾಗಿದೆ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಡಿಡಿ.

Leave a Reply

Your email address will not be published. Required fields are marked *