ಐಎಎಸ್-ಐಪಿಎಸ್ ತರಬೇತಿ ಕೇಂದ್ರ

ದಾವಣಗೆರೆ: ಉಪ್ಪಾರ ಸಮಾಜದ ವಿದ್ಯಾರ್ಥಿಗಳಿಗಾಗಿ ಐಎಎಸ್, ಐಪಿಎಸ್ ತರಬೇತಿ ಕೇಂದ್ರ ತೆರೆದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆಗೊಳಿಸುವ ಚಿಂತನೆ ಇದೆ ಎಂದು ಹೊಸದುರ್ಗ ಭಗೀರಥ ಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೇಳಿದರು.

ತಾಲೂಕು ಉಪ್ಪಾರ ವಿದ್ಯಾರ್ಥಿ ನಿಲಯದಲ್ಲಿ ಭಾನುವಾರ, 30 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್ಥಿಕ ಸಂಕಷ್ಟದಲ್ಲಿರುವ ಸಮಾಜದ ಮಕ್ಕಳಿಗೆ ನೆರವು ಕಲ್ಪಿಸುವ ಚಿಂತನೆ ಇದೆ. ಬೆಂಗಳೂರಿನಲ್ಲಿ ಉದ್ದೇಶಿತ ಕಲ್ಯಾಣಮಂಟಪ ನಿರ್ಮಾಣದ ಬಳಿಕ ಅದರ ಆದಾಯದಿಂದ ಈ ಎಲ್ಲ ವ್ಯವಸ್ಥೆ ಮಾಡಲಾಗುವುದು ಎಂದರು.

ಸಮಾಜದ ಹೆಣ್ಣುಮಕ್ಕಳಿಗೂ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿ ಅವರನ್ನು ಉನ್ನತ ವ್ಯಾಸಂಗಕ್ಕೆ ಪ್ರೋತ್ಸಾಹಿಸಲಾಗುವುದು. ಸಮಾಜದ ಮಕ್ಕಳಿಗೆ ಧಾರವಾಡದಲ್ಲಿ ಕ್ಲಾಸಿಕ್ ಸಂಸ್ಥೆ ಸ್ಪರ್ಧಾತ್ಮಕ ಪರೀಕ್ಷೆಗೆ ರಿಯಾಯ್ತಿ ದರದಲ್ಲಿ ತರಬೇತಿ ನೀಡುತ್ತಿದೆ. ಇದನ್ನು ವಿವಿಧ ಜಿಲ್ಲೆಗಳಲ್ಲೂ ವ್ಯವಸ್ಥೆ ಮಾಡುವಂತೆ ತಿಳಿಸಲಾಗಿದೆ ಎಂದರು.

ಶ್ರೀಮಠದಿಂದ ಲೇಪಾಕ್ಷಿ ಸ್ವಾಮೀಜಿಗಳ ಸ್ಮರಣೋತ್ಸವ ಭಾಗವಾಗಿ ವರ್ಷಕ್ಕೆ 12 ಮಾಸಿಕ ಕಾರ್ಯಕ್ರಮ ನಡೆಸಿ ಜಿಲ್ಲಾವಾರು ಸಮಸ್ಯೆಗಳ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಧಾರ್ಮಿಕ, ಆಧ್ಯಾತ್ಮಿಕ ವಿಚಾರ, ಸಮಾಜದ ಅಧಿಕಾರಿಗಳು, ರಾಜಕಾರಣಿಗಳು ಪ್ರತಿಭಾನ್ವಿತರನ್ನು ಗುರುತಿಸಲಾಗುತ್ತಿದೆ. ಸಾಂಸ್ಕೃತಿಕ ವೇದಿಕೆಯನ್ನೂ ರಚಿಸಲಾಗಿದೆ ಎಂದು ಹೇಳಿದರು.

ಮುಖಂಡರು ತಮ್ಮ ಬೆಳವಣಿಗೆ ಜತೆಗೆ ಸಮಾಜವನ್ನೂ ಬೆಳೆಸಬೇಕು. ರಾಜಕಾರಣಿಗಳು ನಮ್ಮ ಸಮುದಾಯದವನ್ನು ಗಂಭೀರವಾಗಿ ಪರಿಗಣಿಸದಿರುವುದು ನೋವಿನ ವಿಚಾರ. ಜನಪ್ರತಿನಿಧಿಗಳು ಸಮಾಜವನ್ನು ಕಡೆಗಣಿಸಬಾರದು. ಅನುದಾನ ನೀಡುವುದಲ್ಲದೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ನಿಮ್ಮ ಜತೆಗಿದ್ದೇವೆ ಎಂಬುದನ್ನು ತೋರ್ಪಡಿಸಬೇಕು ಎಂದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಂಸದ ಜಿ.ಎಂ.ಸಿದ್ದೇಶ್ವರ, ಉಪ್ಪಾರ ಸಮಾಜ ದೇಶದಲ್ಲಿಯೇ ದೊಡ್ಡ ಸಮುದಾಯ. ಸಮಾಜದ ಮಕ್ಕಳು ಶ್ರೀಗಳ ಮಾರ್ಗದರ್ಶನ ಪಡೆದಲ್ಲಿ ವಿದ್ಯಾವಂತರಾಗುವ ಜತೆಗೆ ಉನ್ನತ ಹಂತಕ್ಕೆ ತಲುಪಲಿದ್ದಾರೆ ಎಂದರು.

ಯುವಕರು-ಹಿರಿಯರು ಒಗ್ಗೂಡಿ ಕೆಲಸ ಮಾಡಿದರೆ ಸಮಾಜ ಉತ್ತಮವಾಗಿ ಬೆಳೆಯಲಿದೆ. ಸಮಾಜದ ಬೇಡಿಕೆಯಂತೆ ದಾವಣಗೆರೆಯ ತುಂಗಭದ್ರಾ ಬಡಾವಣೆಯಲ್ಲಿ ಪರಿಶೀಲನೆ ನಡೆಸಿ, ಸಿಎ ನಿವೇಶನ ಒದಗಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು.

ಉಪ್ಪಾರ ಸಂಘದ ರಾಜ್ಯ ಗೌರವಾಧ್ಯಕ್ಷ ತುರ್ಚಘಟ್ಟ ಬಸವರಾಜಪ್ಪ ಮಾತನಾಡಿ, ಮುಖಂಡರು ಭಿನ್ನತೆ ಕೈಬಿಟ್ಟು ಸಮಾಜದ ಬೆಳವಣಿಗೆಗೆ ಒಂದಾಗಬೇಕು ಎಂದು ತಿಳಿಸಿದರು.

ಜನಪ್ರತಿನಿಧಿಗಳಿಗೆ ನಮ್ಮ ಮತ ಮಾತ್ರ ಬೇಕು. ನಮ್ಮ ಸಮಾಜ ಬೇಡವಾಗಿದೆ. ಕಾರ್ಯಕ್ರಮಕ್ಕೆ ಆಹ್ವಾನಿಸಿದರೆ ಬಾರದೆ ಅವಮಾನಿಸಲಾಗುತ್ತಿದೆ. ಇನ್ನು ಮುಂದೆ ಯಾರೇ ಜನಪ್ರತಿನಿಧಿಗಳು ಬರುವುದಿದ್ದಲ್ಲಿ ಮಾತ್ರವೇ ಆಹ್ವಾನ ಪತ್ರಿಕೆಗಳಲ್ಲಿ ಹೆಸರು ಮುದ್ರಿಸುವುದಾಗಿ ಖಡಾಖಂಡಿತವಾಗಿ ಹೇಳಬೇಕಿದೆ ಎಂದರು.

ಬಿಸಿಎಂ ಇಲಾಖೆ ಜಿಲ್ಲಾ ಅಧಿಕಾರಿ ರೇವಣ್ಣ ಮಾತನಾಡಿ, ಪ್ರತಿಭಾ ಪುರಸ್ಕಾರ ಕಾರ್ಯಕ್ರಮಗಳು ಪೋಷಕರು ಮತ್ತು ಮಕ್ಕಳಿಗೆ ಪ್ರೇರಣೆಯಾಗಬೇಕು. ಪ್ರತಿಭೆಗಳು ಹೆಚ್ಚಬೇಕು ಎಂದು ಆಶಿಸಿದರು.

ಸಮಾಜದ ಪ್ರತಿಭಾನ್ವಿತ ಮಕ್ಕಳನ್ನು ಪುರಸ್ಕರಿಸಲಾಯಿತು. ಮಾಜಿ ಉಪಮೇಯರ್ ಪಿ.ಎಸ್.ಜಯಣ್ಣ, ಕೈದಾಳೆ ಗ್ರಾಪಂ ಅಧ್ಯಕ್ಷ ವೈ.ಟಿ.ಗುರುಪ್ರಸಾದ್ ಮಾತನಾಡಿದರು.

ಶಾಸಕ ಎಸ್.ಎ.ರವೀಂದ್ರನಾಥ್, ಜಿಲ್ಲಾ ಉಪ್ಪಾರ ಸಂಘದ ಅಧ್ಯಕ್ಷ ಎಚ್.ತಿಪ್ಪಣ್ಣ ತುರ್ಚಘಟ್ಟ, ತಾಲೂಕು ಅಧ್ಯಕ್ಷ ಎಸ್.ಸಿದ್ದಲಿಂಗಪ್ಪ ದೊಡ್ಡಬಾತಿ, ತಾಪಂ ಸದಸ್ಯೆ ಮೀನಾ ಶ್ರೀನಿವಾಸ್, ದೊಡ್ಡಬಾತಿ ಗ್ರಾಪಂ ಅಧ್ಯಕ್ಷ ಎಸ್.ಮಂಜುನಾಥ್, ಲೋಕೇಶ, ಎಸ್.ಎ.ಮಾಲತೇಶ್ ಮತ್ತಿತರರಿದ್ದರು.