ದಾವಣಗೆರೆ: ಕಡತಗಳ ವಿಲೇವಾರಿ ವಿಳಂಬದ ವಿಚಾರ ಸೋಮವಾರ ನಡೆದ ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಸದ್ದು ಮಾಡಿತು.
ಸದಸ್ಯ ತೇಜಸ್ವಿ ಪಟೇಲ್ ವಿಷಯ ಪ್ರಸ್ತಾಪಿಸಿ, ಜಿಪಂ ಮಟ್ಟದಲ್ಲಿ ವಿಲೇ ಆಗಬೇಕಾದ ಕಡತಗಳು ಕಳೆದ ಕೆಲವು ತಿಂಗಳಿಂದ ವಿಳಂಬವಾಗುತ್ತಿವೆ. ಇದರಿಂದ ಜನರ ಕೆಲಸಗಳಿಗೆ ತೊಂದರೆಯಾಗುತ್ತಿದೆ ಎಂದು ತಿಳಿಸಿದರು.
ಸಕಾಲ ಯೋಜನೆಯನ್ನು ಜಿ.ಪಂ.ನಲ್ಲೂ ಅನ್ವಯಿಸಿ ಕಡತಗಳನ್ನು ಕಾಲ ಮಿತಿಯೊಳಗೆ ವಿಲೇವಾರಿ ಮಾಡಬೇಕು ಎಂದು ಸಲಹೆ ನೀಡಿದರು.
ಸಿಇಒ ಎಚ್.ಬಸವರಾಜೇಂದ್ರ ಅವರ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸದಸ್ಯ ವೀರಶೇಖರಪ್ಪ, ನಾವು ನೀವೆಲ್ಲ ಜನರ ಕೆಲಸ ಮಾಡಲು ಬಂದಿದ್ದೇವೆ, ನಿಸ್ಪಹವಾಗಿ ಸೇವೆ ಮಾಡಬೇಕು. ಅಭಿವೃದ್ಧಿ ವಿಚಾರದಲ್ಲಿ ವಿಳಂಬ ಮಾಡುವ ಉದ್ದೇಶವೇನು? ಪಿಡಿಒಗಳನ್ನು ಏಕೆ ವರ್ಗಾವಣೆ ಮಾಡಿದಿರಿ ಎಂದು ಪ್ರಶ್ನಿಸಿದರು.
ಸಿಇಒ ಸ್ಥಾನದ ಘನತೆಗೆ ತಕ್ಕಂತೆ ಕೆಲಸ ಮಾಡಿ. ಜನಪ್ರತಿನಿಧಿಗಳಿಗೆ ನೀವು ಗೌರವ ಕೊಡುತ್ತಿಲ್ಲ. ಈ ಹಿಂದೆ ಇದ್ದ ಯಾವ ಸಿಇಒಗಳ ಕಾಲದಲ್ಲೂ ಹೀಗೆ ಆಗಿರಲಿಲ್ಲ ಎಂದು ತಿಳಿಸಿದರು. ಕೆ.ಎಚ್.ಓಬಳಪ್ಪ, ಬಸವಂತಪ್ಪ, ಲೋಕೇಶ್ವರಪ್ಪ ಸೇರಿದಂತೆ ಸದಸ್ಯರು ಪಕ್ಷಭೇದ ಮರೆತು ಧ್ವನಿಗೂಡಿಸಿದರು.
ಅಧ್ಯಕ್ಷೆ ಶೈಲಜಾ ಬಸವರಾಜ್ ಮಾತನಾಡಿ, ತುರ್ತು ಸಂದರ್ಭದಲ್ಲಿ ಕೊರೆದ ಕೊಳವೆಬಾವಿಗಳ ಹಳೆಯ ಬಿಲ್ ಇನ್ನೂ ಪಾವತಿಸಿಲ್ಲ. ಆ ಕಡತಗಳಿಗೆ ಸಿಇಒ ಇನ್ನೂ ಸಹಿ ಮಾಡಿಲ್ಲ. ಇದರಿಂದಾಗಿ ಹೊಸದಾಗಿ ಬೋರ್ ಕೊರೆಯಲು ಯಾರೂ ಮುಂದೆ ಬರುತ್ತಿಲ್ಲ ಎಂದು ತಿಳಿಸಿದರು.
ಕಡತಗಳಿಗೆ ಸಿಇಒ ಸಹಿ ಮಾಡದೇ ಇರುವುದರಿಂದ 1 ಕೋಟಿ ರೂ. ಹಣ ಸರ್ಕಾರಕ್ಕೆ ವಾಪಸ್ ಹೋಗುವ ಪರಿಸ್ಥಿತಿಯಿದೆ. ಒಂದು ರೀತಿಯಲ್ಲಿ ಕಣ್ಣಾಮುಚ್ಚಾಲೆ ಆಟ ನಡೆಯುತ್ತಿದೆ ಎಂದು ಹೇಳಿದರು.
ಸದಸ್ಯರು ತಮ್ಮ ಕಾರ್ಯವೈಖರಿ ಬಗ್ಗೆ ಆಡಿದ ಮಾತುಗಳಿಗೆ ಪ್ರತಿಕ್ರಿಯಿಸಿದ ಸಿಇಒ, ಕಡತ ವಿಲೇವಾರಿಯಲ್ಲಿ ತಮ್ಮಿಂದ ವಿಳಂಬವಾಗಿಲ್ಲ. ಕಚೇರಿಯಲ್ಲಿ ದಾಖಲೆಗಳ ನಿರ್ವಹಣೆ ಸರಿಯಾಗಿ ಆಗುತ್ತಿರಲಿಲ್ಲ, ನಾನು ಬಂದ ನಂತರ ಅದನ್ನು ಸರಿಪಡಿಸಲು ಗಮನ ನೀಡಿದೆ. 629 ಕೊಳವೆಬಾವಿಗಳ ಬಿಲ್ ಪಾವತಿ ಮಾಡಲಾಗಿದೆ ಎಂದರು.
ಸಭೆಯ ಆರಂಭದಲ್ಲಿ ಬಿಜೆಪಿ ಸದಸ್ಯ ಎಂ.ಆರ್.ಮಹೇಶ್ ಮಾತನಾಡಿ, ಟಿಪ್ಪು ಜಯಂತಿ ಹಾಗೂ ಜಮ್ಮು-ಕಾಶ್ಮಿರದ ಆರ್ಟಿಕಲ್ 370ನ್ನು ರದ್ದು ಮಾಡಿದ್ದನ್ನು ಸ್ವಾಗತಿಸಿ, ಭಾರತ್ ಮಾತಾ ಕಿ ಜೈ ಎಂಬ ಘೋಷಣೆ ಕೂಗಿದರು. ಇದರಿಂದಾಗಿ ಸ್ವಲ್ಪ ಹೊತ್ತು ಗದ್ದಲದ ಸನ್ನಿವೇಶ ಸೃಷ್ಟಿಯಾಗಿತ್ತು.
ಹಾಸ್ಟೆಲ್ಗಳಲ್ಲಿ ಅವ್ಯವಹಾರ ಆರೋಪ: ಸಮಾಜ ಕಲ್ಯಾಣ ಇಲಾಖೆಗೆ ಸೇರಿದ ಕೆಲ ಅನುದಾನಿತ ಎಸ್ಸಿ, ಎಸ್ಟಿ ಹಾಸ್ಟೆಲ್ಗಳಲ್ಲಿ ಅವ್ಯವಹಾರ ನಡೆಯುತ್ತಿದೆ ಎಂದು ಆನಗೋಡು ಕ್ಷೇತ್ರದ ಸದಸ್ಯ ಬಸವಂತಪ್ಪ ಆರೋಪಿಸಿದರು. ಶೇ.15ರಿಂದ 20ರಷ್ಟು ಹಾಸ್ಟೆಲ್ಗಳಲ್ಲಿ ಸರಿಯಾಗಿಯೇ ನಡೆಯುತ್ತಿದೆ. ಉಳಿದ ಶೇ.75ರಿಂದ 80ರಷ್ಟು ವಿದ್ಯಾರ್ಥಿ ನಿಲಯಗಳಲ್ಲಿ ಇದು ಕಂಡುಬಂದಿದೆ ಎಂದರು. ಹೆಚ್ಚು ಸಂಖ್ಯೆಯ ವಿದ್ಯಾರ್ಥಿಗಳನ್ನು ತೋರಿಸಿ ಸೌಲಭ್ಯ ಪಡೆಯಲಾಗುತ್ತಿದೆ. ಈ ಹಿಂದೆ ಪಾವತಿಸಲಾಗಿರುವ ಬಿಲ್ಗಳ ಬಗ್ಗೆ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು. ಸಿಇಒ ಉತ್ತರಿಸಿ, ತಂಡವೊಂದನ್ನು ರಚಿಸಿ ದೂರಿನ ಬಗ್ಗೆ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಕೋರಂ ಕೊರತೆ:ಚ ಸಭೆಯ ಆರಂಭದಲ್ಲಿ 1 ಗಂಟೆಗೂ ಹೆಚ್ಚು ಕಾಲ ಕೋರಂ ಕೊರತೆ ಕಾಡಿತು. 11.30ಕ್ಕೆ ಸಭೆ ಆರಂಭವಾದರೂ ಅಗತ್ಯ ಸಂಖ್ಯೆಯ ಸದಸ್ಯರು ಬಂದಿರಲಿಲ್ಲ. ಸದಸ್ಯರ ಕುರ್ಚಿಗಳು ಖಾಲಿ ಇರುವುದನ್ನು ಗಮನಿಸಿದ ಅಧ್ಯಕ್ಷೆ ಶೈಲಜಾ ಬಸವರಾಜ್, ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಕೆಲವು ಸದಸ್ಯರಿಗೆ ದೂರವಾಣಿ ಕರೆ ಮಾಡಿ ಸಭೆಗೆ ಬರುವಂತೆ ಹೇಳುವುದು ಕಂಡುಬಂತು. ಶಾಸಕ ಎಸ್.ಎ.ರವೀಂದ್ರನಾಥ್ ಬಂದ ನಂತರವೂ ಕೋರಂ ಗಾಗಿ ಸ್ವಲ್ಪ ಹೊತ್ತು ಕಾಯಬೇಕಾಯಿತು. ನಾಗರ ಪಂಚಮಿ ಹಬ್ಬ ಇದ್ದುದರಿಂದ ಸದಸ್ಯರ ಸಂಖ್ಯೆ ಕಡಿಮೆಯಿತ್ತು ಎಂಬ ಮಾತು ಕೇಳಿಬಂದಿತು.