ಕಿರಿಯ ವೈದ್ಯರ ಮುಷ್ಕರ ಅಂತ್ಯ

ದಾವಣಗೆರೆ: ಶಿಷ್ಯವೇತನ (ಸ್ಟೈಪಂಡ್) ನೀಡುವಂತೆ ಆಗ್ರಹಿಸಿ ಅ.22ರಿಂದ ಚಿಗಟೇರಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆಸುತ್ತಿದ್ದ ಮುಷ್ಕರವನ್ನು ಕಿರಿಯ ವೈದ್ಯರು ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಗುರುವಾರ ಹಿಂದಕ್ಕೆ ಪಡೆದರು.

ಚಿಗಟೇರಿ ಜಿಲ್ಲಾಸ್ಪತ್ರೆಯ ಅಧೀಕ್ಷಕಿ ಡಾ.ನೀಲಾಂಬಿಕೆ ಅವರು ಮುಷ್ಕರ ಸ್ಥಳಕ್ಕೆ ಬೆಳಗ್ಗೆ ಭೇಟಿ ನೀಡಿ ಸರ್ಕಾರದ ಆದೇಶದ ಬಗ್ಗೆ ತಿಳಿಸಿದರು. ಈ ವರ್ಷದ ಶಿಷ್ಯ ವೇತನವನ್ನು ವೈದ್ಯಕೀಯ ಶಿಕ್ಷಣ ಇಲಾಖೆ ಶೀಘ್ರವೇ ನೀಡಲಿದೆ. ಮುಂದಿನ ವರ್ಷದಿಂದ ಜಿಲ್ಲಾಸ್ಪತ್ರೆಯ ಎಆರ್‌ಎಸ್ ಖಾತೆಯಿಂದ ಕೊಡಬೇಕು ಎಂದು ಸರ್ಕಾರ ಸೂಚಿಸಿದೆ ಎಂದು ಹೇಳಿದರು.

ಜಿಲ್ಲಾಧಿಕಾರಿ ಡಾ.ಗೌತಮ್ ಬಗಾದಿ ಅವರೂ ಭೇಟಿ ನೀಡಿದ್ದರು. ಈ ನಡುವೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರು ಕಿರಿಯ ವೈದ್ಯರನ್ನು ಕರೆಸಿಕೊಂಡು ಮಾತನಾಡಿದರು. ಈ ಹಿನ್ನೆಲೆಯಲ್ಲಿ ಮುಷ್ಕರವನ್ನು ಕೈಬಿಟ್ಟ ಕಿರಿಯ ವೈದ್ಯರು ನಾಳೆಯಿಂದ ಕರ್ತವ್ಯಕ್ಕೆ ಹಾಜರಾಗುವುದಾಗಿ ತಿಳಿಸಿದ್ದಾರೆ.

8 ತಿಂಗಳ ಶಿಷ್ಯ ವೇತನವನ್ನು ಶೀಘ್ರವೇ ಮಂಜೂರು ಮಾಡಬೇಕು. ಮುಂದಿನ ವರ್ಷಗಳಲ್ಲಿಯೂ ವಿಳಂಬ ಮಾಡದೇ ತ್ವರಿತವಾಗಿ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಚಿಗಟೇರಿ ಜಿಲ್ಲಾಸ್ಪತ್ರೆ ಹಾಗೂ ಹೆರಿಗೆ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸರ್ಕಾರಿ ಕೋಟಾದ ಗೃಹ ವೈದ್ಯರು ಹಾಗೂ ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಕಳೆದ 8 ತಿಂಗಳಿಂದ ಶಿಷ್ಯ ವೇತನ (ಸ್ಟೈಪಂಡ್) ತಡೆ ಹಿಡಿಯಲಾಗಿತ್ತು.

ಹಲವು ಬಾರಿ ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನ ಆಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಅ.22ರಿಂದ ಮುಷ್ಕರ ಆರಂಭಿಸಿದ್ದರು. ಇದರಿಂದ ವೈದ್ಯಕೀಯ ಸೇವೆಯಲ್ಲಿ ವ್ಯತ್ಯಯವಾಗಿತ್ತು.

ಮುಂದಿನ ವರ್ಷದಿಂದ ನೀಡುವುದಿಲ್ಲ
ಮುಷ್ಕರ ನಿರತ ಸಿ.ಜಿ.ಆಸ್ಪತ್ರೆ ಕಿರಿಯ ವೈದ್ಯರ ಬೇಡಿಕೆಯಂತೆ ಶಿಷ್ಯ ವೇತನ ನೀಡಲು ಸರ್ಕಾರ ಸಮ್ಮತಿಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಹೇಳಿದರು. ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸರ್ಕಾರ ಹಿಂದಿನ ಒಪ್ಪಂದದಂತೆ ಈ ಬಾರಿಯ ಶಿಷ್ಯ ವೇತನವನ್ನು ನೀಡಲಿದೆ. ಈ ಬಗ್ಗೆ ವೈದ್ಯರಿಗೆ ಮಾಹಿತಿ ನೀಡಲಾಗುವುದು. ಬರುವ ವರ್ಷದಿಂದ ಆಯಾ ಸಂಸ್ಥೆಯವರೇ ಕ್ಲಿನಿಕಲ್ ವೆಚ್ಚ, ಶಿಷ್ಯ ವೇತನ ಭರಿಸಬೇಕಿದೆ ಎಂದರು.