ಕಾವ್ಯ ಸೃಷ್ಟಿಯ ಕ್ರಿಯೆ ಸುಲಭವಲ್ಲ

ದಾವಣಗೆರೆ: ಕಾವ್ಯ ಸೃಷ್ಟಿಯ ಕ್ರಿಯೆ ಸುಲಭವಲ್ಲ, ಅದರ ಹಿಂದೆ ಸಾಕಷ್ಟು ಪರಿಶ್ರಮ ಇರುತ್ತದೆ ಎಂದು ಜಾನಪದ ತಜ್ಞ ಡಾ.ಎಂ.ಜಿ.ಈಶ್ವರಪ್ಪ ಹೇಳಿದರು.

ನಗರದ ಸೋಮೇಶ್ವರ ವಿದ್ಯಾಲಯದಲ್ಲಿ ಶನಿವಾರ ಆಯೋಜಿಸಿದ್ದ, ಡಿವೈಎಸ್ಪಿ ಡಾ.ಬಿ.ದೇವರಾಜ ಅವರ ‘ಅಮೃತದ ಒರತೆ’ ಕವನ ಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಾವ್ಯವು ಪ್ರಸವ ವೇದನೆಯಿಂದ ಹುಟ್ಟುತ್ತದೆ. ಕವಿಯಲ್ಲಿ ಮೂಲತಃ ಪ್ರತಿಭೆ ಇರಬೇಕು. ಜತೆಗೆ ಕನ್ನಡ ಸಾಹಿತ್ಯದ ಓದು ಮುಖ್ಯವಾಗುತ್ತದೆ. ಕವನಗಳ ಮೂಲಕ ಜನರಿಗೆ ಸಮ್ಮೋಹನಗೊಳಿಸಬೇಕು ಎಂದು ತಿಳಿಸಿದರು.

ಕಾವ್ಯ ಸೃಷ್ಟಿಯಂತೆಯೆ ಸಹೃದಯರು ಅದನ್ನು ಹೇಗೆ ಸ್ವೀಕಾರ ಮಾಡುತ್ತಾರೆ ಎಂಬುದೂ ಅಷ್ಟೇ ಮುಖ್ಯ. ಕವನವು ಹೃದಯದಿಂದ ಬರುವಂಥದು ಎಂದು ತಿಳಿಸಿದರು.

ಅಪರಾಧಗಳನ್ನು ನಿಯಂತ್ರಿಸುವ ಪೊಲೀಸರು ಕಠಿಣ ಹೃದಯಿಗಳಾಗಿರಬೇಕಾದ ಅನಿವಾರ್ಯತೆ ಇದೆ. ಆದರೆ ಕಾವ್ಯಕ್ಕೆ ಹೃದಯವನ್ನು ಪರಿವರ್ತಿಸುವ ಶಕ್ತಿಯಿದೆ. ಡಾ.ದೇವರಾಜ್ ಅವರ ಕವಿತೆಗಳಲ್ಲಿ ವೈವಿಧ್ಯತೆಯಿದೆ. ಅವರ ಅಮೃತದ ಒರತೆಯು ಮುಂಬರುವ ದಿನಗಳಲ್ಲಿ ಹಾಲಿನ ಹಳ್ಳವಾಗಲಿ ಎಂದು ಆಶಿಸಿದರು.

ಎಸ್ಪಿ ಹನುಮಂತರಾಯ ಮಾತನಾಡಿ, ಇಲಾಖೆಯಲ್ಲಿ ಹಲವಾರು ಮಂದಿ ಪ್ರತಿಭಾವಂತ ಲೇಖಕರಿದ್ದಾರೆ. ಡಾ. ದೇವರಾಜ್ ಅವರ ಪ್ರತಿಭೆ ಈ ಕೃತಿಯ ಮೂಲಕ ಅನಾವರಣಗೊಂಡಿದೆ. ಇದು ಇತರ ಸಿಬ್ಬಂದಿಗೆ ಪ್ರೇರಣೆಯಾಗಲಿ ಎಂದು ತಿಳಿಸಿದರು.

ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್. ಮಲ್ಲೇಶ್ ಮಾತನಾಡಿ, ಪೊಲೀಸ್ ಇಲಾಖೆಗೆ ಕವಿ ಮನಸ್ಸು, ಸಹೃದಯತೆ ಬೇಕಿದೆ. ದೇವರಾಜ್ ಅವರು ಕವಿತೆ ಬರೆಯುವ ಮೂಲಕ ಅದನ್ನು ತೋರಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಕವಿ ಡಾ.ಆನಂದ ಋಗ್ವೇದಿ ಕೃತಿಯ ಕುರಿತು ಮಾತನಾಡಿ, ಮನುಷ್ಯ ಪ್ರೇಮದ ಕವಿತೆಗಳು ಈ ಸಂಕಲನದಲ್ಲಿವೆ. ಕೆಲ ಕವಿತೆಗಳಲ್ಲಿ ಪದ ಚಮತ್ಕಾರವಿದೆ. ಸಮಾಜದ ಬಗ್ಗೆ ಪ್ರಾಮಾಣಿಕ ಅನಿಸಿಕೆಗಳಿವೆ. ವಿರಹ, ವಿಷಾದ ಭಾವನೆಗಳಿವೆ ಎಂದು ಹೇಳಿದರು.

ಕವಿ ಡಾ.ದೇವರಾಜ್ ಮಾತನಾಡಿ, ಗ್ರಾಮಾಂತರ ಪ್ರದೇಶದಿಂದ ಬಂದು ಬಡತನ, ಅವಮಾನ ಸೇರಿ ಜೀವನಾನುಭವ ಪಡೆದು ಸಾಹಿತ್ಯದ ಸೆಳೆತಕ್ಕೆ ಒಳಗಾಗಿದ್ದನ್ನು ಭಾವುಕರಾಗಿ ವಿವರಿಸಿದರು.

ಮಾಜಿ ಎಂಎಲ್ಸಿ ಡಾ.ಎ.ಎಚ್.ಶಿವಯೋಗಿಸ್ವಾಮಿ ಮಾತನಾಡಿ, ಪೊಲೀಸ್ ಇಲಾಖೆಯ ಅಧಿಕಾರಿಯೊಬ್ಬರು ಹೃದಯದ ಭಾಷೆಗೆ ತೆರೆದುಕೊಂಡು ಕವಿತೆ ರಚಿಸುತ್ತಿರುವುದು ಸ್ವಾಗತಾರ್ಹ ಎಂದರು.

ಉಡುಪಿಯ ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ಕೃತಿ ಬಿಡುಗಡೆ ಮಾಡಿದರು. ಸೋಮೇಶ್ವರ ವಿದ್ಯಾಲಯದ ಗೌರವ ಕಾರ್ಯದರ್ಶಿ ಕೆ.ಎಂ.ಸುರೇಶ್, ಭದ್ರಾ ನಾಯ್ಕ ಇದ್ದರು. ಸಹ ಶಿಕ್ಷಕಿ ಶಿಲ್ಪಾ ಸ್ವಾಗತಿಸಿದರು. ಪಾಂಡು ನಾಯ್ಕ ಪ್ರಾರ್ಥಿಸಿದರು. ದೇವರಾಜ್ ಸಂಗೇನಹಳ್ಳಿ ವಂದಿಸಿದರು. ಕನ್ನಡ ಪ್ರಾಧ್ಯಾಪಕ ಸತೀಶ್ ಪಾಟೀಲ್ ನಿರೂಪಿಸಿದರು.

ಪೊಲೀಸರೂ ಭಾವನ ಜೀವಿಗಳು: ಪೊಲೀಸರನ್ನು ಸಮಾಜ ನೋಡುವ ರೀತಿಯೇ ಬೇರೆ. ಆದರೆ, ಅವರಲ್ಲೂ ಭಾವನೆಗಳಿರುತ್ತವೆ ಎಂಬುದಕ್ಕೆ ಡಾ.ದೇವರಾಜ್ ಉದಾಹರಣೆಯಾಗಿದ್ದಾರೆ ಉಡುಪಿಯ ಕರಾವಳಿ ಕಾವಲು ಪಡೆಯ ಎಸ್ಪಿ ಆರ್.ಚೇತನ್ ಎಂದರು.

ಇವರ ಕವಿತೆಗಳಲ್ಲಿ ಪ್ರೀತಿ, ಪ್ರೇಮ, ದೇಶಾಭಿಮಾನ, ಪ್ರಕೃತಿ, ತಾಯಿ ಹೀಗೆ ಹಲವು ವಿಷಯಗಳನ್ನು ಕುರಿತು ಬರೆದಿದ್ದಾರೆ. ಓದುಗರಿಗೆ ಸಮಾಧಾನ ನೀಡಬಲ್ಲ ಸಂಕಲನ ಇದಾಗಿದೆ. ಪೊಲೀಸ್ ಇಲಾಖೆಯಲ್ಲೂ ಸಾಹಿತ್ಯದ ಒಲವು ಇರುವ ಸಿಬ್ಬಂದಿಗಳಿದ್ದಾರೆ, ಅವರಿಗೆ ಈ ಕಾರ್ಯಕ್ರಮ ಪ್ರೇರಣೆಯಾಗಲಿ ಎಂದು ಆಶಯ ವ್ಯಕ್ತಪಡಿದರು.

Leave a Reply

Your email address will not be published. Required fields are marked *